
ಹೈದರಾಬಾದ್: ವಿದರ್ಭ ಮೂಲದ ನೀಳಕಾಯದ ವೇಗಿ ಪ್ರಫುಲ್ ಹಿಂಗೆ ಚೊಚ್ಚಲ ಐಪಿಎಲ್ ಪಂದ್ಯದಲ್ಲಿಯೇ ಬಿರುಗಾಳಿ ಎಬ್ಬಿಸಿದ್ದಾರೆ. ಬಲಿಷ್ಠ ರಾಜಸ್ಥಾನ ರಾಯಲ್ಸ್ ಎದುರು ಮೊದಲ ಓವರ್‌ನಲ್ಲೇ ವೈಭವ್ ಸೂರ್ಯವಂಶಿ ಸೇರಿದಂತೆ ಮೂರು ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಅವಿಸ್ಮರಣೀಯ ಪಾದಾರ್ಪಣೆ ಮಾಡಿದ್ದಾರೆ. ಪವರ್ ಪ್ಲೇ ಅಂತ್ಯದ ವೇಳೆಗೆ ರಾಜಸ್ಥಾನ ರಾಯಲ್ಸ್ 40 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು, ಪ್ರಫುಲ್ ಹಿಂಗೆ ನಾಲ್ಕು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಮ್ಯಾಚ್‌ನಲ್ಲಿ 217 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಪ್ರಫುಲ್ ಹಿಂಗೆ ಮೊದಲ ಓವರ್‌ನಲ್ಲೇ ಬಿಗ್ ಶಾಕ್ ನೀಡಿದ್ದಾರೆ. ಇನ್‌ಫಾರ್ಮ್ ಬ್ಯಾಟರ್ 15 ವರ್ಷದ ವೈಭವ್ ಸೂರ್ಯವಂಶಿ ತಾನೆದುರಿಸಿದ ಮೊದಲ ಎಸೆತದಲ್ಲೇ ಪ್ರಫುಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಲ್ಕನೇ ಎಸೆತದಲ್ಲಿ ಮತ್ತೋರ್ವ ಇನ್‌ಫಾರ್ಮ್ ಬ್ಯಾಟರ್ ಧ್ರುವ್ ಜುರೆಲ್ ಖಾತೆ ತೆರೆಯುವ ಮುನ್ನವೇ ಕ್ಲೀನ್ ಬೌಲ್ಡ್ ಅಗಿ ಪೆವಿಲಿಯನ್ ಸೇರಿದರು. ಇನ್ನು ಲೂನ್ ಡ್ರೆ ಪ್ರಿಟೋರಿಯಸ್ ಕೂಡಾ ಮೊದಲ ಓವರ್‌ನಲ್ಲೇ ಖಾತೆ ತೆರೆಯದೇ ನಿತೀಶ್ ರೆಡ್ಡಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
19 ಸೀಸನ್ ಕಂಡಿರುವ ಐಪಿಎಲ್‌ನಲ್ಲಿ ಇದುವರೆಗೂ ಯಾವೊಬ್ಬ ಬೌಲರ್ ಕೂಡಾ ಮೊದಲ ಓವರ್‌ನಲ್ಲೇ 3 ವಿಕೆಟ್ ಕಬಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ವಿದರ್ಭ ಮೂಲದ ಯುವ ವೇಗಿ ತಾನಾಡುತ್ತಿರುವ ಚೊಚ್ಚಲ ಐಪಿಎಲ್‌ನ ಮೊದಲ ಓವರ್‌ನಲ್ಲೇ 3 ವಿಕೆಟ್ ಕಬಳಿಸುವ ಮೂಲಕ ಇದುವರೆಗೂ ಯಾವ ಬೌಲರ್ ಕೂಡಾ ಮಾಡಿರದ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಪ್ರಫುಲ್ ತಾವು ಮಾಡಿದ ಎರಡನೇ ಓವರ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ವಿಕೆಟ್ ಕಬಳಿಸುವ ಮೂಲಕ ಬಲವಾದ ಪೆಟ್ಟು ನೀಡಿದರು.
ಮತ್ತೊಂದು ತುದಿಯಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಕೀಬ್ ಹುಸೇನ್, ರಾಜಸ್ಥಾನ ರಾಯಲ್ಸ್ ತಂಡದ ಮತ್ತೋರ್ವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು.
ಸದ್ಯ 9 ಓವರ್ ಅಂತ್ಯದ ವೇಳೆಗೆ ರಾಜಸ್ಥಾನ ರಾಯಲ್ಸ್ ತಂಡವು 5 ವಿಕೆಟ್ ಕಳೆದುಕೊಂಡು 62 ರನ್ ಬಾರಿಸಿದೆ. ಆಲ್ರೌಂಡರ್ ರವೀಂದ್ರ ಜಡೇಜಾ 23 ಹಾಗೂ ಡೊನಾವನ್ ಪೆರಾರಿಯಾ 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.