NCA ಸುಧಾರಣೆಗೆ ದ್ರಾವಿಡ್‌-ಗಂಗೂಲಿ ಸೂತ್ರ; ಬೆಂಗಳೂರಿನಲ್ಲೇ ಹೊಸ ಅಕಾಡೆಮಿ!

By Suvarna NewsFirst Published Jan 3, 2020, 9:59 AM IST
Highlights

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(NCA) ಮೇಜರ್ ಸರ್ಜರಿ ಮಾಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. NCA ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿರುವ ಗಂಗೂಲಿ ಸುಧಾರಣೆಗೆ ಹೊಸ ಸೂತ್ರ ಸಿದ್ಧಪಡಿಸಿದ್ದಾರೆ.

ನವದೆಹಲಿ(ಜ.03): ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ತರಬೇತಿ ಪಡೆದ ಆಟಗಾರರೂ ಗಾಯದ ಸಮಸ್ಯೆಗೆ ತುತ್ತಾಗುತ್ತಲೇ ಇರುವ ಬಗ್ಗೆ ಸಾಕಷ್ಟುಗಂಭೀರವಾದ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಕ್ತ ಕ್ರಮಕ್ಕೆ ಮುಂದಾಗಿದೆ. ಬಿಸಿಸಿಐನ ವೈದ್ಯಕೀಯ ತಂಡ ಹಾಗೂ ಸಾಮಾಜಿಕ ಜಾಲತಾಣಗಳ ವಿಭಾಗದ ಸಹಾಯ ಪಡೆದುಕೊಳ್ಳುವ ಲೆಕ್ಕಾಚಾರಕ್ಕೆ ಬಂದದೆ.

ಇದನ್ನೂ ಓದಿ: ದ್ರಾವಿಡ್ ನೇತೃತ್ವದ NCAನಲ್ಲಿ ಬುಮ್ರಾ ಫಿಟ್ನೆಸ್‌ಗೆ ನಕಾರ; ಗಂಗೂಲಿ ಗರಂ!

ಈ ಸಂಬಂಧ ಬಿಸಿಸಿಐ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಮತ್ತು ಎನ್‌ಸಿಎ ಕ್ರಿಕೆಟ್‌ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ರಹುಲ್‌ ದ್ರಾವಿಡ್‌ ಅವರು ಈಗಾಗಲೇ ಬಿಸಿಸಿಐ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಎನ್‌ಸಿಎನಲ್ಲಿ ಲಂಡನ್‌ ಮೂಲದ ವೈದ್ಯಕೀಯ ತಂಡವನ್ನು ಇರಿಸಲು ಬಿಸಿಸಿಐ ನಿರ್ಧರಿಸಿದೆ. ಜತೆಗೆ ಸದ್ಯದಲ್ಲೇ ಖಾಲಿ ಇರುವ ವೇಗದ ಬೌಲಿಂಗ್‌ ಕೋಚ್‌ ನೇಮಕ ಮಾಡಲು ಸಹ ನಿರ್ಧರಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳಿಗೆ ಕಾಲ ಕಾಲಕ್ಕೆ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಗಂಗೂಲಿ, ಮಾಧ್ಯಮ ಕಣ್ತಪ್ಪಿಸಿ ಗ್ರಾಮಕ್ಕೆ ಭೇಟಿ!

ವೃದ್ದಿಮಾನ್‌ ಸಹ ಮತ್ತು ಭುವನೇಶ್ವರ್‌ ಕುಮಾರ್‌ ಹಾಗೂ ಹಾರ್ದಿಕ್‌ ಪಾಂಡ್ಯ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು ಇತ್ತೀಚೆಗೆ ಗಾಯಕ್ಕೆ ತುತ್ತಾದಾಗ ಎನ್‌ಸಿಎ ತರಬೇತಿಗಳ ಬಗ್ಗೆ ಭಾರಿ ಚರ್ಚೆ ಶುರುವಾಗಿತ್ತು. ಈ ಕಾರಣಕ್ಕಾಗಿ ಇದೀಗ ಎನ್‌ಸಿಎ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. 10 ತಿಂಗಳಲ್ಲಿ ಎನ್‌ಸಿಎನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ.

ಒಂದೂವರೆ ವರ್ಷದಲ್ಲಿ ಹೊಸ ಎನ್‌ಸಿಎ ಆರಂಭ
ಬೆಂಗಳೂರು ಹೊರ ವಲಯದಲ್ಲಿರುವ ದೇವನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಹೊಸ ಎನ್‌ಸಿಎ ಇನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ. 40 ಎಕರೆ ಜಾಗದಲ್ಲಿ ತಲೆ ಎತ್ತಲಿರುವ ಎನ್‌ಸಿಎ ಆವರಣದಲ್ಲಿ ಅತ್ಯಾಧುನಿಕ ಜಿಮ್‌, ಅಭ್ಯಾಸಕ್ಕಾಗಿ ಎಲ್ಲಾ ರೀತಿಯ ಪಿಚ್‌ಗಳು, ವೈದ್ಯಕೀಯ ಸೌಲಭ್ಯ, ಪಂಚತಾರಾ ಹೋಟೆಲ್‌ ರೀತಿಯ ಸೌಲಭ್ಯ ಇರಲಿದೆ ಎನ್ನಲಾಗಿದೆ.

click me!