
ಮುಂಬೈ(ಡಿ.12): ಭಾರತದ ತಾರಾ ಬ್ಯಾಟರ್ ಸ್ಮೃತಿ ಮಂಧನಾ, ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅದ್ಭುತ ಪ್ರದರ್ಶನದ ನೆರವಿನಿಂದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ತಂಡವು ಸೂಪರ್ ಓವರ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿವೆ. 2022ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ 16 ಪಂದ್ಯಗಳನ್ನು ಗೆದ್ದು ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಆಸ್ಟ್ರೇಲಿಯಾಗೆ ಸೋಲಿನ ಶಾಕ್ ನೀಡುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ.
ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ, ಭಾರತ ತಂಡವು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿತ್ತು. ಯಾಕೆಂದರೆ ಮೊದಲ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ, ಎರಡನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕಣಕ್ಕಿಳಿದಿತ್ತು. ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ನಾಯಕಿ ಅಲಿಸಾ ಹೀಲಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಬೆಥ್ ಮೂನಿ ಅಜೇಯ 82 ಹಾಗೂ ತಾಹಿಲಾ ಮೆಗ್ರಾಥ್ ಅಜೇಯ 70 ರನ್ ಬಾರಿಸುವ ಮೂಲಕ ಕಾಂಗರೂ ಪಡೆ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 76 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಶಫಾಲಿ ವರ್ಮಾ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 21 ರನ್ ಸಿಡಿಸಿದರು. ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಸ್ಮೃತಿ ಮಂಧನಾ ಕೇವಲ 49 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 79 ರನ್ ಬಾರಿಸುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು.
Ind vs Ban ಇಶಾನ್ ಕಿಶನ್ ಒಂದು ದ್ವಿಶತಕ: ಹಲವು ದಾಖಲೆಗಳು ನುಚ್ಚುನೂರು..!
ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅಜೇಯ 26 ಹಾಗೂ ದೇವಿಕಾ ವೈದ್ಯ ಸಮಯೋಚಿತ 11 ರನ್ ಸಿಡಿಸುವ ಮೂಲಕ ಪಂದ್ಯ ಟೈ ಆಗುವಂತೆ ಮಾಡಿದರು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.
ಹೇಗಿತ್ತು ಸೂಪರ್ ಓವರ್:
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ರಿಚಾ ಘೋಷ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರು. ಆದರೆ ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಎಸೆತದಲ್ಲಿ ಹರ್ಮನ್‌ಪ್ರೀತ್ ಕೌರ್ ಒಂದು ರನ್ ಗಳಿಸಿ ಸ್ಮೃತಿ ಮಂಧನಾಗೆ ಸ್ಟ್ರೈಕ್ ನೀಡಿದರು. ಸ್ಮೃತಿ ಮಂಧನಾ ನಾಲ್ಕನೇ ಎಸೆತದಲ್ಲಿ ಬೌಂಡರಿ, ಐದನೇ ಎಸೆತದಲ್ಲಿ ಸಿಕ್ಸರ್ ಹಾಗೂ ಕೊನೆಯ ಎಸೆತದಲ್ಲಿ 3 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾಗೆ ಗೆಲ್ಲಲು 21 ರನ್‌ಗಳ ಸವಾಲಿನ ಗುರಿ ನೀಡಿತು.
ಇನ್ನು ಸೂಪರ್ ಓವರ್ ಗೆಲ್ಲಲು ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಅಲಿಸಾ ಹೀಲಿ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇನ್ನು ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಗಾರ್ಡ್ನರ್, ರಾಧಾ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು 4ನೇ ಎಸೆತದಲ್ಲಿ ತಾಹಿಲಾ ಮೆಗ್ರಾಥ್ ಒಂದು ರನ್ ಗಳಿಸಿದರು. ಇನ್ನು ಕೊನೆಯ ಎರಡು ಎಸೆತಗಳಲ್ಲಿ ಹೀಲಿ ಕ್ರಮವಾಗಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.