ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಫಿಲ್ ಸಾಲ್ಟ್ ಕೇವಲ 10 ರನ್ ಗಳಿಸಿ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.
ಕೋಲ್ಕತಾ(ಏ.16): ಭರ್ಜರಿ ಬ್ಯಾಟಿಂಗ್ ಲಯದಲ್ಲಿರುವ ಸುನಿಲ್ ನರೈನ್, ರಾಜಸ್ಥಾನ ರಾಯಲ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಸುನಿಲ್ ನರೈನ್ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ನರೈನ್ ಬಾರಿಸಿದ ಸ್ಪೋಟಕ ಶತಕದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 223 ರನ್ ಬಾರಿಸಿದ್ದು, ರಾಜಸ್ಥಾನ ರಾಯಲ್ಸ್‌ಗೆ ಕಠಿಣ ಗುರಿ ನೀಡಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಫಿಲ್ ಸಾಲ್ಟ್ ಕೇವಲ 10 ರನ್ ಗಳಿಸಿ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.
ನರೈನ್-ರಘುವಂಶಿ ಜುಗಲ್ಬಂದಿ: ಕೇವಲ 21 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ತಂಡಕ್ಕೆ ಎರಡನೇ ವಿಕೆಟ್‌ಗೆ ಸುನಿಲ್ ನರೈನ್ ಹಾಗೂ ಅಂಗ್‌ಕೃಷ್ ರಘುವಂಶಿ ಸ್ಪೋಟಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ 43 ಎಸೆತಗಳನ್ನು ಎದುರಿಸಿ 85 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ರಘುವಂಶಿ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಸಹಿತ 30 ರನ್ ಬಾರಿಸಿ ಕುಲ್ದಿಪ್ ಸೆನ್‌ಗೆ ವಿಕೆಟ್ ಒಪ್ಪಿಸಿದರು.
ಈಡನ್ ಗಾರ್ಡನ್ಸ್‌ನಲ್ಲಿ ನರೈನ್ ಶತಕ: ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಲಯದಲ್ಲಿರುವ ಸುನಿಲ್ ನರೈನ್, ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ರಾಜಸ್ಥಾನ ರಾಯಲ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ನರೈನ್ ಕೇವಲ 49 ಎಸೆತಗಳನ್ನು ಎದುರಿಸಿ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದರು. ಬ್ರೆಂಡನ್ ಮೆಕ್ಕಲಂ, ವೆಂಕಟೇಶ್ ಅಯ್ಯರ್ ಬಳಿಕ ಕೆಕೆಆರ್ ಪರ ಶತಕ ಸಿಡಿಸಿದ ಮೂರನೇ ಬ್ಯಾಟರ್ ಎನ್ನುವ ಹಿರಿಮೆಗೆ ನರೈನ್ ಪಾತ್ರರಾದರು. ಅಂತಿಮವಾಗಿ ನರೈನ್ 56 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 109 ರನ್ ಸಿಡಿಸಿ ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಕೊನೆಯಲ್ಲಿ ವೆಂಕಟೇಶ್ ಅಯ್ಯರ್ ಅಜೇಯ 20 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.