
ಓವಲ್: ಭಾರತ-ಇಂಗ್ಲೆಂಡ್ ಟೆಸ್ಟ್ ಸೀರಿಸ್‌ನಲ್ಲಿ ಸರಣಿಶ್ರೇಷ್ಠ ಆಟಗಾರರಾಗಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮತ್ತು ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಆಯ್ಕೆಯಾಗಿದ್ದಾರೆ. ಸಾಮಾನ್ಯವಾಗಿ ಟೆಸ್ಟ್ ಸರಣಿಗಳಲ್ಲಿ ಎರಡೂ ತಂಡಗಳಿಂದ ಒಬ್ಬ ಆಟಗಾರನನ್ನು ಮಾತ್ರ ಪಂದ್ಯಶ್ರೇಷ್ಠ ಎಂದು ಆಯ್ಕೆ ಮಾಡಲಾಗುತ್ತದೆ. ವಿರಳವಾಗಿ ಮಾತ್ರ ಇಬ್ಬರಿಗೆ ಸರಣಿಶ್ರೇಷ್ಠ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಇಂಗ್ಲೆಂಡ್‌ನಲ್ಲಿ ನಡೆಯುವ ಟೆಸ್ಟ್ ಸರಣಿಗಳಲ್ಲಿ ಎರಡೂ ತಂಡಗಳಿಂದ ತಲಾ ಒಬ್ಬ ಆಟಗಾರರನ್ನು ಪಂದ್ಯಶ್ರೇಷ್ಠರೆಂದು ಆಯ್ಕೆ ಮಾಡುವುದು ವಾಡಿಕೆ. ಎದುರಾಳಿ ತಂಡದ ಕೋಚ್‌ಗಳು ಪ್ರತಿ ತಂಡದ ಸರಣಿಶ್ರೇಷ್ಠರ ಹೆಸರನ್ನು ಸೂಚಿಸುತ್ತಾರೆ.
ಇದರಂತೆ ಭಾರತದ ಸರಣಿಶ್ರೇಷ್ಠ ಆಟಗಾರನಾಗಿ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಮೊದಲು ಟೀಂ ಇಂಡಿಯಾ ಶುಭ್‌ಮನ್ ಗಿಲ್ ಅವರನ್ನು ಸೂಚಿಸಿದ್ದರು. ಆದರೆ ಐದನೇ ದಿನ ಹೆಸರನ್ನು ಬದಲಾಯಿಸಿದ್ದಾಗಿ ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬಹಿರಂಗಪಡಿಸಿದ್ದಾರೆ. ನಾಲ್ಕನೇ ದಿನದ ಆಟದ ನಂತರ ಸರಣಿಯಲ್ಲಿ ಭಾರತದ ಸರಣಿಶ್ರೇಷ್ಠ ಆಟಗಾರನಾಗಿ ಮೆಕಲಮ್, ಗಿಲ್ ಅವರನ್ನು ಆಯ್ಕೆ ಮಾಡಿದ್ದರು. ಆದರೆ ಐದನೇ ದಿನದಂದು ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ನೋಡಿದ ನಂತರ ಮೆಕಲಮ್ ಸರಣಿಶ್ರೇಷ್ಠ ಆಟಗಾರನಾಗಿ ಮೊಹಮ್ಮದ್ ಸಿರಾಜ್ ಅವರ ಹೆಸರನ್ನು ಸೂಚಿಸಿದರು.
ಆದರೆ ಆಗಲೇ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕ ಮೈಕೆಲ್ ಅಥರ್ಟನ್ ಗಿಲ್‌ಗೆ ಕೇಳಲು ಎಲ್ಲಾ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದರು. ಗಿಲ್ ಬದಲಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಿದರೆ ಮತ್ತೆ ಪ್ರಶ್ನೆಗಳನ್ನು ಮೊದಲಿನಿಂದಲೂ ಸಿದ್ಧಪಡಿಸಬೇಕಾಗುತ್ತದೆ ಮತ್ತು ಇದಕ್ಕೆ ಸಮಯವಿರಲಿಲ್ಲ ಎಂದು ಕಾರ್ತಿಕ್ ಕ್ರಿಕ್‌ಬಜ್‌ಗೆ ವೆಬ್‌ಸೈಟ್ ಜತೆಗಿನ ಮಾತುಕತೆ ವೇಳೆ ತಿಳಿಸಿದ್ದಾರೆ. ಹೀಗಾಗಿ ಮೊಹಮ್ಮದ್ ಸಿರಾಜ್ ಸರಣಿಶ್ರೇಷ್ಠ ಆಟಗಾರನಾಗಿ ಆಯ್ಕೆ ಮಾಡಲಾಗಿಲ್ಲ.
ನಾಲ್ಕನೇ ದಿನವೇ ಪಂದ್ಯ ಮುಗಿದಿದ್ದರೆ ಶುಭ್‌ಮನ್ ಗಿಲ್ ಸರಣಿಯಲ್ಲಿ ಭಾರತದ ಪಂದ್ಯಶ್ರೇಷ್ಠ ಆಟಗಾರನಾಗುತ್ತಿದ್ದರು. ಆದರೆ ಪಂದ್ಯ ಐದನೇ ದಿನಕ್ಕೆ ಮುಂದುವರಿದು ಮೊಹಮ್ಮದ್ ಸಿರಾಜ್ ಐದು ವಿಕೆಟ್‌ಗಳೊಂದಿಗೆ ಭಾರತಕ್ಕೆ ಗೆಲುವು ತಂದುಕೊಟ್ಟ ನಂತರ ಮೆಕಲಮ್ ಅವರ ಮನಸ್ಸು ಬದಲಾಯಿತು. ಐದನೇ ದಿನ ಪಂದ್ಯ ಮುಗಿಯಲು 30-40 ನಿಮಿಷಗಳು ಮಾತ್ರ ಬಾಕಿ ಇರುವಾಗ ಮೆಕಲಮ್ ಪಂದ್ಯಶ್ರೇಷ್ಠ ಆಟಗಾರನಾಗಿ ಸಿರಾಜ್ ಅವರ ಹೆಸರನ್ನು ಸೂಚಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದರೆ ಪ್ರಶ್ನೆಗಳನ್ನು ಮತ್ತೆ ಸಿದ್ಧಪಡಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಗಿಲ್ ಅವರನ್ನೇ ಪಂದ್ಯಶ್ರೇಷ್ಠ ಎಂದು ಘೋಷಿಸಲಾಯಿತು ಎಂದು ಕಾರ್ತಿಕ್ ಹೇಳಿದರು. ಪಂದ್ಯದ ನಂತರ ಸಿರಾಜ್ ಅವರ ಪ್ರದರ್ಶನವನ್ನು ಮೆಕಲಮ್ ಶ್ಲಾಘಿಸಿದರು.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಾಲ್ಕು ಶತಕಗಳನ್ನು ಒಳಗೊಂಡಂತೆ 754 ರನ್ ಗಳಿಸಿದ ಗಿಲ್ ಸರಣಿಶ್ರೇಷ್ಠ ಆಟಗಾರ ಎನಿಸಿಕೊಂಡರು. 23 ವಿಕೆಟ್‌ಗಳೊಂದಿಗೆ ಮೊಹಮ್ಮದ್ ಸಿರಾಜ್ ವಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಓವಲ್ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿ ಮಿಂಚಿದ ಮೊಹಮ್ಮದ್ ಸಿರಾಜ್, ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು.
ಇನ್ನು ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹ್ಯಾರಿ ಬ್ರೂಕ್ ಅವರನ್ನು ಇಂಗ್ಲೆಂಡ್‌ನ ಸರಣಿಶ್ರೇಷ್ಠ ಆಟಗಾರನಾಗಿ ಆಯ್ಕೆ ಮಾಡಿದರು. ಇದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಯಾಕೆಂದರೆ ಇಂಗ್ಲೆಂಡ್ ಪರ ಮಾಜಿ ನಾಯಕ ಜೋ ರೂಟ್ ಮೂರು ಶತಕ ಹಾಗೂ ಒಂದು ಅರ್ಧಶತಕ ಸಹಿತ 537 ರನ್ ಸಿಡಿಸುವ ಮೂಲಕ ಸರಣಿಯಲ್ಲಿ ಇಂಗ್ಲೆಂಡ್ ಪರ ಗರಿಷ್ಠ ಒಟ್ಟಾರೆ ಎರಡನೇ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದರು. ಇನ್ನು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ನಲ್ಲಿ 304 ರನ್ ಹಾಗೂ ಬೌಲಿಂಗ್‌ನಲ್ಲಿ 17 ವಿಕೆಟ್ ಕಬಳಿಸುವ ಮೂಲಕ ಆಲ್ರೌಂಡ್ ಪ್ರದರ್ಶನ ತೋರಿದ್ದರು. ಹೀಗಿದ್ದೂ, ಗಂಭೀರ್ ಇಂಗ್ಲೆಂಡ್ ಪರ 5 ಪಂದ್ಯಗಳನ್ನಾಡಿ 481 ರನ್ ಬಾರಿಸಿ ಹ್ಯಾರಿ ಬ್ರೂಕ್ ಅವರನ್ನು ಸರಣಿಶ್ರೇಷ್ಠ ಆಟಗಾರರನ್ನಾಗಿ ಆಯ್ಕೆ ಮಾಡಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.