ಬಾಂಗ್ಲಾ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಔಟ್, ತಂಡಕ್ಕೆ ಆಯ್ಕೆಯಾದ ಬಂಗಾಳ ಬ್ಯಾಟ್ಸ್‌ಮನ್!

By Suvarna NewsFirst Published Dec 11, 2022, 8:10 PM IST
Highlights

ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಇಂಜುರಿ ಲಿಸ್ಟ್ ಬೆಳೆಯುತ್ತಿದೆ. ಇದೀಗ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಅಲಭ್ಯತೆಯನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಇದರ ಜೊತೆಗೆ ರೋಹಿತ್ ಬದಲಿ ಆಟಗಾರನನ್ನು ಆಯ್ಕೆ ಮಾಡಿದೆ.

ಮುಂಬೈ(ಡಿ.11): ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಆದರೆ ಟೀಂ ಇಂಡಿಯಾದ ಗಾಯದ ಸಮಸ್ಯೆ ತೀವ್ರ ಹಿನ್ನಡೆ ತರುತ್ತಿದೆ. ಏಕದಿನ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾದ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಲಭ್ಯತೆ ಕುರಿತು ಬಿಸಿಸಿಐ ವೈದ್ಯಕೀಯ ತಂಡ ಖಚಿತಪಡಿಸಲಿದೆ. ಇದೀಗ ರೋಹಿತ್ ಶರ್ಮಾ ಸ್ಥಾನಕ್ಕೆ ಪಶ್ಚಿಮ ಬಂಗಾಳದ ಯುವ ಕ್ರಿಕೆಟಿಗ ಅಭಿಮನ್ಯು ಈಶ್ವರನ್ ಆಯ್ಕೆಯಾಗಿದ್ದಾರೆ.

ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತ ‘ಎ’ ತಂಡವನ್ನು ಮುನ್ನಡೆಸುತ್ತಿರುವ ಅಭಿಮನ್ಯು ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 141 ರನ್‌ ಗಳಿಸಿದ್ದರು. ಸದ್ಯ ಚಾಲ್ತಿಯಲ್ಲಿರುವ 2ನೇ ಪಂದ್ಯದಲ್ಲಿ 157 ರನ್‌ ಗಳಿಸಿದ್ದಾರೆ. ರಣಜಿ, ಲಿಸ್ಟ್ ಎ ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಅಭಿಮನ್ಯು ಈಶ್ವರನ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಅಭಿಮನ್ಯು ಈಶ್ವರನ್‌ಗೆ ಟೀಂ ಇಂಡಿಯಾದಿಂದ ಬುಲಾವ್ ಬಂದಿದೆ.

Ind vs Ban ಇಶಾನ್ ಕಿಶನ್ ಒಂದು ದ್ವಿಶತಕ: ಹಲವು ದಾಖಲೆಗಳು ನುಚ್ಚುನೂರು..!

ರೋಹಿತ್ ಶರ್ಮಾ ಅಳಭ್ಯತೆಯಿಂದ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ರಾಹುಲ್ ನಾಯಕತ್ವದಲ್ಲಿನ ಟೀಂ ಇಂಡಿಯಾದಲ್ಲಿ ಮತ್ತಷ್ಟು ಬದಲಾವಣೆಗಳಿವೆ. ಈಗಾಗಲೇ ಇಂಜುರಿಯಾಗಿದ್ದ ವೇಗಿ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇಬ್ಬರು ಆಟಗಾರರು ಎರಡೂ ಟೆಸ್ಟ್ ಪಂದ್ಯಕ್ಕೆ ಲಭ್ಯರಿಲ್ಲ ಎಂದು ಬಿಸಿಸಿಐ ಹೇಳಿದೆ.

ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಬದಲಿ ಆಟಗಾರರಾಗಿ ನವದೀಪ್ ಸೈನಿ ಹಾಗೂ ಸೌರಬ್ ಕುಮಾರ್ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಜಯದೇವ್ ಉನಾದ್ಕಟ್ ಹೆಸರನ್ನು ತಂಡಕ್ಕೆ ಸೇರಿಸಲಾಗಿದೆ. ಕಳೆದ ವರ್ಷ ರಣಜಿ ಟ್ರೋಫಿಯ ಗರಿಷ್ಠ ವಿಕೆಟ್‌ ಸರದಾರ ಎನಿಸಿದ್ದ ಉನಾದ್ಕತ್‌, ಇತ್ತೀಚೆಗೆ ಮುಕ್ತಾಯಗೊಂಡ ವಿಜಯ್‌ ಹಜಾರೆ ಟೂರ್ನಿಯಲ್ಲೂ ಅತಿಹೆಚ್ಚು ವಿಕೆಟ್‌ ಪಡೆದಿದ್ದರು. 2010ರಲ್ಲಿ ಉನಾದ್ಕತ್‌ ದ.ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್‌ ಆಡಿದ್ದರು. ಭಾರತ ಪರ 7 ಏಕದಿನ, 10 ಟಿ20 ಪಂದ್ಯಗಳನ್ನು ಸಹ ಅವರು ಆಡಿದ್ದಾರೆ. ಕೆಎಲ್ ರಾಹುಲ್‌ಗೆ ನಾಯಕ ಪಟ್ಟ ನೀಡಿರುವ ಕಾರಣ ಚೇತೇಶ್ವರ್ ಪೂಜಾರಗೆ ಉಪನಾಯಕನ ಸ್ಥಾನ ನೀಡಲಾಗಿದೆ. 

ಚೆಂಡು ವಿರೂಪಕ್ಕಿತ್ತು ಆಸ್ಪ್ರೇಲಿಯಾ ಅನುಮತಿ! Ball Tampering ಬಗ್ಗೆ ವಾರ್ನರ್ ಮ್ಯಾನೇಜರ್ ಅಚ್ಚರಿಯ ಹೇಳಿಕೆ

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ
ಕೆಎಲ್ ರಾಹುಲ್(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಸ್ ಭರತ್, ರವೀಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್

 

click me!