ದೊಡ್ಡ ಮೊತ್ತ ಗಳಿಸಿಯೂ ವೆಸ್ಟ್ ಇಂಡೀಸ್ ಎದುರು ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾಗೆ ಖಡಕ್ ವಾರ್ನಿಂಗ್ ಕೊಟ್ಟ ದಿನೇಶ್ ಕಾರ್ತಿಕ್‌..!

Published : Oct 10, 2026, 02:19 PM IST
Dinesh Karthik

ಸಾರಾಂಶ

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 249 ರನ್ ಗಳಿಸಿದರೂ ಭಾರತ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಬಗ್ಗೆ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬರುವ ದೊಡ್ಡ ಟೂರ್ನಿಗಳನ್ನು ಗೆಲ್ಲಲು ಫೀಲ್ಡಿಂಗ್ ಸುಧಾರಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಎಚ್ಚರಿಸಿದ್ದಾರೆ.

ರಾಂಚಿ: ದೊಡ್ಡ ಟೂರ್ನಿಗಳನ್ನು ಗೆಲ್ಲಬೇಕಾದರೆ ಟೀಂ ಇಂಡಿಯಾ ತನ್ನ ಫೀಲ್ಡಿಂಗ್ ಮಟ್ಟವನ್ನು ಸುಧಾರಿಸಿಕೊಳ್ಳಲೇಬೇಕು ಎಂದು ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಎಚ್ಚರಿಸಿದ್ದಾರೆ. ಇತ್ತೀಚಿನ ಗೆಲುವುಗಳ ನಡುವೆಯೂ ತಂಡದ ಫೀಲ್ಡಿಂಗ್‌ನಲ್ಲಿ ಸಾಕಷ್ಟು ತಪ್ಪುಗಳಾಗುತ್ತಿವೆ ಎಂದು ಅವರು ಬೆಟ್ಟು ಮಾಡಿದ್ದಾರೆ. 2027ರ ಏಕದಿನ ವಿಶ್ವಕಪ್ ಹತ್ತಿರದಲ್ಲಿದೆ. ಸಣ್ಣ ತಪ್ಪುಗಳು ಕೂಡ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇರುವುದರಿಂದ, ಈ ಸಮಸ್ಯೆಯನ್ನು ಬಗೆಹರಿಸಲು ಭಾರತದ ಬಳಿ ಹೆಚ್ಚು ಸಮಯವಿಲ್ಲ ಎಂದು ಡಿಕೆ ಕಿವಿಮಾತು ಹೇಳಿದ್ದಾರೆ.

ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಭಾರತ ಆರು ವಿಕೆಟ್‌ಗಳಿಂದ ಸೋತಿದೆ. ಈ ಸೋಲಿನ ಬೆನ್ನಲ್ಲೇ ಕ್ರಿಕ್‌ಬಜ್ ಜೊತೆ ಮಾತನಾಡಿದ ಕಾರ್ತಿಕ್, ತಂಡದ ಫೀಲ್ಡಿಂಗ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸಂಜು ಸ್ಯಾಮ್ಸನ್ (41 ಎಸೆತಗಳಲ್ಲಿ 82 ರನ್) ಅವರ ಭರ್ಜರಿ ಆಟದ ನೆರವಿನಿಂದ ಭಾರತ 249/5 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ, ವೆಸ್ಟ್ ಇಂಡೀಸ್ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿತು. ಶಾಯ್ ಹೋಪ್ (45 ಎಸೆತಗಳಲ್ಲಿ ಅಜೇಯ 102) ಮತ್ತು ಶೆರ್ಫೇನ್ ರುದರ್‌ಫೋರ್ಡ್ (37 ಎಸೆತಗಳಲ್ಲಿ 84) ಅವರ ಭರ್ಜರಿ ಆಟದಿಂದಾಗಿ ಐದು ಪಂದ್ಯಗಳ ಸರಣಿ ಈಗ 1-1 ರಲ್ಲಿ ಸಮಬಲಗೊಂಡಿದೆ.

ದಿನೇಶ್ ಕಾರ್ತಿಕ್ ಖಡಕ್ ವಾರ್ನಿಂಗ್:

"249 ರನ್ ಬಾರಿಸಿದ ಮೇಲೂ ಪಂದ್ಯ ಕಠಿಣವಾಗುತ್ತದೆ ಎನಿಸಿದರೆ, ಖಂಡಿತವಾಗಿಯೂ ನಾವು ನಮ್ಮ ತಪ್ಪುಗಳನ್ನು ಹುಡುಕಿಕೊಳ್ಳಬೇಕು. ಸ್ವಲ್ಪ ಸಮಯದಿಂದ ಫೀಲ್ಡಿಂಗ್ ನಮಗೆ ದೊಡ್ಡ ಸಮಸ್ಯೆಯಾಗಿದೆ. ಏಕದಿನ ಸರಣಿ ಮತ್ತು ಏಷ್ಯನ್ ಗೇಮ್ಸ್ ಗೆದ್ದ ಕಾರಣಕ್ಕೆ ಮಾತ್ರ ಈ ತಪ್ಪುಗಳು ಯಾರಿಗೂ ಕಾಣಿಸಲಿಲ್ಲ. ಏಷ್ಯನ್ ಗೇಮ್ಸ್ ಫೈನಲ್‌ನಲ್ಲೂ ನಮ್ಮ ಫೀಲ್ಡಿಂಗ್ ಕಳಪೆಯಾಗಿತ್ತು. ಇಂಗ್ಲೆಂಡ್ ಮತ್ತು ಐರ್ಲೆಂಡ್‌ನಲ್ಲೂ ಇದೇ ಕಥೆ. ಹಾಗಾಗಿ ಇದೊಂದು ಗಂಭೀರ ವಿಚಾರ" ಎಂದು ಕಾರ್ತಿಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

"ಹಳೆಯ ಫೀಲ್ಡಿಂಗ್ ಕೋಚ್ ಅವರನ್ನು ಕೈಬಿಡಲು ಕಾರಣ, ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ಇರಬಹುದು. ಹೊಸದಾಗಿ ಬಂದಿರುವ ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ ಅವರ ಮೇಲೆ ಈಗ ಎಲ್ಲರ ಕಣ್ಣಿದೆ. ಟೀಂ ಇಂಡಿಯಾ ಮೊದಲಿಗಿಂತ ಉತ್ತಮವಾಗಿ ಫೀಲ್ಡಿಂಗ್ ಮಾಡುವಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಅದರಲ್ಲಿ ಅವರು ವಿಫಲರಾದರೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ವಿವರಿಸಿದರು.

ಬೇರೆ ವಿಭಾಗಗಳಲ್ಲಿ ತಂಡ ಉತ್ತಮವಾಗಿ ಆಡುತ್ತಿದ್ದರೂ, ಫೀಲ್ಡಿಂಗ್‌ನಲ್ಲಿ ಆಗಿರುವ ಕುಸಿತವನ್ನು ಇನ್ನು ಮುಂದೆ ಕಡೆಗಣಿಸುವಂತಿಲ್ಲ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. "ಕಳೆದ ಕೆಲವು ತಿಂಗಳುಗಳಿಂದ ಭಾರತ ತಂಡದ ಫೀಲ್ಡಿಂಗ್ ಮಟ್ಟ ಖಂಡಿತವಾಗಿಯೂ ಕುಸಿದಿದೆ. ದೊಡ್ಡ ಟೂರ್ನಿಗಳನ್ನು ಗೆಲ್ಲಲು ಫೀಲ್ಡಿಂಗ್ ಬಹಳ ಮುಖ್ಯ. ಹೀಗಾಗಿ ತಂಡ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲೇಬೇಕು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2ನೇ ಗರಿಷ್ಠ ರನ್‌ ಚೇಸ್‌ ದಾಖಲೆ!

ವಿಂಡೀಸ್‌ ತಂಡ 250 ರನ್‌ ಬೆನ್ನತ್ತಿ ಗೆದ್ದಿತು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ 2ನೇ ಗರಿಷ್ಠ ರನ್‌ ಚೇಸ್‌. 2023ರಲ್ಲಿ ವಿಂಡೀಸ್‌ ವಿರುದ್ಧ ದ.ಆಫ್ರಿಕಾ ತಂಡ 259 ರನ್‌ ಬೆನ್ನತ್ತಿ ಗೆದ್ದಿದ್ದು ಈಗಲೂ ದಾಖಲೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಸಿಬಿ ಕ್ರಿಕೆಟಿಗನ ಹೊಸ ಇನ್ನಿಂಗ್ಸ್, ಬಹುಕಾಲದ ಗೆಳತಿ ಕೈ ಹಿಡಿದ ಸ್ಫೋಟಕ ಬ್ಯಾಟರ್
IND Vs WI: ಗಿಲ್ ಇನ್‌ಸ್ಟಾ ಪೋಸ್ಟ್‌ಗೆ ವಿಂಡೀಸ್ ಕ್ಯಾಪ್ಟನ್ ಫುಲ್ ಗರಂ! 250 ರನ್ ಚೇಸ್ ಮಾಡಿ ಸಖತ್ ಟಾಂಗ್ ಕೊಟ್ಟ ಹೋಪ್‌!