
ಮುಂಬೈ: ಈ ವರ್ಷಾಂತ್ಯಕ್ಕೆ ನಡೆಯಲಿರುವ ಚೊಚ್ಚಲ ಆವೃತ್ತಿಯ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) ಟಿ20 ಟೂರ್ನಿ ಯಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್ ಸೇರಿ ಪ್ರಮುಖರು ಆಡಲಿದ್ದಾರೆ. ಇವರಿಬ್ಬರೂ ಲೀಗ್‌ನ ಕಮಿಷನರ್‌ಗಳಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯ ಪಂದ್ಯಗಳು ಮುಂಬೈ, ಲಖನೌ, ರಾಯ್ಪುರದಲ್ಲಿ ನಡೆಯಲಿವೆ. ಈ ಟೂರ್ನಿ ಇನ್ನು ಪ್ರತಿವರ್ಷ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಲೀಗ್ ಬಗ್ಗೆ ಮಾತನಾಡಿರುವ ಸಚಿನ್, 'ಕ್ರೀಡಾಪಟುಗಳು ಎಂದಿಗೂ ಹೃದಯದಿಂದ ನಿವೃತ್ತಿ ಹೊಂದುವುದಿಲ್ಲ. ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಕಾಯುತ್ತಿದ್ದೇನೆ. ಭಾರತವನ್ನು ಪ್ರತಿನಿಧಿಸುವಾಗ ಅತ್ಯುತ್ತಮವಾಗಿ ಕ್ರಿಕೆಟ್ ಆಡಲು ಮತ್ತು ದೇಶಕ್ಕಾಗಿ ಗೆಲ್ಲಲು ಪ್ರಯತ್ನಿಸುತ್ತೇವೆ' ಎಂದಿದ್ದಾರೆ.
ಒಂದೇ ದಿನ 5 ವಿಶ್ವದಾಖಲೆ; ಕುತೂಹಲಘಟ್ಟದಲ್ಲಿ ಕಾನ್ಪುರ ಟೆಸ್ಟ್!
ಆಫ್ರಿಕಾ ವಿರುದ್ಧ ಚೊಚ್ಚಲ ಟಿ20 ಗೆದ್ದ ಐರ್ಲೆಂಡ್
ಅಬುಧಾಬಿ: ಟಿ20 ಕ್ರಿಕೆಟ್‌ನಲ್ಲಿ ಐರ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಗೆಲುವು ಸಾಧಿಸಿದೆ. ಸೋಮವಾರ ನಡೆದ ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ 10 ರನ್ ಜಯಗಳಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿ 1-1ರಲ್ಲಿ ಮುಕ್ತಾಯಗೊಂಡಿತು.
ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 6 ವಿಕೆಟ್‌ಗೆ 195 ರನ್ ಕಲೆಹಾಕಿತು. ರಾಸ್ ಅಡೈರ್ 58 ಎಸೆತಗಳಲ್ಲಿ 100, ನಾಯಕ ಪಾಲ್ ಸ್ಟಿರ್ಲಿಂಗ್ 52 ರನ್ ಬಾರಿಸಿದರು. ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ 9 ವಿಕೆಟ್‌ಗೆ 185 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರೀಜಾ ಹೆಂಡ್ರಿಕ್ಸ್ 51, ಮ್ಯಾಥ್ಯೂ ಬ್ರೀಟ್ಜ್‌ಕೆ 51 ರನ್ ಸಿಡಿಸಿದರು. ಮಾರ್ಕ್ ಅಡೈರ್ 4 ವಿಕೆಟ್ ಕಿತ್ತರು.
ಮಹಿಳಾ ಟಿ20 ವಿಶ್ವಕಪ್: ಅಂಪೈರ್, ಮ್ಯಾಚ್ ರೆಫ್ರಿ, ಎಲ್ಲರೂ ಮಹಿಳೆಯರು!
ದುಬೈ: ಅ.3ರಿಂದ ಯುಎಇಯಲ್ಲಿ ಆರಂಭಗೊಳ್ಳಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಅಂಪೈರ್, ಮ್ಯಾಚ್ ರೆಫ್ರಿಗಳು ಮಹಿಳೆಯರೇ ಆಗಿರಲಿದ್ದಾರೆ. ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) 10 ಅಂಪೈರ್‌ಗಳು ಹಾಗೂ 3 ಮ್ಯಾಚ್ ರೆಫ್ರಿಗಳ ಹೆಸರು ಪ್ರಕಟಿಸಿತು. ಇದರಲ್ಲಿ ಭಾರತದ ಇಬ್ಬರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಒಂದೇ ದಿನದಲ್ಲಿ ಒಂದಲ್ಲ, ಎರಡಲ್ಲ, 4 ಟೆಸ್ಟ್ ವಿಶ್ವದಾಖಲೆ ಬ್ರೇಕ್ ಮಾಡಿದ ಟೀಂ ಇಂಡಿಯಾ!
ಅಂಪೈರ್ ಆಗಿ ವೃಂದಾ ರಾಣಿ, ರೆಫ್ರಿಯಾಗಿ ಜಿ.ಎಸ್.ಲಕ್ಷ್ಮಿ ಆಯ್ಕೆಯಾಗಿದ್ದಾರೆ. ಅ.6ರಂದು ನಡೆಯಲಿರುವ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ದ.ಆಫ್ರಿಕಾ ಲಾರೆನ್ ಅಜೆನ್‌ಬಾಗ್, ಆಸ್ಟ್ರೇಲಿಯಾದ ಎಲೊಯಿಸ್ ಶೆರಿಡಾನ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ತಿಳಿಸಿದೆ. 9ನೇ ಆವೃತ್ತಿ ಟೂರ್ನಿ ಅ.20ಕ್ಕೆ ಕೊನೆಗೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.