
ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ 250 ರನ್‌ಗಳ ಬೃಹತ್ ಗುರಿ ನೀಡಿತ್ತು. ಆದರೆ ವೆಸ್ಟ್ ಇಂಡೀಸ್ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಈ ಗುರಿಯನ್ನು ತಲುಪಿ ದಾಖಲೆ ಬರೆದಿದೆ. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 249/5 ರನ್ ಗಳಿಸಿತ್ತು. ಇದರಲ್ಲಿ ಸಂಜು ಸ್ಯಾಮ್ಸನ್ ಅವರ ಆಟ ಪ್ರಮುಖವಾಗಿತ್ತು. ಆದರೆ ಶಾಯ್ ಹೋಪ್ ಸಿಡಿಸಿದ ಭರ್ಜರಿ ಶತಕ ವಿಂಡೀಸ್ ತಂಡವನ್ನು ಗೆಲುವಿನ ದಡ ಸೇರಿಸಿತು. ರಾಂಚಿಯಲ್ಲಿ ಇಬ್ಬನಿ (dew) ಪ್ರಭಾವ ಬೀರಿದ್ದರೂ, ಭಾರತೀಯ ಬೌಲರ್‌ಗಳು ಇದಕ್ಕಿಂತ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗವಾಸ್ಕರ್, "ಕೆಲವು ಓವರ್‌ಗಳ ನಂತರ ರನ್ ವೇಗ ಕಡಿಮೆಯಾದಾಗ ಭಾರತ 235-240 ರನ್ ಗಳಿಸಬಹುದು ಎಂದು ನಾನು ಅಂದುಕೊಂಡಿದ್ದೆ. ಹಾಗಾಗಿ ಬ್ಯಾಟರ್‌ಗಳನ್ನು ನಾವು ದೂರುವಂತಿಲ್ಲ. ಅವರು ತಮ್ಮ ಕೆಲಸವನ್ನು ಸರಿಯಾಗಿಯೇ ಮಾಡಿದ್ದಾರೆ. ಆದರೆ ಬೌಲರ್‌ಗಳು ಮಾತ್ರ ತಾವು ಮಾಡಬೇಕಾದ ರೀತಿಯಲ್ಲಿ ಬೌಲಿಂಗ್ ಮಾಡಿಲ್ಲ ಎಂಬುದು ಸ್ಪಷ್ಟ. ಈ ಬೌಲರ್‌ಗಳಿಂದ ಏನು ನಿರೀಕ್ಷಿಸಲಾಗಿತ್ತು ಮತ್ತು ಅವರು ಅದನ್ನು ಮಾಡಿದ್ದಾರೆಯೇ ಎಂದು ಬೌಲಿಂಗ್ ಕೋಚ್‌ಗೆ ಕೇಳಿದರೆ ಉತ್ತರ ತುಂಬಾ ಆಸಕ್ತಿದಾಯಕವಾಗಿರುತ್ತದೆ" ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಸೋಲಿನ ನಡುವೆಯೂ ಭಾರತ ತಂಡದ ಆಟಗಾರ ಶ್ರೇಯಸ್ ಅಯ್ಯರ್ ಎದುರಾಳಿ ತಂಡದ ಬ್ಯಾಟಿಂಗ್ ಮತ್ತು ಅವರ ಜೊತೆಯಾಟವನ್ನು ಹೊಗಳಿದ್ದಾರೆ. ತಮ್ಮ ಆಟಗಾರರನ್ನು ದೂಷಿಸಲು ಶ್ರೇಯಸ್ ನಿರಾಕರಿಸಿದರು. ಬದಲಾಗಿ ರಾಂಚಿಯ ಇಬ್ಬನಿ ಮತ್ತು ಪಿಚ್‌ನ ಸ್ವಭಾವವನ್ನು ಅವರು ಸೋಲಿಗೆ ಕಾರಣವಾಗಿ ನೀಡಿದರು.
"ಇದಕ್ಕೆ ನಿಖರವಾದ ಕಾರಣ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಬ್ಬನಿ ಬೀಳಲು ಶುರುವಾದಾಗ ಬೌಲಿಂಗ್ ಮಾಡುವುದು ತುಂಬಾ ಕಷ್ಟವಾಗುತ್ತದೆ. 249 ರನ್‌ಗಳ ಬೃಹತ್ ಮೊತ್ತವನ್ನು ಕೂಡ ಎದುರಾಳಿಗಳು ಇನ್ನೂ ಎರಡು ಓವರ್ ಬಾಕಿ ಇರುವಾಗಲೇ ಹೊಡೆದು ಮುಗಿಸಿದರು. ಈ ಪಿಚ್‌ನಲ್ಲಿ ಮಾಡುವ ಸಣ್ಣ ತಪ್ಪು ಕೂಡ ದೊಡ್ಡ ಬೆಲೆ ತೆರುವಂತೆ ಮಾಡುತ್ತದೆ. ಚೆಂಡು ಸ್ವಲ್ಪ ಮಿಸ್ ಆದರೂ ಅದು ನೇರವಾಗಿ ಗ್ಯಾಲರಿಗೆ ಹೋಗಿ ಬೀಳುತ್ತಿತ್ತು. ಅವರು ಅದ್ಭುತವಾಗಿ ಬ್ಯಾಟ್ ಮಾಡಿದರು, ಅವರಿಗೆ ಅಭಿನಂದನೆಗಳು. ಎರಡೂ ತಂಡದ ಆಟಗಾರರು ತಮ್ಮ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸಂಜು, ಅಭಿಷೇಕ್ ಮತ್ತು ಮಯಾಂಕ್ ಅವರಿಂದ ನಾವು ಇದನ್ನೇ ನಿರೀಕ್ಷಿಸುತ್ತೇವೆ" ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಸಂಜು ಮತ್ತು ಅಭಿಷೇಕ್ ಆಟದ ಬಗ್ಗೆ ಶ್ರೇಯಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶುಕ್ರವಾರದ ಪಂದ್ಯದಲ್ಲಿ ಸಂಜು 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ವಿಂಡೀಸ್ ವಿರುದ್ಧ ಭಾರತೀಯ ಬ್ಯಾಟರ್‌ನ ಜಂಟಿ ವೇಗದ ಅರ್ಧಶತಕ ಎನಿಸಿಕೊಂಡಿತು. 2019ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಕೂಡಾ 21 ಎಸೆತಗಳಲ್ಲೇ 50 ರನ್ ಪೂರೈಸಿದ್ದರು.
ಪಂದ್ಯದಲ್ಲಿ ಭಾರತ 5 ವಿಕೆಟ್‌ಗೆ 249 ರನ್ ಸಿಡಿಸಿತು. ಇದು ಟಿ20ಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಭಾರತದ ಗರಿಷ್ಠ ಸ್ಕೋರ್. ಈ ಹಿಂದೆ 2016ರಲ್ಲಿ ಲಾಡರ್‌ಹಿಲ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 4 ವಿಕೆಟ್‌ಗೆ 244 ರನ್ ಕಲೆಹಾಕಿತ್ತು. 2019ರಲ್ಲಿ ಮುಂಬೈನಲ್ಲಿ 3 ವಿಕೆಟ್‌ಗೆ 240 ರನ್ ಸಿಡಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.