
ಕೊಲಂಬೊ: ಭಾರತ ವಿರುದ್ಧದ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತ ನಂತರ, ಶ್ರೀಲಂಕಾ ತಂಡವು ಕೊಲಂಬೊದಲ್ಲಿ ನಡೆಯಲಿರುವ ನಿರ್ಣಾಯಕ ಎರಡನೇ ಟೆಸ್ಟ್ ಪಂದ್ಯಕ್ಕೆ ತನ್ನ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸರಣಿಯನ್ನು ಸಮಬಲ ಮಾಡಿಕೊಳ್ಳುವ ಗುರಿಯೊಂದಿಗೆ, ಹೊಸ ಬ್ಯಾಟರ್ ಕಾಮಿಲ್ ಮಿಶಾರ ಮತ್ತು ಆಲ್‌ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಈಗ ರಮೇಶ್ ಮೆಂಡಿಸ್ ಬದಲಿಗೆ ತಂಡಕ್ಕೆ ಬಂದಿರುವ ಅರಾಚಿಗೆ, ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುವುದರ ಜೊತೆಗೆ ಆಫ್ ಸ್ಪಿನ್ನರ್ ಆಗಿಯೂ ತಂಡಕ್ಕೆ ನೆರವಾಗಲಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ಮತ್ತು ಭಾರತ 'ಎ' ತಂಡದ ವಿರುದ್ಧದ ಸರಣಿಯಲ್ಲಿ ಅರಾಚಿಗೆ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 4,365 ರನ್ ಮತ್ತು 63 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು, ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಎಡಗೈ ಬ್ಯಾಟರ್ ಕಾಮಿಲ್ ಮಿಶಾರ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಿಶಾನ್ ಮದುಶಂಕ ಬದಲಿಗೆ ತಂಡಕ್ಕೆ ಬಂದಿರುವ ಮಿಶಾರ, ಲಹಿರು ಉಡಾರ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಭಾರತದ ಎಡಗೈ ಸ್ಪಿನ್ನರ್‌ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ದಾಳಿಯನ್ನು ಎದುರಿಸಲು ಮಿಶಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಮಾನವ್ ಸುತಾರ್ 10 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡದ ಬ್ಯಾಟರ್‌ಗಳು ಪರದಾಡುವಂತೆ ಮಾಡಿದ್ದರು. ಮಾನವ್ ಸುತಾರ್‌ಗೆ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡಾ ಉತ್ತಮ ಸಾಥ್ ನೀಡಿದ್ದರು. ಇದೀಗ ಈ ಇಬ್ಬರು ಬೌಲರ್‌ಗಳಿಗೆ ಕೌಂಟರ್ ನೀಡಲು ಲಂಕಾ ಟೀಮ್ ಮ್ಯಾನೇಜ್‌ಮೆಂಟ್ ರಣತಂತ್ರ ಹೆಣೆದಿದೆ.
ಮೊದಲ ಟೆಸ್ಟ್ ವೇಳೆ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದ ದಿನೇಶ್ ಚಾಂಡಿಮಲ್ ಈ ಪಂದ್ಯದಲ್ಲೂ ಆಡುವುದಿಲ್ಲ. ಇದಲ್ಲದೆ, ಕುಸಾಲ್ ಮೆಂಡಿಸ್ (ಸ್ನಾಯು ಸೆಳೆತ) ಮತ್ತು ಪತುಮ್ ನಿಸ್ಸಂಕ (ಬೆರಳಿಗೆ ಶಸ್ತ್ರಚಿಕಿತ್ಸೆ) ಅವರ ಸೇವೆಯೂ ಲಂಕಾ ತಂಡಕ್ಕೆ ಲಭ್ಯವಿರುವುದಿಲ್ಲ. ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಸೋತು ಮುಖಭಂಗ ಅನುಭವಿಸಿರುವ ಧನಂಜಯ ಡಿ'ಸಿಲ್ವಾ ನೇತೃತ್ವದ ಲಂಕಾ ತಂಡವು, ಎರಡನೇ ಪಂದ್ಯದಲ್ಲಿ ಪ್ರವಾಸಿ ಗಿಲ್ ಪಡೆಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ.
ಲಹಿರು ಉಡಾರ, ಕಾಮಿಲ್ ಮಿಶಾರ, ಪಸಿಂದು ಸೂರ್ಯಬಂದರ, ಕಾಮಿಂದು ಮೆಂಡಿಸ್ (ಉಪನಾಯಕ), ಧನಂಜಯ ಡಿ ಸಿಲ್ವ (ನಾಯಕ), ಸಹನ್ ಅರಾಚಿಗೆ, ಸೋನಾಲ್ ದಿನುಶ, ನಿರೋಷನ್ ಡಿಕ್ವೆಲ್ಲ, ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಮಿಲನ್ ರತ್ನಾಯಕೆ, ಲಹಿರು ಕುಮಾರ, ಅಸಿತ ಫೆರ್ನಾಂಡೊ, ವಿಶ್ವ ಫೆರ್ನಾಂಡೊ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.