
ಗುವಾಹಟಿ (ಅ.29): 4 ಬಾರಿಯ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಅಧಿಕಾರಯುತವಾಗಿ ಸೋಲಿಸಿದ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದು ದಕ್ಷಿಣ ಆಫ್ರಿಕಾ ತಂಡಕ್ಕೆ ಸತತ ಮೂರನೇ ಐಸಿಸಿ ಫೈನಲ್ ಆಗಿದೆ.ಹಿಂದಿನ ಎರಡೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಫೈನಲ್‌ಗೇರಿತ್ತು. ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 125 ರನ್‌ಗಳಿಂದ ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್‌ಗೆ 319 ರನ್ ಬಾರಿಸಿದರೆ, ಪ್ರತಿಯಾಗಿ ಇಂಗ್ಲೆಂಡ್ ತಂಡ 42.3 ಓವರ್‌ಗಳಲ್ಲಿ 194 ರನ್‌ಗೆ ಆಲೌಟ್ ಆಯಿತು. 2ನೇ ಸೆಮಿಫೈನಲ್ ಪಂದ್ಯದಲ್ಲಿ ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವೊಂದು ಐಸಿಸಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರಿದ್ದು ಇದೇ ಮೊದಲ ಬಾರಿ. ಪುರುಷರ ತಂಡ ಕೂಡ ಈವರೆಗೂ ಏಕದಿನ ಮಾದರಿಯಲ್ಲಿ ಫೈನಲ್ ಪ್ರವೇಶಿಸಿಲ್ಲ.ಇಡೀ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತೋರಿದ್ದು ಅಧಿಕಾರಯುತದ ಆಟ. ಬ್ಯಾಟಿಂಗ್‌ನಲ್ಲೇ ಆಗಲಿ ಬೌಲಿಂಗ್‌ನಲ್ಲೇ ಆಗಲಿ ಎಲ್ಲಿಯೂ ಪಂದ್ಯ ಕೈತಪ್ಪಿ ಹೋಗದಂತೆ ದಕ್ಷಿಣ ಆಫ್ರಿಕಾ ಎಚ್ಚವಹಿಸಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಲಾರಾ ವೋಲ್ವಾರ್ಡ್ ಭರ್ಜರಿ ಇನ್ನಿಂಗ್ಸ್ ಆಡಿದರು. ಕೇವಲ 143 ಎಸೆತ ಆಡಿದ ವೋಲ್ವಾರ್ಡ್ 20 ಬೌಂಡರಿ 4 ಸಿಕ್ಸರ್‌ನೊಂದಿಗೆ ಭರ್ಜರಿ 169 ರನ್ ಬಾರಿಸಿದರು. ಅವರ ಹೊರತಾಗಿ ತಡದ ಯಾವೊಬ್ಬ ಬ್ಯಾಟರ್ ಕೂಡ ಕನಿಷ್ಠ ಅರ್ಧಶತಕ ಕೂಡ ಬಾರಿಸಲಿಲ್ಲ. 48ನೇ ಓವರ್‌ವರೆಗೂ ಕ್ರೀಸ್‌ನಲ್ಲಿದ್ದ ವೋಲ್ವಾರ್ಡ್, ತಾಜಿಮ್ ಬ್ರಿಟ್ಸ್ (45 ರನ್, 65 ಎಸೆತ, 6 ಬೌಂಡರಿ, 1 ಸಿಕ್ಸರ್), ಮಾರಿಜಾನ್ನೆ ಕಾಪ್ (42 ರನ್, 33 ಎಸೆತ, 4 ಬೌಂಡರಿ, 1 ಸಿಕ್ಸರ್ ) ಹಾಗೂ ಚೋಲ್ ಟ್ರಯಾನ್ (33ರನ್, 26 ಎಸೆತ, 3 ಬೌಂಡರಿ, 1 ಸಿಕ್ಸರ್) ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ಕಾರಣರಾದರು.
ಇಂಗ್ಲೆಂಡ್ ಪರವಾಗಿ ಸೋಫಿ ಎಕ್ಲೆಸ್ಟೋನ್ 44 ರನ್‌ಗೆ 4 ವಿಕೆಟ್ ಉರುಳಿಸಿದರೆ, ಲೌರೆನ್ ಬೆಲ್ 2 ನಾಯಕಿ ಸ್ಕೀವರ್ ಬ್ರಂಟ್ 1 ವಿಕೆಟ್ ಉರುಳಿಸಿದರು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ಆದರೆ, ಮಾರಿಜಾನ್ನೆ ಕಾಪ್ ನೇತೃತ್ವದಲ್ಲಿ ಭರ್ಜರಿ ದಾಳಿ ನಡೆಸಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡ 1 ರನ್ ಗಳಿಸುವಾಗಲೇ 3 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು. ಪ್ರಮುಖ ಬ್ಯಾಟರ್‌ಗಳಾದ ಆಮಿ ಜೋನ್ಸ್, ಅನುಭವಿ ಟ್ಯಾಮಿ ಬೀಮೌಂಟ್ ಹಾಗೂ ಹೀದರ್ ನೈಟ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ನಂತರ ಸ್ಕೀವರ್ ಬ್ರಂಟ್ (64 ರನ್, 76 ಎಸೆತ, 6 ಬೌಂಡರಿ, 1 ಸಿಕ್ಸರ್), ಅಲೀಸ್ ಕ್ಯಾಪ್ಸಿ (50ರನ್, 71 ಎಸೆತ, 6 ಬೌಂಡರಿ) ಅರ್ಧಶತಕ ಬಾರಿಸಿದರೂ ಇದು ತಂಡದ ಹೋರಾಟಕ್ಕೆ ಸಾಲಲಿಲ್ಲ. ಡೆನ್ನಿಲ್ಲೆ ವ್ಯಾಟ್ 34 ರನ್ ಬಾರಿಸಿದರೆ, ಲಿನ್ಸಿ ಸ್ಮಿತ್ ಕೊನೆಯಲ್ಲಿ 27 ರನ್ ಬಾರಿಸಿ ಸೋಲಿನ ಅಂತರ ತಗ್ಗಿಸಿದರು. ಮಾರಿಜಾನ್ನೆ ಕಾಪ್ 20 ರನ್‌ಗೆ 5 ವಿಕೆಟ್ ಉರುಳಿಸಿದರೆ, ನಡಿನ್ ಡಿ ಕರ್ಕ್ 2 ವಿಕೆಟ್, ಅಯಬೊಂಗ ಕಾಕಾ, ಮಲಾಬಾ ಹಾಗೂ ಸನ್ನಿ ಲಸ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.