
ಮುಂಬೈ: ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರಬಹುದು. ಆದರೆ, ಟೀಂ ಇಂಡಿಯಾದ ಫೀಲ್ಡರ್‌ಗಳ ತಪ್ಪುಗಳ ಬಗ್ಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೀಲ್ಡಿಂಗ್‌ನಲ್ಲಿ ತಂಡಕ್ಕೆ ಹೊರೆಯಾಗುವ ಆಟಗಾರರನ್ನು ಹೊರಗಿಡಲು ಸೆಲೆಕ್ಟರ್‌ಗಳು ಹಿಂಜರಿಯಬಾರದು ಅಂತ ಗವಾಸ್ಕರ್ ಆಗ್ರಹಿಸಿದ್ದಾರೆ.
ಜಿಂಬಾಬ್ವೆ ಸರಣಿಗೂ ಮುನ್ನ ಐರ್ಲೆಂಡ್ ವಿರುದ್ಧ (0-2) ಮತ್ತು ಇಂಗ್ಲೆಂಡ್ ವಿರುದ್ಧ (0-4, 1-2) ಭಾರತ ಸೋಲು ಕಂಡಿತ್ತು. ಇದಕ್ಕೆಲ್ಲಾ ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಮತ್ತು ಕಳಪೆ ಫೀಲ್ಡಿಂಗ್ ಮುಖ್ಯ ಕಾರಣ ಅಂತ ಗವಾಸ್ಕರ್ 'ಸ್ಪೋರ್ಟ್ಸ್ ಸ್ಟಾರ್' ಅಂಕಣದಲ್ಲಿ ಬರೆದಿದ್ದಾರೆ.
ಫೀಲ್ಡಿಂಗ್‌ನಲ್ಲಿ ಕಳಪೆಯಾಗಿರುವ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಜಾಗವಿಲ್ಲ ಎಂದು ಗವಾಸ್ಕರ್ ನೇರವಾಗಿ ಹೇಳಿದ್ದಾರೆ. "ಒಬ್ಬ ಆಟಗಾರ ಫೀಲ್ಡಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿದ್ದರೆ, ಅವನನ್ನು ತಂಡದಿಂದ ಹೊರಹಾಕಲೇಬೇಕು. ಮೂರ್ನಾಲ್ಕು ಆಟಗಾರರ ಬಳಿ ಚೆಂಡು ಹೋಗದಿರಲಿ ಎಂದು ಪ್ರಾರ್ಥಿಸುತ್ತಾ, ಅವರನ್ನು ಮೈದಾನದಲ್ಲಿ ಬಚ್ಚಿಡಲು ಯಾವ ಕ್ಯಾಪ್ಟನ್‌ಗೂ ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ. ಐಪಿಎಲ್‌ನಲ್ಲಿ ಮತ್ತು ನಂತರ ಟೀಂ ಇಂಡಿಯಾ ಪರ ಆಡುವಾಗಲೂ ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟ ಶಿವಂ ದುಬೆ ಸೇರಿದಂತೆ ಹಲವು ಆಟಗಾರರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಗವಾಸ್ಕರ್ ಈ ಟೀಕೆ ಮಾಡಿದ್ದಾರೆ. ಇದೇ ವೇಳೆ, ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಸೋಲಲು ಕಾರಣವಾದ ಭಾರತೀಯ ಬ್ಯಾಟಿಂಗ್ ಪಡೆಯ ಧೋರಣೆಯನ್ನೂ ಗವಾಸ್ಕರ್ ಪ್ರಶ್ನಿಸಿದ್ದಾರೆ.
"ಬ್ಯಾಟರ್‌ಗಳು ತಮ್ಮ ಸ್ವಂತ ಇಮೇಜ್‌ಗೋಸ್ಕರ ಆಡದೆ, ಚೆಂಡಿನ ಮೆರಿಟ್‌ಗೆ ತಕ್ಕಂತೆ ಆಡಬೇಕು. ಟಿ20ಯಂತೆ ಮೊದಲಿನಿಂದಲೇ ಬಾರಿಸಲು ಹೋಗದೆ, ಏಕದಿನ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಕಟ್ಟಲು ಸಮಯ ತೆಗೆದುಕೊಳ್ಳಬೇಕು" ಅಂತ ಗವಾಸ್ಕರ್ ಸಲಹೆ ನೀಡಿದ್ದಾರೆ. "380ಕ್ಕೂ ಹೆಚ್ಚು ರನ್‌ಗಳ ದೊಡ್ಡ ಗುರಿ ಬೆನ್ನಟ್ಟುವಾಗಲೂ ಸ್ವಲ್ಪ ತಾಳ್ಮೆ ಇರಬೇಕು. ಎದುರಾಳಿ ತಂಡದ ಪ್ರಮುಖ ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿ, ದುರ್ಬಲ ಬೌಲರ್‌ಗಳನ್ನು ಟಾರ್ಗೆಟ್ ಮಾಡಿ ರನ್ ಗಳಿಸುವ ತಂತ್ರಗಾರಿಕೆ ಬೇಕು. ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ 388 ರನ್ ಬೆನ್ನಟ್ಟಿತ್ತು. 39 ಓವರ್‌ಗಳಲ್ಲಿ 260/1 ಎಂಬ ಉತ್ತಮ ಸ್ಥಿತಿಯಲ್ಲಿದ್ದರೂ, ಕೊನೆಗೆ ಸೋಲು ಕಂಡಿತ್ತು. ಇಂತಹ ತಪ್ಪುಗಳನ್ನು ನಿಲ್ಲಿಸಿ, ತಂಡ 'ಸ್ಮಾರ್ಟ್ ಕ್ರಿಕೆಟ್' ಆಡಬೇಕು" ಎಂದು ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.
ಹರಾರೆ: ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ 2 ಅರ್ಧಶತಕ ಸಿಡಿಸಿರುವ 15ರ ಆಟಗಾರ ವೈಭವ್ ಸೂರ್ಯವಂಶಿಯನ್ನು ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಕೊಂಡಾಡಿದ್ದಾರೆ. ‘ಕಳೆದ ಆರು ತಿಂಗಳಲ್ಲಿ ವೈಭವ್ ಅವರ ಆಟದ ಅರಿವು ಹೆಚ್ಚಾಗಿದೆ. ಒತ್ತಡ ನಿಭಾಯಿಸುವಲ್ಲಿ ಅವರು ಪ್ರವೀಣತೆ ಸಾಧಿಸುತ್ತಿದ್ದಾರೆ’ ಎಂದು ಹಾಡಿಹೊಗಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಒಬ್ಬ ವ್ಯಕ್ತಿಯಾಗಿ ಅವರು ವಿಕಸನಗೊಳ್ಳುತ್ತಿರುವ ರೀತಿ ಪ್ರಭಾವ ಬೀರುವಂತದ್ದು. ಅವರು ಈಗಿನ್ನೂ 15 ವರ್ಷದ ಹುಡುಗ. ತಮ್ಮದೇ ಆದ ರೀತಿಯಲ್ಲಿ ಆಟವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ತಂಡಕ್ಕೆ ತಮ್ಮಿಂದ ಸಾಧ್ಯವಿರುವ ಎಲ್ಲಾ ಕೊಡುಗೆ ನೀಡಬೇಕು ಎನ್ನುವ ಶ್ರದ್ಧೆ, ಉತ್ಸಾಹ ಹೊಂದಿದ್ದಾರೆ’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.