
ಹೊನ್ನಾವರ (ಅ.2): ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ, ಸ್ಟಾರ್ ಆರಂಭಿಕ ಆಟಗಾರ್ತಿ ಹಾಗೂ ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎರಡು ಬಾರಿ (2024 ಮತ್ತು 2026) ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವಿ ನಾಯಕಿ ಸ್ಮೃತಿ ಮಂಧಾನ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಬಂಗಾರಮಕ್ಕಿಗೆ (ಹೇಮಾಪುರ) ಭೇಟಿ ನೀಡಿದ್ದಾರೆ.
ಕ್ಷೇತ್ರಕ್ಕೆ ಆಗಮಿಸಿದ ಸ್ಮೃತಿ ಮಂಧಾನ ಅವರು ಶ್ರೀ ವೀರಾಂಜನೇಯ ಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಪೂಜ್ಯ ಗುರೂಜಿಯವರು ಸ್ಮೃತಿ ಮಂಧಾನ ಅವರಿಗೆ ಆಂಜನೇಯ ಸ್ವಾಮಿಯ ಭಾವಚಿತ್ರ ನೀಡಿ, ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪೆ ಸಮೀಪವಿರುವ ಶ್ರೀಕ್ಷೇತ್ರ ಬಂಗಾರಮಕ್ಕಿಯು ಶರಾವತಿ ನದಿಯ ಬಲದಂಡೆಯಲ್ಲಿದ್ದು, ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯದ ನಡುವೆ ಮೈದಳೆದು ನಿಂತಿದೆ. ದಿವಂಗತ ವೇದ ಬ್ರಹ್ಮ ಶ್ರೀ ಗಣೇಶ ಭಟ್ ಅವರು ಶ್ರೀಧರ ಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಸ್ಥಾಪಿಸಿದ ಈ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಪ್ರಮುಖ ಆರಾಧ್ಯ ದೈವವಾಗಿದೆ.
ಪ್ರತಿದಿನ ತ್ರಿಕಾಲ ಪೂಜೆ ನಡೆಯುವ ಈ ಕ್ಷೇತ್ರದಲ್ಲಿ ಶುಕ್ರವಾರ ಮತ್ತು ಸೋಮವಾರದಂದು 'ಹೇಳಿಕೆ ಸೇವೆ'ಯ ವಿಶೇಷ ದರ್ಶನವಿರುತ್ತದೆ. ಯುಗಾದಿ ವಸಂತೋತ್ಸವ, ಹನುಮ ಜಯಂತಿ ಬ್ರಹ್ಮರಥೋತ್ಸವ, ರಾಮೋತ್ಸವ, ಶರನ್ನವರಾತ್ರಿ ಯಕ್ಷಗಾನ ಹಾಗೂ ಕಾರ್ತಿಕ ದೀಪೋತ್ಸವಗಳು ಕ್ಷೇತ್ರದ ಪ್ರಮುಖ ಉತ್ಸವಗಳಾಗಿದ್ದು, ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಅವರು ಪೀಠಾಧಿಪತಿಗಳಾಗಿ ಕ್ಷೇತ್ರದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ವಿಶ್ವ ದಾಖಲೆಗಳನ್ನು ಬರೆದಿರುವ ಸ್ಮೃತಿ ಮಂಧಾನ ಪ್ರಸ್ತುತ ಜಾಗತಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಮೈದಾನದಲ್ಲಿ ಸ್ಫೋಟಕ ಆಟದ ಮೂಲಕ ಕೋಟ್ಯಂತರ ಕನ್ನಡಿಗರು ಹಾಗೂ ಭಾರತೀಯರ ಮನಗೆದ್ದಿರುವ ಅವರು, ಬಿಡುವಿನ ವೇಳೆಯಲ್ಲಿ ಶರಾವತಿ ತೀರದ ಈ ಪವಿತ್ರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.