ನಾಳೆಯಿಂದ ದಕ್ಷಿಣ ಆಫ್ರಿಕಾ-ಭಾರತ 2ನೇ ಟೆಸ್ಟ್
ವಾಂಡರರ್ಸ್ ನಲ್ಲಿ ಐತಿಹಾಸಿಕ ದಾಖಲೆಗೆ ಸಿದ್ಧವಾಗಿದೆ ಟೀಮ್ ಇಂಡಿಯಾ
ಜೊಹಾನ್ಸ್ ಬರ್ಗ್ ನಲ್ಲಿ ಭಾರತ ಟೆಸ್ಟ್ ಪಂದ್ಯ ಸೋತ ದಾಖಲೆ ಇಲ್ಲ
ಜೊಹಾನ್ಸ್ ಬರ್ಗ್ (ಜ. 3): ಸೆಂಚುರಿಯನ್ ನಲ್ಲಿ (Centurion) ಟೆಸ್ಟ್ ಪಂದ್ಯ ಗೆದ್ದ ಮೊದಲ ಏಷ್ಯಾದ ತಂಡ (Asia's First Team)ಎನ್ನುವ ಐತಿಹಾಸಿಕ ದಾಖಲೆ ಬರೆದಿರುವ ಟೀಮ್ ಇಂಡಿಯಾ (Team India) ಮತ್ತೊಂದು ಮೈಲಿಗಲ್ಲಿನ ದಾಖಲೆಯ ಸನಿಹದಲ್ಲಿದೆ. ಜೊಹಾನ್ಸ್ ಬರ್ಗ್ ನ (Johannesburg) ವಾಂಡರರ್ಸ್ (Wanderers) ಮೈದಾನದಲ್ಲಿ ಸೋಮವಾರದಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯ ಆರಂಭವಾಗಲಿದ್ದು, ದಕ್ಷಿಣ ಆಫ್ರಿಕಾ (South Africa) ನೆಲದಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಗೆಲುವಿನ ಮತ್ತೊಂದು ಐತಿಹಾಸಿಕ ದಾಖಲೆ ಮಾಡುವ ವಿಶ್ವಾಸದಲ್ಲಿ ಭಾರತ ತಂಡವಿದೆ. ಭಾರತದ ಈ ವಿಶ್ವಾಸಕ್ಕೆ ಕಾರಣವಾಗಿರುವುದು ವಾಂಡರರ್ಸ್ ಮೈದಾನದಲ್ಲಿನ ದಾಖಲೆ. ಯಾಕೆಂದರೆ, ಈ ಮೈದಾನದಲ್ಲಿ ಈವರೆಗೂ ಐದು ಪಂದ್ಯವಾಡಿರುವ ಭಾರತ ತಂಡ 2 ಗೆಲುವು ಹಾಗೂ 3 ಡ್ರಾ ಫಲಿತಾಂಶ ಕಂಡಿದೆ.
2021ರಲ್ಲಿ ಭಾರತ ತಂಡ ಬ್ರಿಸ್ಬೇನ್ ನ (Brisbane) ಗಾಬಾ, ಇಂಗ್ಲೆಂಡ್ ನ (England) ದಿ ಓವಲ್ ಹಾಗೂ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ನಂಥ ಮೈದಾನಗಳಲ್ಲಿ ಟೆಸ್ಟ್ ಗೆಲುವು ಸಾಧಿಸಿದೆ. ಈ ಎಲ್ಲಾ ಮೈದಾನಗಳಲ್ಲಿ ಭಾರತ ತಂಡದ ಇಲ್ಲಿಯವರೆಗಿನ ಸಾಧನೆ ಬಹುತೇಕ ಸೋಲುಗಳೇ ಆಗಿದ್ದವು. ಆದರೆ, 2022ರ ವರ್ಷದ ಮೊದಲ ಟೆಸ್ಟ್ ಪಂದ್ಯವನ್ನು ಭಾರತದಿಂದ ಹೊರಗಿನ ತವರು ಮೈದಾನ ಎನಿಸಿಕೊಂಡಿರುವ ವಾಂಡರರ್ಸ್ ನಲ್ಲಿ ಆಡಲಿದೆ. ಆ ಕಾರಣದಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಐತಿಹಾಸಿಕ ಸರಣಿ ಗೆಲುವಿನ ಸಾಧ್ಯತೆಗಳು ಗೋಚರವಾಗಿವೆ. ಆತಿಥೇಯ ದಕ್ಷಿಣ ಅಫ್ರಿಕಾ ತಂಡ ಇನ್ನೂ ಕ್ವಿಂಟನ್ ಡಿ ಕಾಕ್ (Quinton de Kock) ಅವರ ಅಚ್ಚರಿಯ ಟೆಸ್ಟ್ ನಿವೃತ್ತಿಯ ಶಾಕ್ ನಲ್ಲಿದೆ. ಆದರೆ, ಭಾರತ ತಂಡದಲ್ಲಿ ವಿರಾಟ್ ಕೊಹ್ಲಿಯನ್ನು (Virat Kohli) ಏಕದಿನ ತಂಡದ ನಾಯಕ ಸ್ಥಾನದಿಂದ ವಜಾ ಮಾಡಿದ ವಿಚಾರಗಳೇ ಓಡಾಡುತ್ತಿವೆ. ಇವೆಲ್ಲವನ್ನು ಬದಿಗಿಟ್ಟು ಸೆಂಚುರಿಯನ್ ನಲ್ಲಿ ಕಾದಾಡಿದ್ದ ಟೀಮ್ ಇಂಡಿಯಾ, ಅದೇ ಜೋಶ್ ನಲ್ಲಿ ಜೊಹಾನ್ಸ್ ಬರ್ಗ್ ನಲ್ಲಿ ಆಡಿದರೆ ಗೆಲುವು ಖಚಿತ.
ಆದರೆ, ದಕ್ಷಿಣ ಆಫ್ರಿಕಾ ತಂಡ ತವರಿನ ತಂಡ ಎನ್ನುವ ಎಚ್ಚರಿಕೆ ಅನಿವಾರ್ಯ. ಸೆಂಚುರಿಯನ್ ನಲ್ಲಿ ಸೋತಿದ್ದರೂ ಅಷ್ಟೇ ಪ್ರಮಾಣದಲ್ಲಿ ವಾಂಡರರ್ಸ್ ಮೈದಾನದಲ್ಲಿ ತಿರುಗೇಟು ನೀಡುವ ಸಾಮರ್ಥ್ಯ ಆ ತಂಡಕ್ಕಿದೆ. ಕ್ವಿಂಟನ್ ಡಿ ಕಾಕ್ ಅವರ ಅನುಭವದ ಕೊರತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಖಂಡಿತಾ ಕಾಡಲಿದೆ. ಇನ್ನು ಡುವಾನ್ನೆ ಒಲಿವರ್ ಆಡುವ ಬಳಗದಲ್ಲಿ ಕಾಣಿಸಿಕೊಂಡಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ಬಲ ಇನ್ನಷ್ಟು ಸದೃಢವಾಗಲಿದೆ.
ಇನ್ನು ಭಾರತ ತಂಡದ ಪೈಕಿ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಫಾರ್ಮ್ ಕಳವಳಕ್ಕೆ ಕಾರಣವಾಗಿದೆ. ಭಾರತದ ಇಬ್ಬರು ಅನುಭವಿ ಬ್ಯಾಟ್ಸ್ ಮನ್ ಗಳು ಏಕಕಾಲದಲ್ಲಿ ಕೈಕೊಡುತ್ತಿರುವುದು ಟೀಮ್ ಮ್ಯಾನೇಜ್ ಮೆಂಟ್ ಆತಂಕಕ್ಕೆ ಕಾರಣವಾಗಿದೆ. ಕಳಪೆ ಫಾರ್ಮ್ ನಲ್ಲಿದ್ದರೂ 2ನೇ ಟೆಸ್ಟ್ ನ ಆಡುವ ಬಳಗದಲ್ಲಿ ಇವರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಟೀಮ್ ನ್ಯೂಸ್
ದಕ್ಷಿಣ ಆಫ್ರಿಕಾ: ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಬಳಗದ ಆಯ್ಕೆಯೇ ಕುತೂಹಲದಲ್ಲಿದೆ. ಫಿಟ್ ಆಗಿರುವ ಡುವಾನ್ನೆ ಒಲಿವರ್ ಯಾರ ಸ್ಥಾನದಲ್ಲಿ ಆಡಲಿದ್ದಾರೆ ಎನ್ನುವ ಕುತೂಹಲವೇ ಹೆಚ್ಚು. ಸ್ಪಿನ್ನ್ ಕೇಶವ್ ಮಹಾರಾಜ್ ರನ್ನು ಕೈಬಿಟ್ಟು ಆಡಿಸುವುದು ಅನುಮಾನ. ವಾಂಡರರ್ಸ್ ನಂಥ ಪಿಚ್ ನಲ್ಲಿ ಸಂಪೂರ್ಣ ವೇಗದ ಬೌಲಿಂಗ್ ದಾಳಿಯನ್ನು ಹೊಂದಿರುವುದು ಅಸಾಧ್ಯ, ಮೂಲಗಳ ಪ್ರಕಾರ ಮಾರ್ಕೋ ಜಾನ್ಸೆನ್ ಅಥವಾ ವಿಯಾನ್ ಮುಲ್ಡರ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಹೆಚ್ಚು. ಕ್ವಿಂಟನ್ ಡಿ ಕಾಕ್ ಸ್ಥಾನದಲ್ಲಿ ಕೈಲ್ ವರ್ನೆನ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
ಭಾರತ: ಭಾರತ ತಂಡ ಗೆಲುವಿನ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಶಾರ್ದೂಲ್ ಠಾಕೂರ್ ಸ್ಥಾನದಲ್ಲಿ 6ನೇ ಬ್ಯಾಟ್ಸ್ ಮನ್ ಅಥವಾ ಪಕ್ಕಾ ವೇಗಿಯನ್ನು ಆಡಿಸುವ ಸಾಧ್ಯತೆ ಇದೆ.
Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆಲುವಿನ ಬಳಿಕ ಕುಣಿದು ಸಂಭ್ರಮಿಸಿದ ಕೊಹ್ಲಿ, ದ್ರಾವಿಡ್
ವಾಂಡರರ್ಸ್ ನಲ್ಲಿ 11 ಟೆಸ್ಟ್ ಸೋತಿದೆ ದಕ್ಷಿಣ ಆಫ್ರಿಕಾ : ವಾಂಡರರ್ಸ್ ನಲ್ಲಿ ಈವರೆಗೂ ಸೋಲು ಕಾಣದ ಏಕೈಕ ವಿದೇಶಿ ತಂಡ ಭಾರತ. ಕ್ರಿಕೆಟ್ ಗೆ ದಕ್ಷಿಣ ಆಫ್ರಿಕಾ ಮರಳಿ ಬಂದ ಬಳಿಕ ಈ ಮೈದಾನದಲ್ಲಿ ಒಟ್ಟು 31 ಪಂದ್ಯವಾಡಿದ್ದು 11 ರಲ್ಲಿ ಸೋಲು ಕಂಡಿದೆ. ದೇಶದ ಉಳಿದ ಯಾವುದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಇಷ್ಟು ಸೋಲುಗಳನ್ನು ಕಂಡಿಲ್ಲ.
ಅಶ್ವಿನ್ ಗೆ ಬೇಕಿದೆ 6 ವಿಕೆಟ್: ಆರ್ ಅಶ್ವಿನ್ ಇನ್ನು 4 ವಿಕೆಟ್ ಉರುಳಿಸಿದರೆ, ಗರಿಷ್ಠ ಟೆಸ್ಟ್ ವಿಕೆಟ್ ಉರುಳಿಸಿದ ಬೌಲರ್ ಗಳ ಪಟ್ಟಿಯಲ್ಲಿ ದಿಗ್ಗಜ ಕಪಿಲ್ ದೇವ್ ದಾಖಲೆಯನ್ನು ಮುರಿಯಲಿದ್ದಾರೆ. ಕಪಿಲ್ ದೇವ್ 434 ವಿಕೆಟ್ ಗಳೊಂದಿಗೆ ಸದ್ಯ 2ನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಉರುಳಿಸಿರುವ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ.
Major Dhyanchand Sports University: ಮೀರತ್ ನಲ್ಲಿ ತಲೆ ಎತ್ತಲಿರುವ ಕ್ರೀಡಾ ವಿವಿ ಹೀಗಿರುತ್ತೆ ನೋಡಿ!
ಸಂಭಾವ್ಯ ತಂಡ
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಏಡೆನ್ ಮಾರ್ಕ್ರಮ್, ಕೀಗನ್ ಪೀಟರ್ ಸೆನ್, ರಸ್ಸಿ ವಾನ್ ಡರ್ ಡುಸೆನ್, ಟೆಂಬಾ ಬವುಮಾ, ಕೈಲ್ ವರ್ನೆನ್ (ವಿ.ಕೀ), ವಿಯಾನ್ ಮುಲ್ಡರ್/ಮಾರ್ಕೋ ಜಾನ್ಸೆನ್, ಕಗೀಸೋ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವರ್, ಲುಂಜಿ ಎನ್ ಗಿಡಿ.
ಭಾರತ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಜಸ್ ಪ್ರೀತ್ ಬುಮ್ರಾ, ಮೊಹಮದ್ ಶಮಿ.
ಪಿಚ್ ರಿಪೋರ್ಟ್ : ವೇಗ ಹಾಗೂ ಬೌನ್ಸ್ ಅನ್ನು ವಾಂಡರರ್ಸ್ ನಲ್ಲಿ ಎಲ್ಲರೂ ನಿರೀಕ್ಷೆ ಮಾಡಬಹುದು. ಕಳೆದ ಬಾರಿ ಈ ತಂಡಗಳು ಇದೇ ಮೈದಾನದಲ್ಲಿ ಮುಖಾಮುಖಿಯಾಗಿದ್ದಾಗ ಐಸಿಸಿ ಈ ಪಿಚ್ ಗೆ ಕಳಪೆ ರೇಟಿಂಗ್ ನೀಡಿತ್ತು. ಇನ್ನು ಐದು ದಿನದ ಪಂದ್ಯದ ಪೈಕಿ ನಾಲ್ಕು ದಿನಕ್ಕೆ ಮಳೆಯ ಮುನ್ಸೂಚನೆ ಇದೆ.