ಕಾನ್ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಎದುರಿನ ಟೆಸ್ಟ್ ಪಂದ್ಯದ 4ನೇ ದಿನ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 4 ಅಮೂಲ್ಯ ವಿಶ್ವದಾಖಲೆ ನಿರ್ಮಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. ಮಳೆಯ ಅಡಚಣೆಯ ನಡುವೆಯೂ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು ವಿಶ್ವದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಹೌದು, ಬಾಂಗ್ಲಾದೇಶವನ್ನು ಕೇವಲ 233 ರನ್‌ಗಳಿಗೆ ನಿಯಂತ್ರಿಸಿ, ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದೆ. ಆರಂಭದಲ್ಲೇ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ 3 ಓವರ್‌ನಲ್ಲೇ 50+ ರನ್ ಬಾರಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ರೋಹಿತ್-ಜೈಸ್ವಾಲ್ ಜೋಡಿ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 50+ ರನ್ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದರು. ಈ ಮೊದಲು 2024ರಲ್ಲೇ ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಎದುರು 26 ಎಸೆತಗಳನ್ನು ಎದುರಿಸಿ 50+ ರನ್ ಬಾರಿಸಿದ ಸಾಧನೆ ಮಾಡಿತ್ತು.
ಧೋನಿ ಶಿಷ್ಯನಿಗೆ ಟೀಂ ಇಂಡಿಯಾದಲ್ಲಿ ಪದೇ ಪದೇ ಅನ್ಯಾಯ!
ಅತಿವೇಗದ ಶತಕ:
ಇಷ್ಟಕ್ಕೇ ಸುಮ್ಮನಾಗದ ಟೀಂ ಇಂಡಿಯಾ, ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ವಿಶ್ವದಾಖಲೆಯನ್ನೂ ನಿರ್ಮಿಸಿದೆ. ಟೀಂ ಇಂಡಿಯಾ 61 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದೆ. ಈ ಮೂಲಕ ತನ್ನದೇ ಹೆಸರಿನಲ್ಲಿದ್ದ ದಾಖಲೆಯನ್ನು ಟೀಂ ಇಂಡಿಯಾ ಉತ್ತಮಪಡಿಸಿಕೊಂಡಿದೆ. ಹೌದು, ಈ ಮೊದಲು ಟೀಂ ಇಂಡಿಯಾ, 2023ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ಟೀಂ ಇಂಡಿಯಾ 74 ಎಸೆತಗಳನ್ನು ಎದುರಿಸಿ ಶತಕದ ಗಡಿ ದಾಟಿತ್ತು. ಇದೀಗ ಆ ದಾಖಲೆ ಮತ್ತಷ್ಟು ಉತ್ತಮಗೊಂಡಿದೆ.
ಟೆಸ್ಟ್‌ನಲ್ಲಿ ಅತಿವೇಗದ 150 ರನ್:
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ 150 ರನ್ ಬಾರಿಸಿದ ದಾಖಲೆ ಕೂಡಾ ಮತ್ತೊಮ್ಮೆ ಭಾರತದ ಪಾಲಾಗಿದೆ. ಈ ಮೊದಲು 2023ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೀಂ ಇಂಡಿಯಾ 21.1 ಓವರ್‌ಗಳಲ್ಲಿ 150 ರನ್ ಬಾರಿಸುವ ಮೂಲಕ ಅತಿವೇಗದ 150+ ರನ್ ಸಾಧನೆ ಮಾಡಿತ್ತು. ಆದರೆ ಇದೀಗ ಬಾಂಗ್ಲಾದೇಶ ಎದುರು ಟೀಂ ಇಂಡಿಯಾ, ಕೇವಲ 18.2 ಓವರ್‌ಗಳಲ್ಲಿ 150+ ರನ್ ಬಾರಿಸುವ ಮೂಲಕ ಅತಿವೇಗದ 150 ರನ್ ಬಾರಿಸಿದ ಮೈಲಿಗಲ್ಲು ನೆಟ್ಟಿದೆ.
ಕಾನ್ಪುರ ಟೆಸ್ಟ್: ಮೊದಲ 3 ಓವರ್‌ನಲ್ಲೇ ಫಿಫ್ಟಿ ಬಾರಿಸಿದ ಟೀಂ ಇಂಡಿಯಾ; ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ
ಟೆಸ್ಟ್‌ನಲ್ಲಿ ಅತಿವೇಗದ ದ್ವಿಶತಕ ಭಾರತದ ಪಾಲು:
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಬಾರಿಸಿದ ದಾಖಲೆಯು ಇದೀಗ ಟೀಂ ಇಂಡಿಯಾ ಪಾಲಾಗಿದೆ. ಟೀಂ ಇಂಡಿಯಾ ಕೇವಲ 24.2 ಓವರ್‌ಗಳಲ್ಲಿ 200+ ರನ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗವಾಗಿ 200+ ರನ್ ಬಾರಿಸಿದ ತಂಡ ಎನ್ನುವ ವಿಶ್ವದಾಖಲೆ ನಿರ್ಮಿಸಿದೆ. ಈ ಮೊದಲು 2017ರಲ್ಲಿ ಆಸ್ಟ್ರೇಲಿಯಾ ತಂಡವು ಸಿಡ್ನಿಯಲ್ಲಿ ಪಾಕಿಸ್ತಾನ ಎದುರು 28.1 ಓವರ್‌ಗಳಲ್ಲಿ 200+ ರನ್ ಬಾರಿಸಿದ ಸಾಧನೆ ಮಾಡಿತ್ತು. ಆ ದಾಖಲೆಯನ್ನು ಟೀಂ ಇಂಡಿಯಾ ಇದೀಗ ನುಚ್ಚುನೂರು ಮಾಡಿದೆ.
