ಗಿಲ್-ರಿಂಕು: ಐಪಿಎಲ್‌-16ರಲ್ಲಿ ಉದಯಿಸಿದ 11 ನವತಾರೆಯರು!

By Kannadaprabha NewsFirst Published Jun 1, 2023, 10:48 AM IST
Highlights

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿ
ಈ ಬಾರಿ ಮತ್ತೆ 11 ತಾರಾ ಆಟಗಾರರ ಉಗಮ
ಈ ಬಾರಿ ಮಿಂಚಿದ ಹೊಸ ಐಪಿಎಲ್‌ ತಾರೆಗಳ ಪರಿಚಯ

ಬೆಂಗಳೂರು(ಜೂ.01): ಪ್ರತಿ ಐಪಿಎಲ್‌ ಆವೃತ್ತಿಯು ಹೊಸ ಹೊಸ ತಾರೆಯರನ್ನು, ಭವಿಷ್ಯದ ಸೂಪರ್‌ ಸ್ಟಾರ್‌ಗಳನ್ನು ಕ್ರಿಕೆಟ್‌ ಲೋಕಕ್ಕೆ ಪರಿಚಯಿಸುತ್ತದೆ. ಐಪಿಎಲ್‌ನಿಂದಾಗಿ ಎಷ್ಟೋ ಕ್ರಿಕೆಟಿಗರ ಜೀವನವೇ ಬದಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ 16ನೇ ಆವೃತ್ತಿಯ ಐಪಿಎಲ್‌ನಲ್ಲೂ ಅನೇಕರು ಮಿಂಚು ಹರಿಸಿದರು. ಕೆಲ ಆಟಗಾರರು ತಮ್ಮ ಪ್ರದರ್ಶನ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರೆ ಇನ್ನೂ ಕೆಲವರು ಸಿಕ್ಕ ಮೊದಲ ಅವಕಾಶವನ್ನೇ ಸದ್ಬಳಕೆ ಮಾಡಿಕೊಂಡರು. 16ನೇ ಐಪಿಎಲ್‌ನಲ್ಲಿ ಉದಯಿಸಿದ 11 ನವತಾರೆಯರ ಕಿರು ಪರಿಚಯ ಇಲ್ಲಿದೆ.

1. ಶುಭ್‌ಮನ್‌ ಗಿಲ್‌

ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ ಸ್ಟಾರ್‌ ಎಂದೇ ಕರೆಸಿಕೊಳ್ಳುತ್ತಿರುವ ಶುಭ್‌ಮನ್‌ ಗಿಲ್‌, ಈ ಬಾರಿ ಐಪಿಎಲ್‌ನಲ್ಲಿ ತಮ್ಮಲ್ಲಿರುವ ಪ್ರತಿಭೆಯ ಅಗಾಧತೆ ಎಷ್ಟುಎನ್ನುವುದನ್ನು ಪ್ರದರ್ಶಿಸಿದರು. 17 ಪಂದ್ಯದಲ್ಲಿ 3 ಶತಕ, 4 ಅರ್ಧಶತಕಗಳೊಂದಿಗೆ 890 ರನ್‌ ಕಲೆಹಾಕಿ ಹಲವು ದಾಖಲೆ ಬರೆದರು.

2. ಯಶಸ್ವಿ ಜೈಸ್ವಾಲ್‌

ದೇಸಿ ಟೂರ್ನಿಗಳಲ್ಲಿ ರಾಶಿ ರಾಶಿ ರನ್‌ ಪೇರಿಸಿ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್‌ ಈ ಬಾರಿ ಮಿಂಚಿದ ಮತ್ತೊಬ್ಬ ಪ್ರಮುಖ ಯುವ ಕ್ರಿಕೆಟಿಗ. ರಾಜಸ್ಥಾನ ರಾಯಲ್ಸ್‌ನ ಆರಂಭಿಕ 14 ಪಂದ್ಯಗಳಲ್ಲಿ 625 ರನ್‌ ಕಲೆಹಾಕಿದರು. 1 ಶತಕ, 5 ಅರ್ಧಶತಕ ಬಾರಿಸಿದ ಜೈಸ್ವಾಲ್‌ರಿಂದ 82 ಬೌಂಡರಿ, 26 ಸಿಕ್ಸರ್‌ ದಾಖಲಾಯಿತು.

3. ಋುತುರಾಜ್‌ ಗಾಯಕ್ವಾಡ್‌

ಕಳೆದ ಆವೃತ್ತಿ ಋುತುರಾಜ್‌ ಗಾಯಕ್ವಾಡ್‌ ಪಾಲಿಗೆ ಮರುಜನ್ಮವಿದ್ದಂತೆ. 2021ರಲ್ಲಿ 635 ರನ್‌ ಕಲೆಹಾಕಿ ಭಾರತ ತಂಡಕ್ಕೂ ಕಾಲಿಟ್ಟಿದ್ದ ಗಾಯಕ್ವಾಡ್‌ ಕಳೆದ ವರ್ಷ ಮಂಕಾಗಿದ್ದರು. ಟೀಂ ಇಂಡಿಯಾದಿಂದಲೂ ಹೊರಬಿದ್ದಿರುವ ಸಿಎಸ್‌ಕೆ ಆರಂಭಿಕ ಈ ಬಾರಿ 16 ಪಂದ್ಯದಲ್ಲಿ 590 ರನ್‌ ಕಲೆಹಾಕಿ ಮತ್ತೆ ಗಮನ ಸೆಳೆದಿದ್ದಾರೆ.

4. ರಿಂಕು ಸಿಂಗ್‌

ಕೆಕೆಆರ್‌ ಪ್ಲೇ-ಆಫ್‌ಗೇರದಿದ್ದರೂ ರಿಂಕು ಸಿಂಗ್‌ ಸಾಹಸ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಉ.ಪ್ರದೇಶದ 26ರ ರಿಂಕು, ಗುಜರಾತ್‌ ವಿರುದ್ಧ ಕೊನೆ ಓವರಲ್ಲಿ 5 ಸಿಕ್ಸರ್‌ ಸಿಡಿಸಿ ಪಂದ್ಯ ಗೆಲ್ಲಿಸಿದ್ದು ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಕ್ಷಣವಾಗಿ ಉಳಿಯಲಿದೆ. ರಿಂಕು ಸದ್ಯದಲ್ಲೇ ಭಾರತ ತಂಡಕ್ಕೆ ಕಾಲಿಡುವ ನಿರೀಕ್ಷೆ ಇದೆ.

5. ಕ್ಯಾಮರೂನ್‌ ಗ್ರೀನ್‌

23ರ ಆಸ್ಪ್ರೇಲಿಯಾ ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌ರನ್ನು ಮುಂಬೈ ತಂಡವು ಹರಾಜಿನಲ್ಲಿ 17.5 ಕೋಟಿ ರು.ಗೆ ಖರೀದಿಸಿದಾಗ ಎಲ್ಲರೂ ಬೆರಗಾಗಿದ್ದರು. ಆದರೆ ಗ್ರೀನ್‌ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. 1 ಶತಕ, 2 ಅರ್ಧಶತಕದೊಂದಿಗೆ 452 ರನ್‌ ಕಲೆಹಾಕಿದ ಗ್ರೀನ್‌, 6 ವಿಕೆಟ್‌ ಸಹ ಪಡೆದರು.

6. ಸಾಯಿ ಸುದರ್ಶನ್‌

ಫೈನಲ್‌ನಲ್ಲಿ ಜಡೇಜಾ ಜಾದೂ ನಡೆಸದೆ ಹೋಗಿದ್ದರೆ ಪಂದ್ಯಶ್ರೇಷ್ಠ ಪ್ರಶಸ್ತಿ ಗುಜರಾತ್‌ ಟೈಟಾನ್ಸ್‌ನ 22 ವರ್ಷದ ಸಾಯಿ ಸುದರ್ಶನ್‌ಗೆ ಸಿಗುತ್ತಿತ್ತು. ಫೈನಲ್‌ನ ಒತ್ತಡದಲ್ಲಿ ಸುದರ್ಶನ್‌ ತಮ್ಮ ಇನ್ನಿಂಗ್‌್ಸಗೆ ವೇಗ ತುಂಬಿದ ರೀತಿ ನೋಡುಗರನ್ನು ಬೆರಗಾಗಿಸಿತು. 8 ಪಂದ್ಯಗಳಲ್ಲಿ ಅವರು 362 ರನ್‌ ಚಚ್ಚಿ ಗಮನ ಸೆಳೆದರು.

7. ತಿಲಕ್‌ ವರ್ಮಾ

ಮುಂಬೈನ ‘ಆಪತ್ಭಾಂದವ’ ಎಂದೇ ಬಿಂಬಿತಗೊಂಡಿರುವ 21ರ ತಿಲಕ್‌ ವರ್ಮಾ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ತೋರಿದ ಕೆಲವೇ ಕೆಲವರಲ್ಲಿ ಒಬ್ಬರು. ತಿಲಕ್‌ ಒತ್ತಡ ನಿರ್ವಹಿಸುವ, ಜೊತೆಯಾಟದಲ್ಲಿ ಭಾಗಿಯಾಗುವ ರೀತಿ ಕ್ರಿಕೆಟ್‌ ತಜ್ಞರ ಮನಸೆಳೆದಿದೆ. ಸದ್ಯದಲ್ಲೇ ಭಾರತ ತಂಡಕ್ಕೂ ಕಾಲಿಡುವ ನಿರೀಕ್ಷೆ ಇದೆ.

8. ಮಥೀಶ ಪತಿರನ

ಈ ಐಪಿಎಲ್‌ನಲ್ಲಿ ಡೆತ್‌ ಓವರ್‌ (16-20)ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಬೌಲರ್‌ ಮಥೀಶ ಪತಿರನ. ‘ಜೂನಿಯರ್‌ ಮಾಲಿಂಗ’ ಎಂದೇ ಖ್ಯಾತಿ ಪಡೆದಿರುವ ಪತಿರನರನ್ನು ಧೋನಿ ಟ್ರಂಪ್‌ಕಾರ್ಡ್‌ ಆಗಿ ಬಳಸಿದರು. ಡೆತ್‌ ಓವರಲ್ಲಿ 11 ಇನ್ನಿಂಗ್ಸಲ್ಲಿ 7.8ರ ಎಕಾನಮಿ ರೇಟ್‌ನಲ್ಲಿ 16 ವಿಕೆಟ್‌ ಕಿತ್ತ ಪತಿರನ ಒಟ್ಟು 19 ವಿಕೆಟ್‌ ಪಡೆದರು.

9. ನೂರ್‌ ಅಹ್ಮದ್‌

ರಶೀದ್‌ ಖಾನ್‌ ಇರುವಾಗ ಮತ್ತೊಬ್ಬ ಸ್ಪಿನ್ನರ್‌ ಮಿಂಚುವುದು ಕಷ್ಟ. ಆದರೆ ಆಫ್ಘಾನಿಸ್ತಾನದವರೇ ಆದ 18ರ ನೂರ್‌ ಅಹ್ಮದ್‌ 13 ಪಂದ್ಯಗಳಲ್ಲಿ 16 ವಿಕೆಟ್‌ ಕಬಳಿಸಿದ್ದು ಮಾತ್ರವಲ್ಲದೇ ಒಟ್ಟು 103 ಡಾಟ್‌ ಬಾಲ್‌ಗಳನ್ನು ಎಸೆದು ಗಮನ ಸೆಳೆದರು. 7.82ರ ಎಕಾನಮಿ ಅವರ ಬೌಲಿಂಗ್‌ ಗುಣಮಟ್ಟವನ್ನು ತೋರಿಸುತ್ತದೆ.

10. ಸುಯಶ್‌ ಶರ್ಮಾ

ಸ್ಪರ್ಧಾತ್ಮಕ ಕ್ರಿಕೆಟನ್ನೇ ಆಡದೆ ನೇರವಾಗಿ ಐಪಿಎಲ್‌ಗೆ ಕಾಲಿಟ್ಟಕೆಲವೇ ಕೆಲವರಲ್ಲಿ 20 ವರ್ಷದ ಸುಯಶ್‌ ಶರ್ಮಾ ಕೂಡ ಒಬ್ಬರು. ಆರ್‌ಸಿಬಿ ಪ್ಲೇ-ಆಫ್‌ನಿಂದ ದೂರ ಉಳಿಯಲು ಸುಯಶ್‌ ನೀಡಿದ ಆಘಾತವೂ ಕಾರಣ. 11 ಪಂದ್ಯಗಳಲ್ಲಿ 10 ವಿಕೆಟ್‌ ಕೀಳುವ ಮೂಲಕ ಮುಂದಿನ ಐಪಿಎಲ್‌ಗೆ ನಿರೀಕ್ಷೆ ಹುಟ್ಟಿಹಾಕಿದ್ದಾರೆ.

11. ಯಶ್‌ ಠಾಕೂರ್‌

ಐಪಿಎಲ್‌ ತಂಡಗಳಿಗೆ ಪ್ರತಿಭಾನ್ವೇಷಣೆ ನಡೆಸುವವರ ಬಾಯಲ್ಲಿ ಕೇಳಿ ಬರುವ ಪ್ರಮುಖ ಹೆಸರುಗಳಲ್ಲಿ ವಿದರ್ಭದ 24ರ ವೇಗಿ ಯಶ್‌ ಠಾಕೂರ್‌ ಕೂಡ ಒಬ್ಬರು. ಲಖನೌ ಪರ ಆಡಿದ ಯಶ್‌ ತಮ್ಮ ವೇಗ, ನಿಖರತೆ, ಅತ್ಯುತ್ತಮ ಲೈನ್‌ ಅಂಡ್‌ ಲೆಂಥ್‌ ಮೂಲಕ ಗಮನ ಸೆಳೆದರು. 9 ಪಂದ್ಯದಲ್ಲಿ 13 ವಿಕೆಟ್‌ ಕಬಳಿಸಿದರು.

click me!