
ಹೈದರಾಬಾದ್: ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ ಸ್ಪೋಟಕ ಬ್ಯಾಟಿಂಗ್ ಹಾಗೂ ವಿದರ್ಭ ವೇಗಿ ಪ್ರಫುಲ್ ಹಿಂಗೆ ಮತ್ತು ಸಕೀಬ್ ಹೊಸೈನ್ ಮಾರಕ ದಾಳಿಯ ನೆರವಿನಿಂದ ಬಲಿಷ್ಠ ರಾಜಸ್ಥಾನ ರಾಯಲ್ಸ್ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡವು 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲ ಓವರ್‌ನಲ್ಲೇ ದಾಖಲೆಯ ಮೂರು ವಿಕೆಟ್ ಕಬಳಿಸಿ ಮಿಂಚಿದ ಪ್ರಫುಲ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ರೂವಾರಿ ಎನಿಸಕೊಂಡರು. ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇದು ಎರಡನೇ ಗೆಲುವಾಗಿದ್ದರೇ, ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ಗೆ ಇದು ಮೊದಲ ಸೋಲು.
ಗೆಲ್ಲಲು 217 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಓವರ್‌ನಲ್ಲೇ ಪ್ರಫುಲ್ ಹಿಂಗೆ ಮಾರಕ ದಾಳಿಗೆ ತಬ್ಬಿಬ್ಬಾಗಿ ಹೋಯಿತು. ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಮೊದಲ ಓವರ್‌ನಲ್ಲೇ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಹಾಗೂ ಲೂನ್ ಡ್ರೆ ಪ್ರಿಟೋರಿಯಸ್ ಮೂವರನ್ನೂ ಖಾತೆ ತೆರೆಯುವ ಮೊದಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ರಾಜಸ್ಥಾನ ರಾಯಲ್ಸ್‌ಗೆ ಮೊದಲ ಓವರ್‌ನಲ್ಲೇ ಬಿಗ್ ಶಾಕ್ ನೀಡಿದರು. ಇದಷ್ಟೇ ಅಲ್ಲದೇ ಐಪಿಎಲ್ ಇತಿಹಾಸದಲ್ಲೇ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ 3 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಹಿರಿಮೆಗೆ ಪ್ರಫುಲ್ ಹಿಂಗೆ ಪಾತ್ರರಾದರು. ಇನ್ನು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸಕೀಬ್ ಹುಸೈನ್ ರಾಯಲ್ಸ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಮೂರನೇ ಓವರ್‌ನಲ್ಲಿ ರಿಯಾನ್ ಪರಾಗ್ 4 ರನ್ ಗಳಿಸಿ, ಪ್ರಫುಲ್‌ಗೆ ನಾಲ್ಕನೇ ಬಲಿಯಾದರು. ಆಗ ರಾಜಸ್ಥಾನ ರಾಯಲ್ಸ್ ತಂಡದ ಸ್ಕೋರ್ 3 ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ ಕೇವಲ 9 ರನ್‌ಗಳಾಗಿದ್ದವು.
ಸತ್ರಾಂಶ 4 ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು ಎರಡಂಕಿ ಮೊತ್ತ ತಲುಪುವ ಮೊದಲೇ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ ಆರನೇ ವಿಕೆಟ್‌ಗೆ ಜತೆಯಾದ ಡೊನೊವನ್ ಪೆರೆರಿಯಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಅಸರೆಯಾದರು. ರಾಜಸ್ಥಾನ ರಾಯಲ್ಸ್ ತಂಡವನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ 72 ಎಸೆತಗಳಲ್ಲಿ 118 ರನ್‌ಗಳ ಜತೆಯಾಟವಾಡಿತು. ಕೇವಲ 22 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 69 ರನ್ ಸಿಡಿಸಿದ ಪೆರಾರಿಯಾ ಅವರನ್ನು ಬಲಿಪಡೆಯುವಲ್ಲಿ ಸಕೀಬ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಜಡೇಜಾ 45 ರನ್ ಗಳಿಸಿ ಇಶಾನ್ ಮಾಲಿಂಗಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರಾಜಸ್ಥಾನದ ಸೋಲು ಖಚಿತವಾಯಿತು. ಕೊನೆಯಲ್ಲಿ ತುಷಾರ್ ದೇಶ್‌ಪಾಂಡೆ ಚುರುಕಿನ ರನ್ ಬಾರಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಪ್ರಫುಲ್ ಹಿಂಗೆ ಹಾಗೂ ಸಕೀಬ್ ಹೊಸೈನ್ ತಲಾ 4 ವಿಕೆಟ್ ಕಬಳಿಸುವ ಮೂಲಕ ಪಾದಾರ್ಪಣೆ ಪಂದ್ಯವನ್ನು ಅತ್ಯಂತ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಇಶಾನ್ ಕಿಶನ್(91) ಶತಕವಂಚಿತ ಬ್ಯಾಟಿಂಗ್ ಹಾಗೂ ಹೆನ್ರಿಚ್ ಕ್ಲಾಸೆನ್(40) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.