
ಕರಾಚಿ: ಟಿ20 ವಿಶ್ವಕಪ್‌ನಲ್ಲಿ ಭಾರತ ಕಪ್ ಗೆದ್ದರೂ, ಪಾಕಿಸ್ತಾನದ ಮಾಜಿ ಆಟಗಾರರಾದ ಶೋಯೆಬ್ ಅಖ್ತರ್ ಮತ್ತು ಮೊಹಮ್ಮದ್ ಆಮಿರ್ ಮಾತ್ರ ಟೀಕೆ ಮಾಡುವುದನ್ನು ಮುಂದುವರಿಸಿದ್ದಾರೆ. ಆದರೆ, ಪಾಕಿಸ್ತಾನದ ಕೆಲವರಾದರೂ ಭಾರತದ ಗೆಲುವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಭಾರತದ ಗೆಲುವಿನಿಂದ ಪಾಠ ಕಲಿಯುವ ಬದಲು, ಅವರಲ್ಲಿ ತಪ್ಪು ಹುಡುಕುವುದನ್ನು ನಿಲ್ಲಿಸಬೇಕು ಎಂದು ಮಾಜಿ ಆಟಗಾರ ಮೊಹಮ್ಮದ್ ವಸೀಮ್ ನೇರವಾಗಿ ಹೇಳಿದ್ದಾರೆ. ದಿಗ್ಗಜ ಆಟಗಾರ ಜಾವೇದ್ ಮಿಯಾಂದಾದ್ ಕೂಡ ಭಾರತದ ವಿಶ್ವಕಪ್ ಸಾಧನೆಯನ್ನು ಹೊಗಳಿದ್ದಾರೆ.
"ನಾವು ಭಾರತದ ವಿರುದ್ಧ ಸೋತಾಗ ಅಥವಾ ಅವರು ದೊಡ್ಡ ಟೂರ್ನಿಗಳಲ್ಲಿ ಮಿಂಚಿದಾಗ, ನಾವು ತಪ್ಪುಗಳನ್ನು ಹುಡುಕಲು ಮತ್ತು ಪಿತೂರಿ ಸಿದ್ಧಾಂತಗಳನ್ನು ಹೆಣೆಯಲು ಪ್ರಯತ್ನಿಸುತ್ತೇವೆ. ಅದನ್ನ ಮೊದಲು ನಿಲ್ಲಿಸಬೇಕು. ಅವರು ನಮಗಿಂತ ಉತ್ತಮ ತಂಡ ಎಂದು ಒಪ್ಪಿಕೊಂಡು, ನಮ್ಮ ತಪ್ಪುಗಳಿಂದ ಪಾಠ ಕಲಿಯಬೇಕು," ಎಂದು ವಸೀಮ್ ಹೇಳಿದ್ದಾರೆ.
ಭಾನುವಾರ, ಮಾರ್ಚ್ 8 ರಂದು ಅಹಮದಾಬಾದ್‌ನಲ್ಲಿ ನಡೆದ ಏಕಪಕ್ಷೀಯ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಟೂರ್ನಿಯುದ್ದಕ್ಕೂ ಭಾರತ ಪ್ರಾಬಲ್ಯ ಮೆರೆದರೆ, ಪಾಕಿಸ್ತಾನ ಸೂಪರ್ 8 ಹಂತದಲ್ಲೇ ಹೊರಬಿದ್ದಿತ್ತು. 2024ರ ಗ್ರೂಪ್ ಹಂತದ ವೈಫಲ್ಯದ ನಂತರ ಪಾಕಿಸ್ತಾನಕ್ಕೆ ಇದು ಎರಡನೇ ದೊಡ್ಡ ಸೋಲಾಗಿದೆ.
ಭಾರತದ ಗೆಲುವಿನ ಹಿಂದಿರುವ ನಿಖರವಾದ ಯೋಜನೆ ಮತ್ತು ರಚನೆಯನ್ನು ದಿಗ್ಗಜ ಆಟಗಾರ ಜಾವೇದ್ ಮಿಯಾಂದಾದ್ ಶ್ಲಾಘಿಸಿದ್ದಾರೆ. ಭಾರತದ ಬಲಿಷ್ಠ ದೇಶೀಯ ಕ್ರಿಕೆಟ್ ವ್ಯವಸ್ಥೆಯೇ ಅತ್ಯುತ್ತಮ ಪ್ರತಿಭೆಗಳನ್ನು ರೂಪಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಮಾಜಿ ನಾಯಕ ರಶೀದ್ ಲತೀಫ್ ಕೂಡ ಭಾರತದ ಗೆಲುವನ್ನು ಹೊಗಳಿದ್ದಾರೆ. ಒತ್ತಡದ ಸನ್ನಿವೇಶಗಳಲ್ಲಿ ಆಡಿ ಅನುಭವ ಇರುವುದೇ ಭಾರತೀಯ ಆಟಗಾರರ ಶಕ್ತಿ. ಸತತವಾಗಿ ಫೈನಲ್ ತಲುಪುತ್ತಿರುವುದು ಇದಕ್ಕೆ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವಕಪ್‌ನಲ್ಲಿನ ಕಳಪೆ ಪ್ರದರ್ಶನದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಪ್ರತಿ ಆಟಗಾರನಿಗೆ 50 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಿರುವುದು ಕ್ರೀಡಾ ಜಗತ್ತನ್ನು ಅಚ್ಚರಿಗೊಳಿಸಿದೆ. ಭಾರತದ ವಿರುದ್ಧ ಗ್ರೂಪ್ ಹಂತದಲ್ಲಿ ಸೋತಾಗಲೇ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಶಿಕ್ಷೆಯನ್ನು ನಿರ್ಧರಿಸಿದ್ದರು. ಶ್ರೀಲಂಕಾ ವಿರುದ್ಧ ಗೆದ್ದರೂ, ನೆಟ್ ರನ್‌ರೇಟ್‌ನಲ್ಲಿ ಹಿಂದುಳಿದಿದ್ದರಿಂದ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿತ್ತು. ಸತತ ನಾಲ್ಕನೇ ಐಸಿಸಿ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿದೆ.
ಪಿಸಿಬಿಯ ಈ ಕ್ರಮವನ್ನು ಮಾಜಿ ನಾಯಕ ಶಾಹಿದ್ ಅಫ್ರಿದಿ ಟೀಕಿಸಿದ್ದಾರೆ. ದಂಡ ವಿಧಿಸುವುದು ಸಂಕುಚಿತ ಮನಸ್ಥಿತಿ. ಕಳಪೆ ಪ್ರದರ್ಶನ ನೀಡುವವರನ್ನು ದೇಶೀಯ ಕ್ರಿಕೆಟ್‌ಗೆ ವಾಪಸ್ ಕಳುಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಏಳು ಕೋಚ್‌ಗಳು ಮತ್ತು ಮೂರು ನಾಯಕರನ್ನು ಬದಲಾಯಿಸಿರುವ ಪಾಕಿಸ್ತಾನ ಕ್ರಿಕೆಟ್‌ನಲ್ಲಿನ ಅಸ್ಥಿರತೆಯೇ ಈ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಭಾರತ ತಂಡ ತವರಿನಲ್ಲೇ ಏಕದಿನ ಹಾಗೂ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆದ್ದು, ತವರಿನಲ್ಲಿ ಈ ಸಾಧನೆ ಮಾಡಿದ ಮೊದಲ ಟೀಂ ಎಂಬ ವಿಶೇಷ ಸಾಧನೆ ಮಾಡಿತ್ತು. ಈ ಬಾರಿ ಟಿ20 ವಿಶ್ವಕಪ್‌ನಲ್ಲೂ ಅದೇ ಸಾಧನೆ ಪುನರಾವರ್ತಿಸಿದೆ. ಈವರೆಗೂ ಯಾವುದೇ ತಂಡ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿರಲಿಲ್ಲ.
ಈವರೆಗೆ ಯಾವ ತಂಡವೂ ಸತತ 2, ಒಟ್ಟಾರೆ 3 ಬಾರಿ ಟಿ20 ವಿಶ್ವಕಪ್ ಜಯಿಸಿರಲಿಲ್ಲ. ಭಾರತ ತಂಡ ಈ ಬಾರಿ ಆ ದಾಖಲೆಯನ್ನು ಸೃಷ್ಟಿಸಿದೆ. ತಂಡ ಈ ಹಿಂದೆ 2007, 2024ರಲ್ಲಿ ಚಾಂಪಿಯನ್ ಆಗಿತ್ತು. ಈ ಬಾರಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.