
ದುಬೈ(ಏ.28): ಫಿಕ್ಸಿಂಗ್ ಭೂತ ಕ್ರಿಕೆಟ್ ಜಗತ್ತನ್ನು ಬಿಟ್ಟೂ ಬಿಡದಂತೆ ಕಾಡುತ್ತಿದ್ದು, ಇದೀಗ ಶ್ರೀಲಂಕಾ ಮಾಜಿ ವೇಗಿ ಹಾಗೂ ಕೋಚ್ ನುವಾನ್ ಜೋಯ್ಸಾ 6 ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದಾರೆ.
ಶಂಕಿತ ಭಾರತದ ಬುಕಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದು ಹಾಗೂ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದು ತನಿಖೆಯ ವೇಳೆ ಸಾಬೀತಾದ ಹಿನ್ನೆಲೆಯಲ್ಲಿ ಐಸಿಸಿ ಲಂಕಾ ಎಡಗೈ ವೇಗಿಯನ್ನು 6 ವರ್ಷಗಳ ಕಾಲ ಬ್ಯಾನ್ ಮಾಡಿದೆ. ನುವಾನ್ ಜೋಯ್ಸಾ ಅವರ ನಿಷೇಧ ಶಿಕ್ಷೆ ಅಕ್ಟೋಬರ್ 31, 2018ರಿಂದಲೇ ಆರಂಭವಾಗಿದೆ.
ರಾಷ್ಟ್ರಿಯ ತಂಡದ ಕೋಚ್ ಆಗಿರುವವರು ಮಾದರಿಯಾಗಿರಬೇಕು. ಅದು ಬಿಟ್ಟು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವುದು ಹಾಗೂ ಇತರರನ್ನು ಭ್ರಷ್ಟಾಚಾರಿಯನ್ನಾಗಿಸುವುದಲ್ಲ ಎಂದು ಐಸಿಸಿ ಇಂಟಿಗ್ರಿಟಿ ಯೂನಿಟ್‌ನ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮಾಡುವುದು ಈ ಕ್ರೀಡೆಯ ಸ್ಪಷ್ಟವಾದ ಮೂಲಭೂತ ಉಲ್ಲಂಘನೆಯಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎನ್ನುವುದನ್ನು ಅಲೆಕ್ಸ್ ಮಾರ್ಷಲ್ ಪುನರುಚ್ಚರಿಸಿದ್ದಾರೆ.
42 ವರ್ಷದ ನುವಾನ್ ಜೋಯ್ಸಾ ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 95 ಏಕದಿನ ಪಂದ್ಯಗಳನ್ನಾಡಿದ್ದಾರೆ. ಯುಎಇನಲ್ಲಿ 2017ರಲ್ಲಿ ನಡೆದ ಟಿ10 ಲೀಗ್‌ನಲ್ಲಿ ಟೀಂ ಶ್ರೀಲಂಕಾದ ಬೌಲಿಂಗ್ ಕೋಚ್ ಆಗಿದ್ದ ಜೋಯ್ಸಾ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ 2018ರಲ್ಲೇ ಲಂಕಾ ಎಡಗೈ ವೇಗಿ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಐಸಿಸಿಗೆ 2017ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ಎ ತಂಡದ ಬೌಲಿಂಗ್ ಕೋಚ್ ಆಗಿದ್ದ ಸಂದರ್ಭದಲ್ಲಿ ಭಾರತದ ಬುಕಿಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವ ವಿಚಾರ ಖಚಿತವಾಗಿತ್ತು.
ಫಿಕ್ಸಿಂಗ್: ದಿಲ್ಹಾರಾ ಲೋಕುಹೆಟ್ಟಿಗೆಗೆ ಐಸಿಸಿ 8 ವರ್ಷ ನಿಷೇಧ
ಈ ತಿಂಗಳ ಆರಂಭದಲ್ಲೇ ಲಂಕಾ ಮಾಜಿ ವೇಗಿ ದಿಲ್ಹಾರ ಲೋಕಹೆಟ್ಟಿಗೆ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ತಪ್ಪಿಗಾಗಿ ಐಸಿಸಿಯಿಂದ 8 ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದರು. ಇನ್ನು 2019ರಲ್ಲಿ ಭ್ರಷ್ಟಾಚಾರ ನಿಗ್ರಹ ಘಟಕದ ತನಿಖೆಗೆ ಸಹಕರಿಸಿಲ್ಲ ಎನ್ನುವ ತಪ್ಪಿಗೆ ಸನತ್ ಜಯಸೂರ್ಯ ಕೂಡಾ ಐಸಿಸಿಯಿಂದ ನಿಷೇಧಕ್ಕೀಡಾಗಿದ್ದರು. 2016ರಲ್ಲಿ ಇದೇ ರೀತಿ ಲಂಕಾ ಮಾಜಿ ಆಫ್‌ಸ್ಪಿನ್ನರ್ ಜಯನಂದ ವರಣವೀರಾ ಸಹಾ ಐಸಿಸಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.