ಹಿರಿಯ ಸ್ಟಾರ್ ಆಟಗಾರರಿಲ್ಲದೇ ಇಂಗ್ಲೆಂಡ್‌ನಲ್ಲಿ ಭಾರತದ ಯಂಗ್‌ಸ್ಟರ್ಸ್‌ ಮಿಂಚಿದ್ದು ಹೇಗೆ?

Published : Aug 06, 2025, 11:09 AM ISTUpdated : Aug 06, 2025, 11:10 AM IST
India

ಸಾರಾಂಶ

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರ ಡ್ರಾ ಸಾಧಿಸಿದ ಭಾರತ ತಂಡ, ಇಂಗ್ಲೆಂಡ್ ನೆಲದಲ್ಲಿ ಗೆದ್ದಷ್ಟೇ ಸಂಭ್ರಮಿಸಿದೆ. ಯುವ ಆಟಗಾರರ ಪಡೆಯೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದ ಭಾರತ ತಂಡವು, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ಉತ್ತಮ ಸಾಧನೆ ತೋರಿದೆ.  

ಲಂಡನ್: 5 ಪಂದ್ಯ, 25 ದಿನಗಳ ಆಟ, ಒಟ್ಟು 45 ದಿನಗಳ ಸರಣಿ. ಇದು ಬರೀ ಲೆಕ್ಕ ಮಾತ್ರವಾಗಿದ್ದರೆ ಅದರಲ್ಲೇನೂ ವಿಶೇಷವಿಲ್ಲ. ಆದರೆ ಈ ಸರಣಿ ಕೇವಲ ಲೆಕ್ಕದ ಆಟವಲ್ಲ, ಇದು 2 ವಿಶ್ವಶ್ರೇಷ್ಠ ತಂಡಗಳ ನಡುವಿನ 'ಯುದ್ಧ' ಮಾದರಿ ಹೋರಾಟ. ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಬಸಿದುಕೊಟ್ಟ ಕ್ರಿಕೆಟಿಗರ ಕೆಚ್ಚೆದೆಯ ಆಟ. ಕೋಟ್ಯಂತರ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿ, ಕುತೂಹಲದ ಕಣ್ಣಿನಿಂದ ನೋಡುವಂತೆ ಮಾಡಿದ ಟೆಸ್ಟ್ ಕ್ರಿಕೆಟ್. ಇಂಗ್ಲೆಂಡ್ ನೆಲದಲ್ಲಿ ಅವರನ್ನೇ ಕಟ್ಟಿಹಾಕಿ ಭಾರತದ ಹುಡುಗರು ಸಂಭ್ರಮಿಸಿದ ಅತಿ ಮಹತ್ವದ ಸರಣಿ ಇದು.

5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾ ಆದರೂ, ಗೆದ್ದಂತೆ ಸಂಭ್ರಮಿಸಿದ್ದು ಮತ್ತು ಅದಕ್ಕೆ ಎಲ್ಲಾ ಅರ್ಹತೆ ಇದ್ದಿದ್ದು ಭಾರತಕ್ಕೆ. ಅದಕ್ಕೆ ಕಾರಣಗಳೂ ಹಲವಿದೆ. ಆತ್ಮವಿಶ್ವಾಸ, ಛಲ ಇದ್ದರೆ ಇಂಗ್ಲೆಂಡ್‌ನಲ್ಲೂ ಗೆಲ್ಲಬಹುದು ಎಂದು ಭಾರತದ ಯುವಕ್ರಿಕೆಟಿಗರು ತೋರಿಸಿಕೊಟ್ಟಿದ್ದಾರೆ. ಶುಭಮನ್ ಗಿಲ್‌ರಂತಹ ಇನ್ನೂ 25ರ ಹರೆಯದ ನಾಯಕನೋರ್ವ, ಭಾರತ ತಂಡವನ್ನು ಇಂಗ್ಲೆಂಡ್ ನೆಲದಲ್ಲಿ ಗೆದ್ದಂತೆ ಸಂಭ್ರಮಿಸಲು ಕಾರಣರಾಗಿದ್ದಾರೆ. ಅಂದಹಾಗೆ ತನ್ನ 93 ವರ್ಷದ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಕೇವಲ 3 ಬಾರಿ ಮಾತ್ರ ಸರಣಿ ಗೆದ್ದಿದೆ. 3 ಬಾರಿ ಮಾತ್ರ ಸರಣಿ ಡ್ರಾ ಮಾಡಿಕೊಂಡಿದೆ. ಅದರಲ್ಲಿ ಒಂದು ಈ ಬಾರಿಯದ್ದು.

ಸ್ಟಾರ್‌ಗಳಿಲ್ಲದೆ ಭಾರತ ತಂಡದ ಸಾಧನೆ

ಭಾರತ ತಂಡ ಈ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಬಹುತೇಕರಲ್ಲಿ ಆತ್ಮವಿಶ್ವಾಸವೇ ಇರಲಿಲ್ಲ. ತಂಡದಲ್ಲಿ 10ರಷ್ಟು ಆಟಗಾರರಿಗೆ ಇದು ಇಂಗ್ಲೆಂಡ್‌ನ ಮೊದಲ ಸರಣಿಯಾಗಿತ್ತು.ಹೊಸನಾಯಕ, ಹೊಸ ತಂಡ,ಯುವ ಆಟಗಾರರನ್ನು ಕಟ್ಟಿಕೊಂಡು ಇಂಗ್ಲೆಂಡ್‌ಗೆ ತೆರಳಿದ್ದ ಭಾರತಕ್ಕೆ, ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ, ಆರ್. ಅಶ್ವಿನ್‌ರಂತಹ ದಿಗ್ಗಜರ ಅನುಪಸ್ಥಿತಿ ಕಾಡುವ ಆತಂಕವಿತ್ತು. ಆದರೆ ಯುವ, ಪ್ರತಿಭಾವಂತ ಕ್ರಿಕೆಟಿಗರು ಅದಕ್ಕೆ ಆಸ್ಪದ ಕೊಡಲಿಲ್ಲ. ತಮಗೆ ಕೊಟ್ಟ ಜವಾಬ್ದಾರಿಯನ್ನು ಮರೆಯಲಿಲ್ಲ. ಎದುರಾಳಿ ಆಟಗಾರರು ಕೆಣಕಿದಾಗ, ಅಲ್ಲಿನ ಪ್ರೇಕ್ಷಕರು ವ್ಯಂಗ್ಯವಾಡಿದಾಗ ಅದಕ್ಕೆ ಆಟದ ಮೂಲಕವೇ ಉತ್ತರ ಕೊಟ್ಟರು.

ಸಂಘಟಿತ ಆಟವಾಡಿ ಗೆದ್ದ ಟೀಂ ಇಂಡಿಯಾ

ಒಂದಿಬ್ಬರನ್ನು ನೆಚ್ಚಿಕೊಳ್ಳದೆ ತಂಡವಾಗಿ ಆಡಿದ್ದು ಭಾರತಕ್ಕೆ ಈ ಬಾರಿ ಹೆಚ್ಚಿನ ಯಶಸ್ಸು ತಂದುಕೊಟ್ಟಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಚಾಚೂತಪ್ಪದೆ ತನ್ನ ಕರ್ತವ್ಯ ನಿಭಾಯಿಸಿತು. ಬ್ಯಾಟಿಂಗ್‌ನಲ್ಲಿ ಶುಭಮನ್ ಗಿಲ್, ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ರಿಷಭ್ ಪಂತ್‌ ಅಬ್ಬರಿಸಿದರು. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕನ್ನಡಿಗ ಪ್ರಸಿದ್ ಕೃಷ್ಣ, ಆಕಾಶದೀಪ್ ಸಿಂಗ್ ಮಾರಕ ದಾಳಿ ಸಂಘಟಿಸಿದರು. ವಾಷಿಂಗ್ಟನ್ ಸುಂದರ್‌ ಇಂಪ್ಯಾಕ್ಟ್ ಆಟಗಾರನಾಗಿ ಮೂಡಿಬಂದು, ತಂಡದ ಬೆನ್ನೆಲುಬಾದರು. ದೊಡ್ಡ ಸದ್ದು ಮಾಡದಿದ್ದರೂ ಕರುಣ್ ನಾಯರ್, ಸಾಯಿ ಸುದರ್ಶನ್‌ ಕೊಡುಗೆ ಕೂಡಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ನಾಯಕತ್ವದಲ್ಲಿ ಶುಭ್‌ಮನ್ ಗಿಲ್ ಕಮಾಲ್

ಸರಣಿ ಆರಂಭಕ್ಕೂ ಮುನ್ನ ಕೆ ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಬದಲು ಗಿಲ್‌ಗೆ ನಾಯಕತ್ವದ ಹೊಣೆ ನೀಡಿದಾಗ ಟೀಕಿಸಿದವರೇ ಹೆಚ್ಚು. ಮೊದಲ ಸರಣಿಯ ನಾಯಕತ್ವದಿಂದ ತಮ್ಮ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇತ್ತು. ಆದರೆ ನಾಯಕತ್ವದ ಜೊತೆ ಬ್ಯಾಟಿಂಗ್‌ನಲ್ಲೂ ಗಿಲ್ ದೊಡ್ಡ ಸಾಧನೆ ಮಾಡಿದರು. ಒತ್ತಡ ಇರುವುದು ತಮಗಲ್ಲ ತಮ್ಮ ಎದುರಾಳಿಗೆ ಎಂಬಂತೆ ಬ್ಯಾಟ್ ಬೀಸಿ ಹಲವು ದಿಗ್ಗಜರ ದಾಖಲೆಯನ್ನೂ ಮುರಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!