ಸನ್‌ರೈಸರ್ಸ್‌ ಹೈದರಾಬಾದ್‌ಗೆ ಅಭಿಷೇಕ್ ಶರ್ಮಾ ಗುಡ್‌ಬೈ? ಕಾವ್ಯ ಮಾರನ್ ಮೇಲೆ ಸಿಟ್ಟಾದ ಸ್ಪೋಟಕ ಬ್ಯಾಟರ್..!

Published : Oct 02, 2026, 06:52 PM IST
Abhishek Sharma

ಸಾರಾಂಶ

ನಾಯಕತ್ವ ಕೈತಪ್ಪಿದ ಕಾರಣ ಅಭಿಷೇಕ್ ಶರ್ಮಾ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈ, ಗುಜರಾತ್ ಸೇರಿದಂತೆ ಹಲವು ತಂಡಗಳು ಇವರನ್ನು ಸೆಳೆಯಲು ಯತ್ನಿಸುತ್ತಿವೆ ಎನ್ನಲಾಗಿದೆ. ಆದರೆ, ಈ ಗಾಳಿಸುದ್ದಿಯನ್ನು ಹೈದರಾಬಾದ್ ತಂಡದ ಸಿಇಒ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಬೆಂಗಳೂರು: 2027ರ ಐಪಿಎಲ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿದೆ. ಹೀಗಿರುವಾಗಲೇ ಆರೆಂಜ್ ಆರ್ಮಿ ಪಾಳಯದಲ್ಲಿ ಮಹತ್ವದ ಸುದ್ದಿಯೊಂದು ಸದ್ದು ಮಾಡುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ತೊರೆಯಲು ಅಭಿಷೇಕ್ ಶರ್ಮಾ ಮುಂದಾಗಿದ್ದಾರೆ ಎನ್ನುವಂತಹ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2026ರ ಐಪಿಎಲ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ತೋರಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೂರನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತ್ತು. ಗ್ರೂಪ್‌ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲು ಸಹಿತ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಆದರೆ ಎಲಿಮಿನೇಟರ್‌ ಪಂದ್ಯದಲ್ಲಿ ಇಶಾನ್ ಕಿಶನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 20ನೇ ಸೀಸನ್‌ಗೆ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಸಜ್ಜಾಗುತ್ತಿರುವ ಬೆನ್ನಲ್ಲೇ ಕಾವ್ಯ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮೇಲೆ ಅಭಿಷೇಕ್ ಶರ್ಮಾ ಸಿಟ್ಟಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸನ್‌ರೈಸರ್ಸ್ ಪರ ಅದ್ಭುತ ಪ್ರದರ್ಶನ ತೋರಿದ್ದ ಅಭಿಷೇಕ್ ಶರ್ಮಾ:

18ನೇ ಸೀಸನ್‌ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡ ಹೊಂದಿದ್ದರೂ ಸನ್‌ರೈಸರ್ಸ್ ಹೈದರಾಬಾದ್ ತಂಡವು ಹೀನಾಯ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಆರೆಂಜ್ ಆರ್ಮಿಯು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌ಗೆ ನಾಯಕತ್ವ ಪಟ್ಟ ಕಟ್ಟಿತ್ತು. 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ಲೇ ಆಫ್‌ಗೇರುವಲ್ಲಿ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ 15 ಪಂದ್ಯಗಳನ್ನಾಡಿದ್ದ ಅಭಿಷೇಕ್ ಶರ್ಮಾ, ಒಂದು ಶತಕ ಹಾಗೂ 4 ಆಕರ್ಷಕ ಅರ್ಧಶತಕ ಸಹಿತ 198.52ರ ಸ್ಟ್ರೈಕ್‌ರೇಟ್‌ನಲ್ಲಿ 563 ರನ್ ಚಚ್ಚಿದ್ದರು.

ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮೇಲೆ ಅಭಿಷೇಕ್ ಶರ್ಮಾ ಸಿಟ್ಟಾಗಿದ್ದೇಕೆ?

ಅಂದಹಾಗೆ ಕಳೆದ ಸೀಸನ್‌ ಐಪಿಎಲ್ ಟೂರ್ನಿಗೆ ಪ್ಯಾಟ್ ಕಮಿನ್ಸ್ ಅಲಭ್ಯರಾಗುವುದು ತಿಳಿಯುತ್ತಿದ್ದಂತೆಯೇ ಅಭಿಷೇಕ್ ಶರ್ಮಾ, ಆರೆಂಜ್ ಆರ್ಮಿ ಪಡೆಯ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು, ಅಭಿಷೇಕ್ ಶರ್ಮಾ ಅವರನ್ನು ಬಿಟ್ಟು ಇಶಾನ್ ಕಿಶನ್‌ಗೆ ನಾಯಕತ್ವ ಪಟ್ಟ ಕಟ್ಟಿದ್ದರು. ಇದು ಅಭಿಷೇಕ್ ಶರ್ಮಾ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಅಭಿಷೇಕ್ ಶರ್ಮಾ ಆರೆಂಜ್ ಆರ್ಮಿ ತೊರೆದು ಬೇರೆ ತಂಡಗಳತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಶರ್ಮಾ ಮೇಲೆ ಕಣ್ಣಿಟ್ಟಿವೆ ಈ ನಾಲ್ಕು ತಂಡಗಳು:

ಅಂದಹಾಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಒಂದು ಕಾಲು ಹೊರಗಿಟ್ಟಿರುವ ಅಭಿಷೇಕ್ ಶರ್ಮಾ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಒಲವು ತೋರಿವೆ ಎನ್ನಲಾಗಿದೆ. ಇದಷ್ಟೇ ಅಲ್ಲದೇ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡಾ ಈ ಎಡಗೈ ಬ್ಯಾಟರ್‌ನನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ರಣತಂತ್ರ ಹೆಣೆಯುತ್ತಿವೆ ಎಂದು ವರದಿಯಾಗಿದೆ.

ಗಾಳಿಸುದ್ದಿಯನ್ನು ಅಲ್ಲಗಳೆದ ಸನ್‌ರೈಸರ್ಸ್ ಹೈದರಾಬಾದ್ ಸಿಇಒ:

ಇನ್ನು ಅಭಿಷೇಕ್ ಶರ್ಮಾ ಸನ್‌ರೈಸರ್ಸ್ ಹೈದರಾಬಾದ್ ತೊರೆಯಲಿದ್ದಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸನ್‌ರೈಸರ್ಸ್ ಹೈದರಾಬಾದ್ ಸಿಇಒ, ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket; 2027ರ ವಿಶ್ವಕಪ್‌ನಲ್ಲಿ ಎಷ್ಟು ಬಾರಿ ಮುಖಾಮುಖಿಯಾಗಲಿದೆ ಭಾರತ-ಪಾಕಿಸ್ತಾನ? ಹಳೆಯ ದಾಖಲೆ ಏನು ಹೇಳುತ್ತೆ?
ಈತ ಶೀಘ್ರದಲ್ಲೇ ಟೀಮ್‌ ಇಂಡಿಯಾ ಉಪನಾಯಕ ಆಗ್ತಾನೆ, ಆಕಾಶ್‌ ಚೋಪ್ರಾ ಬೋಲ್ಡ್‌ ಪ್ರೆಡಿಕ್ಷನ್‌