
ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧನಾ ಕಳೆದೊಂದು ತಿಂಗಳಿನಿಂದ ವೃತ್ತಿ ಬದುಕು ಹಾಗೂ ಖಾಸಗಿ ಬದುಕಿನ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಭಾರತದಲ್ಲೇ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ, ಭಾರತ ಪರ ಗರಿಷ್ಠ ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಚೊಚ್ಚಲ ಬಾರಿಗೆ ಮಹಿಳಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಇದರ ಬೆನ್ನಲ್ಲೇ ಸಂಗೀತ ನಿರ್ದೇಶಕ ಹಾಗೂ ಫಿಲ್ಮ್‌ಮೇಕರ್ ಪಲಾಶ್ ಮುಚ್ಚಲ್ ಜತೆಗೆ ಮದುವೆ ಕೂಡಾ ನಿಶ್ಚಯವಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ನವೆಂಬರ್ 23, 2025ರಂದು ಸ್ಮೃತಿ ಮಂಧನಾ ಜತೆ ಪಲಾಶ್ ಮುಚ್ಚಲ್ ಮದುವೆಯಾಗಬೇಕಿತ್ತು. ಆದರೆ ಸ್ಮೃತಿ ಮಂಧನಾ ಅವರ ತಂದೆ ಶ್ರೀನಿವಾಸ್ ಮಂಧನಾ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದರಿಂದ, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದೀಗ ಪಲಾಶ್ ಮುಚ್ಚಲ್ ಅವರ ಜತೆಗಿನ ಮದುವೆ ಅಧಿಕೃತವಾಗಿ ರದ್ದಾಗಿದೆ. ಸದ್ಯ ಸ್ಮೃತಿ ಮಂಧನಾ ಕಠಿಣ ಪರೀಕ್ಷೆಯ ದಿನಗಳನ್ನು ಎದುರಿಸುತ್ತಿದ್ದಾರೆ.
ಬುಧವಾರ ಮದುವೆ ಬ್ರೇಕ್ ಅಪ್ ಬಳಿಕ ಮೊದಲ ಸಲ ಸಾರ್ವಜನಿಕವಾಗಿ ಸ್ಮೃತಿ ಮಂಧನಾ ಕಾಣಿಸಿಕೊಂಡರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಜತೆಯಾಗಿ ಸ್ಮೃತಿ ಮಂಧನಾ ಮೊದಲ ಸಲ ಕಾಣಿಸಿಕೊಂಡರು. ಈ ವೇಳೆ ತಮ್ಮ ಬದುಕಿನಲ್ಲಿ ಎದುರಾದ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. 'ನಾನು ಕ್ರಿಕೆಟ್ ಅನ್ನು ಇಷ್ಟಪಟ್ಟಷ್ಟು ಮತ್ತೆ ಯಾವುದನ್ನೂ ಇಷ್ಟಪಟ್ಟಿಲ್ಲ. ಭಾರತ ತಂಡದ ಜೆರ್ಸಿ ತೊಟ್ಟಾಗ ಸಿಗುವ ಸ್ಪೂರ್ತಿಯೇ ನನ್ನನ್ನು ಮುನ್ನಡೆಸುತ್ತದೆ' ಎಂದು ಮಂಧನಾ ಹೇಳಿದ್ದಾರೆ. 'ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬದಿಗಿಡಿ, ಮತ್ತು ಆ ಆಲೋಚನೆ ಮಾತ್ರ ನಿಮಗೆ ಜೀವನದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ' ಎಂದು ಬ್ರೇಕ್ ಅಪ್ ಬಳಿಕ ಮೂವ್ ಆನ್ ಆಗುವ ಸಲಹೆ ನೀಡಿದ್ದಾರೆ ಮಂಧನಾ.
ವೈಯಕ್ತಿಕ ಕಷ್ಟಗಳನ್ನು ಎದುರಿಸುತ್ತಿದ್ದರೂ ಸಹ, ಕ್ರಿಕೆಟ್ ಅವರಿಗೆ ಮೇಲೆ ಅವರಿಗಿರುವ ಬದ್ದತೆ ಮತ್ತು ಅದೇ ಶಕ್ತಿಯ ಮೂಲವಾಗಿ ಉಳಿದಿದೆ ಎಂಬುದನ್ನು ಅವರ ಮಾತುಗಳು ಎತ್ತಿ ತೋರಿಸುತ್ತವೆ.
ಅದೇ ಕಾರ್ಯಕ್ರಮದಲ್ಲಿ, ಮಂಧನಾ ಒಬ್ಬ ಕ್ರಿಕೆಟಿಗರಾಗಿ ತನ್ನ ಪ್ರಯಾಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 'ಬಾಲ್ಯದಲ್ಲಿ, ಬ್ಯಾಟಿಂಗ್ ಹುಚ್ಚು ಯಾವಾಗಲೂ ಇತ್ತು. ಯಾರಿಗೂ ಅದು ಅರ್ಥವಾಗಲಿಲ್ಲ, ಆದರೆ ನನ್ನ ಮನಸ್ಸಿನಲ್ಲಿ, ನಾನು ಯಾವಾಗಲೂ ವಿಶ್ವ ಚಾಂಪಿಯನ್ ಎಂದು ಕರೆಸಿಕೊಳ್ಳಬೇಕು ಎಂದು ಬಯಸುತ್ತಿದ್ದೆ' ಎಂದು ಅವರು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. 'ನಾನು ಯಾವಾಗಲೂ ತುಂಬಾ ಸರಳ ವ್ಯಕ್ತಿ. ನಾನು ನನ್ನ ಜೀವನವನ್ನು ಅತಿಯಾಗಿ ಯೋಚಿಸುವುದರಿಂದ ಸಂಕೀರ್ಣಗೊಳಿಸುವುದಿಲ್ಲ' ಎಂದು ಕ್ರೀಡೆಯ ಬಗೆಗಿನ ತನ್ನ ಬದ್ದತೆಯನ್ನು ಒತ್ತಿ ಹೇಳಿದ್ದಾರೆ.
"ಮೈದಾನದಲ್ಲಿ ಏನಾಗುತ್ತದೆಯೋ, ಎಲ್ಲರೂ ಅದನ್ನು ನೋಡುತ್ತಾರೆ ಮತ್ತು ಅದರ ಮೇಲೆ ನಿರ್ಣಯಿಸುತ್ತಾರೆ, ಆದರೆ ನಾನು ನನ್ನನ್ನು ಅಥವಾ ತಂಡವನ್ನು ನಿರ್ಣಯಿಸುವುದು ನಾವು ತೆರೆಮರೆಯಲ್ಲಿ ಮಾಡುವ ಕೆಲಸದ ಮೇಲೆ" ಎಂದು ಸ್ಮೃತಿ ಮಂಧನಾ ಹೇಳಿದ್ದಾರೆ.
ಇದಕ್ಕೂ ಮೊದಲು, ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಇಬ್ಬರೂ ಮದುವೆ ಮುರಿದುಬಿದ್ದಿದ್ದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದೃಢಪಡಿಸಿದ್ದರು. ಸ್ಮೃತಿ ತನ್ನ ಕ್ರಿಕೆಟ್ ವೃತ್ತಿಜೀವನದತ್ತ ಗಮನಹರಿಸಿದ್ದರಿಂದ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದರು. ಇದೀಗ ಸ್ಮೃತಿ ಮಂಧನಾ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಲು ತೀರ್ಮಾನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.