ICC Test Rankings: ಅಫ್ರಿದಿ, ಬುಮ್ರಾ ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದ ಕಗಿಸೋ ರಬಾಡ..!

By Naveen KodaseFirst Published Aug 24, 2022, 5:37 PM IST
Highlights

ಐಸಿಸಿ ನೂತನ ಟೆಸ್ಟ್ ಬೌಲಿಂಗ್ ಶ್ರೇಯಾಂಕ ಪ್ರಕಟ
ಬುಮ್ರಾ, ಶಾಹೀನ್ ಅಫ್ರಿದಿ ಹಿಂದಿಕ್ಕಿದ ಕಗಿಸೋ ರಬಾಡ
ಅಗ್ರಸ್ಥಾನದಲ್ಲೇ ಮುಂದುವರೆದ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌

ದುಬೈ(ಆ.24): ದಕ್ಷಿಣ ಆಫ್ರಿಕಾದ ಮಾರಕ ವೇಗಿ ಕಗಿಸೋ ರಬಾಡ, ನೂತನವಾಗಿ ಬಿಡುಗಡೆಯಾದ ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌‌ನಲ್ಲಿ ಎರಡು ಸ್ಥಾನ ಜಿಗಿತ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಆಫ್ರಿಕಾ ವೇಗಿ ಕಗಿಸೋ ರಬಾಡ, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿಸಿದ್ದಾರೆ. ಬುಮ್ರಾ ಹಾಗೂ ಶಾಹೀನ್ ಅಫ್ರಿದಿ ತಲಾ ಒಂದೊಂದು ಸ್ಥಾನ ಕುಸಿತ ಕಂಡಿದ್ದಾರೆ.

ಇತ್ತೀಚೆಗಷ್ಟೇ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್ ಎದುರು ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಗಿಸೋ ರಬಾಡ ಮಾರಕ ದಾಳಿ ನಡೆಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಕಗಿಸೋ ರಬಾಡ ಮೊದಲ ಇನಿಂಗ್ಸ್‌ನಲ್ಲಿ 5 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಉರುಳಿಸಿದ್ದರು. ಪರಿಣಾಮ ಇಂಗ್ಲೆಂಡ್ ಎದುರು ಮೊದಲ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗಾರ್ ನೇತೃತ್ವದ ಹರಿಣಗಳ ಪಡೆ ಇನಿಂಗ್ಸ್‌ ಹಾಗೂ 12 ರನ್‌ಗಳ ಅಂತರದ ಗೆಲುವು ದಾಖಲಿಸಿತ್ತು. ಇದರ ಬೆನ್ನಲ್ಲೇ ಕಗಿಸೋ ರಬಾಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 

ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ವೇಗಿ ಕಗಿಸೋ ರಬಾಡ ಮಾರಕ ದಾಳಿ ನಡೆಸುವ ಮೂಲಕ ತಬ್ಬಿಬ್ಬುಗೊಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡವು 45 ಓವರ್‌ಗಳಲ್ಲಿ ಕೇವಲ 165 ರನ್ ಬಾರಿಸಿ ಸರ್ವಪತನ ಕಂಡಿತು. ರಬಾಡ 52 ರನ್‌ ನೀಡಿ 5 ವಿಕೆಟ್ ಉರುಳಿಸಿದರು.  ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ ಹಾಗೂ ಅನುಭವಿ ಆಟಗಾರ ಸ್ಟುವರ್ಟ್‌ ಬ್ರಾಡ್‌ ಅವರ ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕಾ ತಂಡವು ಇನಿಂಗ್ಸ್‌ ಗೆಲುವು ದಾಖಲಿಸುವಲ್ಲಿ ಮಹತ್ತರ ಪಾತ್ರವಹಿಸಿದರು. 53 ಟೆಸ್ಟ್ ಪಂದ್ಯಗಳನ್ನಾಡಿರುವ ರಬಾಡ 250 ವಿಕೆಟ್ ಕಬಳಿಸಿದ್ದಾರೆ.

Asia Cup 2022 ಯುಎಇಗೆ ಬಂದಿಳಿದ ಟೀಂ ಇಂಡಿಯಾ..! 

ಕಗಿಸೋ ರಬಾಡ, ಎರಡನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗಿಂತ ಕೇವಲ 6 ರೇಟಿಂಗ್ ಅಂಕಗಳಿಂದ ಹಿಂದಿದ್ದಾರೆ. ಸದ್ಯ 891 ರೇಟಿಂಗ್ ಅಂಕ ಹೊಂದಿರುವ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನದಲ್ಲಿದ್ದರೇ, ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

ಏಕದಿನ ರ‍್ಯಾಂಕಿಂಗ್‌: ಭಾರತ ನಂ.3

ದುಬೈ: ಜಿಂಬಾಬ್ವೆ ವಿರುದ್ಧ 3-0 ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದ ಭಾರತ ಐಸಿಸಿ ಏಕದಿನ ತಂಡಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಮುಂದುವರಿದಿದೆ. ಭಾರತ ಸದ್ಯ 111 ರೇಟಿಂಗ್‌ ಅಂಕಗಳನ್ನು ಹೊಂದಿದ್ದು 4ನೇ ಸ್ಥಾನದಲ್ಲಿರುವ ಪಾಕಿಸ್ತಾನ(107)ಕ್ಕಿಂತ ನಾಲ್ಕು ಅಂಕಗಳಿಂದ ಮುಂದಿದೆ. ನ್ಯೂಜಿಲೆಂಡ್‌(124) ಮೊದಲ ಸ್ಥಾನದಲ್ಲಿದ್ದು, ಇಂಗ್ಲೆಂಡ್‌(119) 2ನೇ ಸ್ಥಾನ ಪಡೆದಿದೆ.

click me!