
ಮುಂಬೈ: ಮುಂಬೈ ಇಂಡಿಯನ್ಸ್‌ನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಐಪಿಎಲ್ ಕೆರಿಯರ್‌ನಲ್ಲೇ ಅತ್ಯಂತ ವಿಚಿತ್ರವಾದ ಹಂತವನ್ನು ಎದುರಿಸುತ್ತಿದ್ದಾರೆ. ಕಳೆದ ಐದು ಐಪಿಎಲ್ ಪಂದ್ಯಗಳಲ್ಲಿ ಬುಮ್ರಾ ಒಂದೇ ಒಂದು ವಿಕೆಟ್ ಕೂಡ ಪಡೆದಿಲ್ಲ. 2025ರ ಸೀಸನ್‌ನ ಕೊನೆಯ ಪಂದ್ಯದಲ್ಲಿ ಶುರುವಾದ ಈ ವಿಕೆಟ್ ಬರ, 2026ರ ಐಪಿಎಲ್‌ನ ನಾಲ್ಕು ಪಂದ್ಯಗಳ ನಂತರವೂ ಮುಂದುವರಿದಿದೆ. ಒಂದು ದಶಕದ ತಮ್ಮ ಐಪಿಎಲ್ ಕೆರಿಯರ್‌ನಲ್ಲಿ ಬುಮ್ರಾ ಇದೇ ಮೊದಲ ಬಾರಿಗೆ ಇಷ್ಟು ದೀರ್ಘ ಕಾಲ (122 ಎಸೆತಗಳು) ವಿಕೆಟ್ ಪಡೆಯದೆ ಉಳಿದಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ 14 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಬುಮ್ರಾಗೆ ಮುಂಬೈ ನೀಲಿ ಜೆರ್ಸಿಯಲ್ಲಿ ಏನಾಯ್ತು ಅಂತ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಬುಮ್ರಾ ಅವರ ಈ ವಿಕೆಟ್ ಬರಕ್ಕೆ ಮುಖ್ಯವಾಗಿ ಮೂರು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಇದರಲ್ಲಿ ಮೊದಲನೆಯದು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ತಂತ್ರಗಾರಿಕೆ.
ನಾಯಕ ಹಾರ್ದಿಕ್ ಪಾಂಡ್ಯ, ಬುಮ್ರಾರನ್ನು ಬಳಸಿಕೊಳ್ಳುವ ರೀತಿಯಲ್ಲಿ ಯಾವುದೇ ಸ್ಪಷ್ಟ ಯೋಜನೆ ಹೊಂದಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಪ್ರತಿ ಪಂದ್ಯದಲ್ಲೂ ಅವರನ್ನು ಬೇರೆ ಬೇರೆ ಓವರ್‌ಗಳಲ್ಲಿ ಬೌಲಿಂಗ್‌ಗೆ ಇಳಿಸಲಾಗುತ್ತಿದೆ. ಉದಾಹರಣೆಗೆ, ಮುಂಬೈ ಗೆದ್ದ ಕೋಲ್ಕತಾ ವಿರುದ್ಧದ ಮೊದಲ ಪಂದ್ಯದಲ್ಲಿ ಬುಮ್ರಾ 5, 12, 18 ಮತ್ತು 20ನೇ ಓವರ್‌ಗಳನ್ನು ಬೌಲ್ ಮಾಡಿದ್ದರು. ಆದರೆ, ಆರ್‌ಸಿಬಿ ವಿರುದ್ಧ 4, 6, 17 ಮತ್ತು 19ನೇ ಓವರ್‌ಗಳನ್ನು ಎಸೆದಿದ್ದರು. ಈ ಅನಿಶ್ಚಿತತೆ ಬುಮ್ರಾ ಅವರ ಲಯವನ್ನು ಹಾಳುಮಾಡುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸುವಾಗ ಬುಮ್ರಾಗೆ ಸ್ಪಷ್ಟವಾದ ಜವಾಬ್ದಾರಿ ನೀಡುತ್ತಿದ್ದರು.
ಎರಡನೆಯದಾಗಿ, ಎದುರಾಳಿ ಬ್ಯಾಟ್ಸ್‌ಮನ್‌ಗಳು ಬುಮ್ರಾ ಓವರ್‌ಗಳಲ್ಲಿ ರಿಸ್ಕ್ ತೆಗೆದುಕೊಳ್ಳದೆ, ವಿಕೆಟ್ ಉಳಿಸಿಕೊಂಡು ಎಚ್ಚರಿಕೆಯಿಂದ ಆಡುತ್ತಿದ್ದಾರೆ. ಅವರ ಓವರ್‌ಗಳನ್ನು ಮುಗಿಸಿ, ಉಳಿದ ಬೌಲರ್‌ಗಳ ಮೇಲೆ ದಾಳಿ ಮಾಡುವ ತಂತ್ರವನ್ನು ಎದುರಾಳಿ ತಂಡಗಳು ಯಶಸ್ವಿಯಾಗಿ ಬಳಸುತ್ತಿವೆ. ಇದು ಕೂಡ ಬುಮ್ರಾ ವಿಕೆಟ್ ಪಡೆಯದಿರಲು ಒಂದು ಕಾರಣವಾಗಿದೆ.
ಮೂರನೆಯದಾಗಿ, ಮುಂಬೈ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಹೇಳುವ ಪ್ರಕಾರ, ವಿಕೆಟ್ ಪಡೆಯುವ ಧಾವಂತದಲ್ಲಿ ಬುಮ್ರಾ ಸೇರಿದಂತೆ ಇತರ ಬೌಲರ್‌ಗಳು ಅತಿಯಾದ ವೇರಿಯೇಷನ್‌ಗಳನ್ನು ಬಳಸುತ್ತಿದ್ದಾರೆ. ತಮ್ಮ ಪ್ರಮುಖ ಅಸ್ತ್ರವಾದ 'ಸ್ಟಾಕ್ ಬಾಲ್' ಮೇಲೆ ನಂಬಿಕೆ ಇಡುವ ಬದಲು, ಹೆಚ್ಚು ಪ್ರಯೋಗಗಳನ್ನು ಮಾಡುತ್ತಿರುವುದು ವಿಕೆಟ್ ಸಿಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತಿದೆ ಎಂಬುದು ಮಾಲಿಂಗ ಅವರ ಅಭಿಪ್ರಾಯ.
ಆದರೆ, ಬುಮ್ರಾ ವಿಕೆಟ್ ಪಡೆಯದಿರುವ ಬಗ್ಗೆ ಮುಂಬೈ ತಂಡ ಹೆಚ್ಚು ಚಿಂತಿಸಬೇಕಾಗಿಲ್ಲ ಎನ್ನುತ್ತಾರೆ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್. "ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವುದಕ್ಕಿಂತ ರನ್ ನಿಯಂತ್ರಿಸುವುದು ಮುಖ್ಯ" ಎಂದು ಅಶ್ವಿನ್ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬುಮ್ರಾ ನಿಖರವಾಗಿ ಯಾರ್ಕರ್‌ಗಳನ್ನು ಎಸೆಯುವುದು ಮತ್ತು ಎದುರಾಳಿಗಳನ್ನು ಕಟ್ಟಿಹಾಕುವುದು ವಿಕೆಟ್ ಪಡೆಯುವುದಕ್ಕಿಂತ ಹೆಚ್ಚು ಮುಖ್ಯ. ವಾಂಖೆಡೆಯಂತಹ ಸ್ಟೇಡಿಯಂಗಳಲ್ಲಿ ರನ್ ನಿಯಂತ್ರಿಸುವುದೇ ದೊಡ್ಡ ಸವಾಲು ಎಂದು ಅಶ್ವಿನ್ ಹೇಳಿದ್ದಾರೆ.
ಬುಮ್ರಾ ಅವರ ಕಳಪೆ ಫಾರ್ಮ್ ಮತ್ತು ಹಾರ್ದಿಕ್ ಅವರ ನಾಯಕತ್ವದ ಎಡವಟ್ಟುಗಳಿಂದ ಮುಂಬೈ ಇಂಡಿಯನ್ಸ್ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮುಂಬೈ ಗೆದ್ದಿರುವುದು ಕೇವಲ ಒಂದರಲ್ಲಿ ಮಾತ್ರ. ಮುಂಬರುವ ಪಂದ್ಯಗಳಲ್ಲಿ ಬುಮ್ರಾ ಫಾರ್ಮ್‌ಗೆ ಮರಳದಿದ್ದರೆ, ಮುಂಬೈ ತಂಡ ಪ್ಲೇ-ಆಫ್ ಕನಸನ್ನು ಕೈಬಿಡಬೇಕಾಗಬಹುದು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 183 ವಿಕೆಟ್‌ಗಳನ್ನು ಪಡೆದಿರುವ ಬುಮ್ರಾ, ಏಪ್ರಿಲ್ 16 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಾದರೂ ತಮ್ಮ ವಿಕೆಟ್ ಬರವನ್ನು ನೀಗಿಸುತ್ತಾರಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.