ಬಾಂಗ್ಲಾದೇಶ ಎದುರು ಕೊನೆಯ ಏಕದಿನ ಪಂದ್ಯ ಗೆದ್ದು ನಿಟ್ಟುಸಿರು ಬಿಟ್ಟ ಶ್ರೀಲಂಕಾ..!

Suvarna News   | Asianet News
Published : May 29, 2021, 09:35 AM IST
ಬಾಂಗ್ಲಾದೇಶ ಎದುರು ಕೊನೆಯ ಏಕದಿನ ಪಂದ್ಯ ಗೆದ್ದು ನಿಟ್ಟುಸಿರು ಬಿಟ್ಟ ಶ್ರೀಲಂಕಾ..!

ಸಾರಾಂಶ

* ಬಾಂಗ್ಲಾದೇಶ ಎದುರು ಕೊನೆಯ ಏಕದಿನ ಕ್ರಿಕೆಟ್ ಪಂದ್ಯ ಗೆದ್ದ ಶ್ರೀಲಂಕಾ * ಕೊನೆಯ ಪಂದ್ಯದಲ್ಲಿ ನಾಯಕನ ಆಟ ಪ್ರದರ್ಶಿಸಿದ ಕುಸಾಲ್ ಪರೆರಾ * ಕೊನೆಯ ಪಂದ್ಯ ಸೋತರೂ ಏಕದಿನ ಸರಣಿ ಕೈವಶ ಮಾಡಿಕೊಂಡ ಬಾಂಗ್ಲಾದೇಶ

ಢಾಕಾ(ಮೇ.29): ನಾಯಕ ಕುಸಾಲ್ ಪರೆರಾ ಬಾರಿಸಿದ ಕೆಚ್ಚೆದೆಯ ಶತಕ ಹಾಗೂ ವೇಗಿ ದುಸ್ಮಂತ್ ಚಮೀರಾ ನಡೆಸಿದ ಮಾರಕ ದಾಳಿಯ ನೆರವಿನಿಂದ ಬಾಂಗ್ಲಾದೇಶ ಎದುರು ಶ್ರೀಲಂಕಾ ಕ್ರಿಕೆಟ್ ತಂಡವು 97 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಲಂಕಾದೆದರು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಬಾಂಗ್ಲಾದ ಕನಸು ಭಗ್ನವಾಗಿದೆ. ಈ ಸೋಲಿನ ಹೊರತಾಗಿಯೂ ಬಾಂಗ್ಲಾದೇಶ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡಕ್ಕೆ ನಾಯಕ ಕುಸಾಲ್ ಪರೆರಾ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಗುಣತಿಲಕ ಹಾಗೂ ಕುಸಾಲ್ ಪೆರೆರಾ ಜೋಡಿ 82 ರನ್‌ಗಳ ಜತೆಯಾಟವಾಡುವ ಮೂಲಕ ಲಂಕಾ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಾಯಕ ಪೆರೆರಾ 122 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 120 ರನ್‌ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಧನಂಜಯ ಡಿಸಿಲ್ವಾ ಅಜೇಯ 55 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 280ರ ಗಡಿ ದಾಟಿಸಿದರು. ಅಂತಿಮವಾಗಿ ಲಂಕಾ 6 ವಿಕೆಟ್ ಕಳೆದುಕೊಂಡು 286 ರನ್‌ ಕಲೆ ಹಾಕಿತ್ತು.

ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಮತ್ತೊಂದು ಗೆಲುವು ಪಡೆಯುವ ಲೆಕ್ಕಾಚಾರದೊಂದಿಗೆ ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿತು. ಆದರೆ ಲಂಕಾ ವೇಗಿ ದುಸ್ಮಂತ್ ಚಮೀರಾ ಬಾಂಗ್ಲಾದ ಇನ್ನೂ 30 ರನ್‌ ಕಲೆಹಾಕುವಷ್ಟರಲ್ಲೇ  ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಬಾಂಗ್ಲಾ ಪರ ಮೊಸದ್ದೇಕ್ ಹುಸೈನ್(51) ಹಾಗೂ ಮೊಹಮ್ಮದುಲ್ಲಾ(53) ಅರ್ಧಶತಕ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಮುಷ್ಫಿಕುರ್ ಆಕರ್ಷಕ ಶತಕ; ಲಂಕಾ ಎದುರು ಸರಣಿ ಗೆದ್ದ ಬಾಂಗ್ಲಾದೇಶ

ಅಂತಿಮವಾಗಿ ಬಾಂಗ್ಲಾದೇಶ ಕೇವಲ 189 ರನ್‌ಗಳಿಗೆ ಸರ್ವಪತನ ಕಂಡಿತು. ಲಂಕಾ ಪರ ಚಮೀರಾ ಕೇವಲ 16 ರನ್‌ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಇವರಿಗೆ ವಹಿಂದು ಹಸರಂಗ ಹಾಗೂ ರಮೇಶ್ ಮೆಂಡೀಸ್‌ ತಲಾ 2 ವಿಕೆಟ್‌ ಕಬಳಿಸುವ ಮೂಲಕ ಉತ್ತಮ ಸಾಥ್‌ ನೀಡಿದರು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI
ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು