ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಕಾನ್ಪುರ: ಮಳೆಯ ಕಾರಣದಿಂದ ಎರಡು ದಿನಗಳ ಕಾಲ ಒಂದೇ ಒಂದು ಎಸೆತ ಕಾಣದೇ ಪಂದ್ಯ ಸ್ಥಗಿತವಾಗಿದ್ದರೂ, ಕಾನ್ಪುರ ಟೆಸ್ಟ್ ಇದೀಗ ಕುತೂಹಲದ ಕೇಂದ್ರಬಿಂದು ಎನಿಸಿಕೊಂಡಿದೆ. ನಾಲ್ಕನೇ ದಿನದಾಟದಲ್ಲಿ 85 ಓವರ್‌ಗಳ ಪಂದ್ಯಾಟ ನಡೆದಿದ್ದು ಉಭಯ ತಂಡಗಳಿಂದ ಬರೋಬ್ಬರಿ 437 ರನ್ ದಾಖಲಾಗಿದ್ದರೇ, 18 ವಿಕೆಟ್‌ಗಳು ಪತನವಾಗಿದೆ. ನಾಲ್ಕನೇ ದಿನದಾಟದಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 26 ರನ್ ಗಳಿಸಿದ್ದು ಒಟ್ಟಾರೆ ಇನ್ನೂ 26 ರನ್‌ಗಳ ಹಿನ್ನಡೆಯಲ್ಲಿದೆ.
ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, 5 ವಿಶ್ವದಾಖಲೆಯೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 285 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಕಾನ್ಪುರ ಟೆಸ್ಟ್‌ನಲ್ಲಿ ಭಾರತ ನಾಲ್ಕನೇ ದಿನದಾಟದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ 50, ಅತಿವೇಗದ 100, ಅತಿವೇಗದ 150, ಅತಿವೇಗದ 200 ಹಾಗೂ ಅತಿವೇಗದ 250 ರನ್ ಬಾರಿಸುವ ಮೂಲಕ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿತು.
ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಕೇವಲ 51 ಎಸೆತಗಳಲ್ಲಿ 72 ರನ್ ಸಿಡಿಸಿದರೆ, ಶುಭ್‌ಮನ್ ಗಿಲ್ 39, ವಿರಾಟ್ ಕೊಹ್ಲಿ 47 ಹಾಗೂ ಕೆ ಎಲ್ ರಾಹುಲ್ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 68 ರನ್ ಸಿಡಿಸಿದರು. ಅಂತಿಮವಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 34.4 ಓವರ್‌ಗಳ ಬ್ಯಾಟಿಂಗ್ ಮಾಡಿ 9 ವಿಕೆಟ್ ಕಳೆದುಕೊಂಡು 285 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 52 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ ತಂಡಕ್ಕೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶಾಕ್ ನೀಡಿದ್ದು, ಝಾಕಿರ್ ಹಸನ್ ಹಾಗೂ ನೈಟ್ ವಾಚ್‌ಮನ್ ಹಸನ್ ಮೆಹಮೂದ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಎಲ್ಲರ ಚಿತ್ತ ಕೊನೆಯ ದಿನದಾಟದ ಮೇಲೆ ನಿಂತಿದೆ.
