
ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ವಾಗ್ವಾದಗಳು ನಡೆಯುವುದು ಹೊಸದೇನಲ್ಲ. ಪಂದ್ಯದಲ್ಲಿ ಗೆಲ್ಲುವ ಉತ್ಸಾಹ, ಒತ್ತಡ ಮತ್ತು ಪೈಪೋಟಿ ನಡುವೆ ಕೆಲವೊಮ್ಮೆ ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಾರೆ. ಕೆಲವು ಘಟನೆಗಳು ನೇರ ಪ್ರಸಾರದ ಕ್ಯಾಮೆರಾಗಳಲ್ಲಿ ಸೆರೆಯಾದರೆ, ಇನ್ನೂ ಕೆಲವು ಘಟನೆಗಳು ಆಟಗಾರರ ನೆನಪುಗಳಲ್ಲೇ ಉಳಿಯುತ್ತವೆ. ಅಂತಹ ಒಂದು ಹಳೆಯ ಘಟನೆಯನ್ನು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ.
2005ರಲ್ಲಿ ನವದೆಹಲಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಇರ್ಫಾನ್ ಪಠಾಣ್ ಮತ್ತು ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ನಡುವೆ ವಾಗ್ವಾದ ನಡೆದಿತ್ತು. ಈ ಘಟನೆಗೆ ಕಾರಣವಾದದ್ದು ಪಂದ್ಯದ ವೇಳೆ ಚೆಂಡು ಬದಲಾವಣೆಗೆ ಸಂಬಂಧಿಸಿದ ವಿಚಾರ ಎನ್ನಲಾಗಿದೆ. ಆ ಪಂದ್ಯದಲ್ಲಿ ಇರ್ಫಾನ್ ಪಠಾಣ್ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗೌತಮ್ ಗಂಭೀರ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ಪಠಾಣ್ ಅದ್ಭುತವಾಗಿ ಬ್ಯಾಟ್ ಬೀಸಿ 93 ರನ್ ಗಳಿಸಿದ್ದರು. ನಂತರ ಭಾರತ ಬೌಲಿಂಗ್ ಮಾಡಲು ಬಂದಾಗ ಚೆಂಡು ಬದಲಾಯಿಸಲಾಗಿತ್ತು. ಈ ನಿರ್ಧಾರದಿಂದ ಶ್ರೀಲಂಕಾ ತಂಡದ ಆಟಗಾರರು ಅಸಮಾಧಾನಗೊಂಡಿದ್ದರು. ಅದರಲ್ಲೂ ಕುಮಾರ್ ಸಂಗಕ್ಕಾರ ಈ ವಿಚಾರದಲ್ಲಿ ಹೆಚ್ಚು ಧ್ವನಿ ಎತ್ತಿದ್ದರು ಅದು ಅತಿಥೇಯರು ವಂಚಿಸಿದ್ದಾರೆ ಎಂದು ಪಠಾಣ್ ಹೇಳಿದ್ದಾರೆ.
ನಂತರ ಭಾರತ ಮತ್ತೆ ಬ್ಯಾಟಿಂಗ್ ಮಾಡಲು ಬಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಇರ್ಫಾನ್ ಪಠಾಣ್ ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಇದರಿಂದ ಸಂಗಕ್ಕಾರ ಮತ್ತಷ್ಟು ಕೋಪಗೊಂಡರು. ಪಠಾಣ್ ಅವರನ್ನು ಗುರಿಯಾಗಿಸಿಕೊಂಡು ವೈಯಕ್ತಿಕವಾಗಿ ಮಾತನಾಡಲು ಆರಂಭಿಸಿದರು ಎಂದು ಮಾಜಿ ಭಾರತೀಯ ಆಲ್‌ರೌಂಡರ್ ಹೇಳಿದ್ದಾರೆ. ಜಿಯೋಹಾಟ್‌ಸ್ಟಾರ್‌ನ ‘ಚೀಕಿ ಸಿಂಗಲ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಸಂಗಕ್ಕಾರ ತಮ್ಮ ವಿರುದ್ಧ ಕಠಿಣ ಮಾತುಗಳನ್ನು ಆಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಪಠಾಣ್ ಕೂಡ ಅದಕ್ಕೆ ಪ್ರತಿಯಾಗಿ ಉತ್ತರಿಸಿದ್ದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್‌ನ ಸಾಮಾನ್ಯ ವಾಗ್ವಾದ ವೈಯಕ್ತಿಕ ಮಾತಿನ ಚಕಮಕಿಯಾಗಿ ಬದಲಾಗಿತ್ತು.
ಆದರೆ ಈ ಘಟನೆ ಇಬ್ಬರ ಸಂಬಂಧವನ್ನು ಶಾಶ್ವತವಾಗಿ ಹಾಳು ಮಾಡಲಿಲ್ಲ. ಕೆಲವು ವರ್ಷಗಳ ನಂತರ ಇಬ್ಬರೂ ಐಪಿಎಲ್‌ನಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಪರವಾಗಿ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡರು. ಆಗ ಹಳೆಯ ಘಟನೆ ಮರೆತು ಇಬ್ಬರೂ ಉತ್ತಮ ಸ್ನೇಹಿತರಾದರು. ಪಂಜಾಬ್ ತಂಡದಲ್ಲಿ ಸಂಗಕ್ಕಾರ ಅವರೊಂದಿಗೆ ಆಡಬೇಕೆಂದು ತಿಳಿದಾಗ ತಮಗೆ ಏನು ಮಾಡಬೇಕು ಎಂಬುದು ಅರ್ಥವಾಗಿರಲಿಲ್ಲ ಎಂದು ಪಠಾಣ್ ಹೇಳಿದ್ದಾರೆ. ಕೊನೆಗೆ ತಾವೇ ಸಂಗಕ್ಕಾರ ಬಳಿ ತೆರಳಿ ಕ್ಷಮೆ ಕೇಳಿದ್ದಾಗಿ ಅವರು ತಿಳಿಸಿದ್ದಾರೆ. ಸಂಗಕ್ಕಾರ ಕೂಡ ತಮ್ಮ ತಪ್ಪಿಗೆ ಕ್ಷಮೆ ಕೇಳಿದರು. ಬಳಿಕ ಇಬ್ಬರೂ ಆತ್ಮೀಯ ಸ್ನೇಹಿತರಾದರು. ಭಾವನೆಗಳು ಹೆಚ್ಚಾದಾಗ ಆಟಗಾರರಿಂದ ತಪ್ಪುಗಳು ನಡೆಯಬಹುದು. ಆದರೆ ಆ ತಪ್ಪುಗಳನ್ನು ನಂತರ ಎಷ್ಟು ಪ್ರಬುದ್ಧವಾಗಿ ನಿರ್ವಹಿಸುತ್ತೇವೆ ಎಂಬುದೇ ಮುಖ್ಯ ಎಂಬ ಸಂದೇಶವನ್ನು ಇರ್ಫಾನ್ ಪಠಾಣ್ ಅವರ ಈ ಅನುಭವ ನೀಡುತ್ತದೆ. ಮೈದಾನದಲ್ಲಿ ಎದುರಾಳಿಗಳಾಗಿದ್ದ ಇಬ್ಬರು ಆಟಗಾರರು ನಂತರ ಉತ್ತಮ ಸ್ನೇಹಿತರಾಗಿ ಬೆಳೆದಿರುವುದು ಕ್ರೀಡೆಯ ನಿಜವಾದ ಸ್ಫೂರ್ತಿಯನ್ನೂ ತೋರಿಸುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.