ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿಂದು ಪ್ರಶಸ್ತಿಗಾಗಿ ಬಲಿಷ್ಠ ತಮಿಳುನಾಡು ಹಾಗೂ ಬರೋಡಾ ತಂಡಗಳು ಕಾದಾಡಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅಹಮದಾಬಾದ್(ಜ.31): ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ಹಾಗೂ ಬರೋಡಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಇಲ್ಲಿನ ಮೊಟೇರಾ ಕ್ರೀಡಾಂಗಣ ಭಾನುವಾರ ಉಭಯ ತಂಡಗಳ ಕದನಕ್ಕೆ ವೇದಿಕೆಯಾಗಿದೆ. ಈ ಆವೃತ್ತಿಯ ಟೂರ್ನಿಯ ಆರಂಭದಿಂದಲೂ ತಮಿಳುನಾಡು ತಂಡ ಅತ್ಯುತ್ತಮ ಪ್ರದರ್ಶನ ತೋರಿದ್ದು, ಟ್ರೋಫಿ ಜಯಿಸುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.
ಮೊದಲ ಸೆಮೀಸ್‌ನಲ್ಲಿ ಕಳೆದ ವರ್ಷದ ರನ್ನರ್ ಅಪ್ ತಮಿಳುನಾಡು ತಂಡ, ರಾಜಸ್ಥಾನ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ಗೇರಿದ್ದರೆ, 2ನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಪಂಜಾಬ್ ವಿರುದ್ಧ 25 ರನ್‌ಗಳ ರೋಚಕ ಜಯ ಪಡೆದ ಬರೋಡಾ ತಂಡ ಪ್ರಶಸ್ತಿ ಸುತ್ತಿಗೇರಿದೆ.
ಮುಷ್ತಾಕ್ ಅಲಿ ಟ್ರೋಫಿ: ಫೈನಲ್‌ನಲ್ಲಿ ಪ್ರಶಸ್ತಿಗಾಗಿ ತಮಿಳುನಾಡು, ಬರೋಡಾ ಫೈಟ್
2006-07ರ ಉದ್ಘಾಟನಾ ಆವೃತ್ತಿಯಲ್ಲಿ ತಮಿಳುನಾಡು, ಪಂಜಾಬ್ ಮಣಿಸಿ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಇದೀಗ ಬರೋಡಾ ವಿರುದ್ಧ ಗೆದ್ದು 2ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಉತ್ಸಾಹದಲ್ಲಿದೆ. ಇನ್ನು ಬರೋಡಾ 2012, 14 ರಲ್ಲಿ 2 ಬಾರಿ ಚಾಂಪಿಯನ್ ಆಗಿದ್ದು, 3ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಸ್ಥಳ: ಅಹಮದಾಬಾದ್
ಆರಂಭ: ರಾತ್ರಿ 7ಕ್ಕೆ.