ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬೆಂಗಳೂರು ಪಂದ್ಯ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ಸ್ಟೀವ್ ಸ್ಮಿತ್ ಭರ್ಜರಿ ಶತಕದ ನೆನೆರವಿನಿಂದ ಆಸೀಸ್ 286 ರನ್ ಸಿಡಿಸಿದೆ. ಇದೀಗ ಈ ಮೊತ್ತ ಟೀಂ ಇಂಡಿಯಾ ಚೇಸ್ ಮಾಡುತ್ತಾ?, ಬ್ಯಾಟ್ಸ್‌ಮನ್ ಸಹಕಾರಿ ಚಿನ್ನಸ್ವಾಮಿ ಪಿಚ್‌ನಲ್ಲಿ ಕೊಹ್ಲಿ ಪಡೆಗೆ ಎದುರಾಗೋ ಸವಾಲುಗಳೇನು? ಇಲ್ಲಿದೆ ವಿವರ.
ಬೆಂಗಳೂರು(ಜ.19): ಸ್ಟೀವ್ ಸ್ಮಿತ್ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 9 ವಿಕೆಟ್ ಕಳೆದುಕೊಂಡು 286 ರನ್ ಬಾರಿಸಿದ್ದು, ಭಾರತಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ.
undefined
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಲ್ಕನೇ ಓವರ್‌ನಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಬಳಿಸುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಇದಾದ ಕೆಲವೇ ಹೊತ್ತಿನಲ್ಲಿ ನಾಯಕ ಆರೋನ್ ಫಿಂಚ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಆಸ್ಟ್ರೇಲಿಯಾದ ಮೊತ್ತ 8.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 46 ರನ್‌ಗಳಾಗಿದ್ದವು.
ಆಸರೆಯಾದ ಸ್ಮಿತ್-ಲಬುಶೇನ್: ಆಸ್ಟ್ರೇಲಿಯಾ 50 ಪೂರೈಸುವುದರೊಳಗಾಗಿ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ರನ್ ಮಶೀನ್ ಎಂದೇ ಕರೆಸಿಕೊಳ್ಳುವ ಮಾರ್ನಸ್ ಲಬುಶೇನ್ ಯಶಸ್ವಿಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 127 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು 150ರ ಗಡಿದಾಟಿಸಿದರು. ತಾವಾಡಿದ ಎರಡನೇ ಇನಿಂಗ್ಸ್‌ನಲ್ಲೇ ಲಬುಶೇನ್ ಚೊಚ್ಚಲ ಅರ್ಧಶತಕ ಬಾರಿಸಿದರು. ಸ್ಮಿತ್-ಲಬುಶೇನ್ ಜೋಡಿ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. 64 ಎಸೆತಗಳಲ್ಲಿ 5 ಬೌಂಡರಿ ಸಹಿತ 54 ರನ್ ಬಾರಿಸಿದ್ದ ಲಬುಶೇನ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಬೇಕಾಯಿತು. ಇನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಸ್ಟಾರ್ಕ್ ಶೂನ್ಯ ಸುತ್ತಿ ಅದೇ ಓವರ್‌ನಲ್ಲಿ ಪೆವಿಲಿಯನ್ ಪೆರೇಡ್ ನಡೆಸಿದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ಸ್ಟೀವ್ ಸ್ಮಿತ್ ಸರಿಯಾಗಿ ಮೂರು ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ರಾಜ್‌ಕೋಟ್‌ನಲ್ಲಿ ಕೇವಲ 2 ರನ್‌ಗಳಿಂದ ಶತಕ ವಂಚಿತರಾಗಿದ್ದ ಸ್ಮಿತ್, ಅಂತಿಮ ಪಂದ್ಯದಲ್ಲಿ ಕೊನೆಗೂ ಶತಕದ ಬರ ನೀಗಿಸಿಕೊಂಡರು. ಕಾಕಾತಾಳೀಯವೆಂದರೆ ಸ್ಮಿತ್ ಜನವರಿ 19, 2017ರಲ್ಲಿ 8ನೇ ಶತಕ ಬಾರಿಸಿದ್ದರು. ಇದಾಗಿ ಸರಿಯಾಗಿ 3 ವರ್ಷಗಳ ಬಳಿಕ ಅಂದರೆ ಜನವರಿ 19, 2020ರಲ್ಲಿ 9ನೇ ಶತಕ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸ್ಮಿತ್ ಬಾರಿಸಿದ 9ನೇ ಏಕದಿನ ಶತಕವಾಗಿದ್ದು, ಭಾರತದಲ್ಲಿ ಸ್ಮಿತ್ ಬಾರಿಸಿದ ಮೊದಲ ಹಾಗೂ ಒಟ್ಟಾರೆ ಮೂರನೇ ಶತಕವಾಗಿದೆ. ಅಂತಿಮವಾಗಿ ಸ್ಮಿತ್ 132 ಎಸೆತಗಳಲ್ಲಿ 131 ರನ್ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ 36 ಎಸೆತಗಳಲ್ಲಿ 6 ಬೌಂಡರಿ ಸಹಿತ 35 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2, ಕುಲ್ದೀಪ್ ಯಾದವ್ ಹಾಗೂ ನವದೀಪ್ ಸೈನಿ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ:
ಸ್ಟೀವ್ ಸ್ಮಿತ್: 131
ಮಾರ್ನಸ್ ಲಬುಶೇನ್: 54
ಮೊಹಮ್ಮದ್ ಶಮಿ:4