
ಭಾರತೀಯ ಕ್ರಿಕೆಟ್‌ನಲ್ಲಿ ಅಪಾರ ಪ್ರತಿಭೆಯಿದ್ದರೂ ಸರಿಯಾದ ಅವಕಾಶ ಸಿಗದೆ ಹೊರಗುಳಿಯುವ ಆಟಗಾರರ ಸಾಲು ದೊಡ್ಡದಿದೆ. ಆ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಹೆಸರು ಎಡಗೈ ಚತುರ ಸ್ಪಿನ್ನರ್ ಆರ್. ಸಾಯಿ ಕಿಶೋರ್. ಐಪಿಎಲ್‌ನಲ್ಲಿ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರೂ ಹಲವು ಬಾರಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದು ಬೆಂಚ್‌ಗೆ ಸೀಮಿತವಾಗಿದ್ದ ಈ ಯುವ ತಾರೆ, ಇದೀಗ ಇಂಗ್ಲೆಂಡ್ ನೆಲದಲ್ಲಿ ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿರುವ ಸಾಯಿ ಕಿಶೋರ್, ಕೇವಲ 20 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ.
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಷನ್ ಟು ಪಂದ್ಯಗಳು ನಡೆಯುತ್ತಿದ್ದು, ಗ್ಲೌಸೆಸ್ಟರ್‌ಶೈರ್ ತಂಡದ ಪರ ಆಡುತ್ತಿರುವ ಆರ್. ಸಾಯಿ ಕಿಶೋರ್ ಎದುರಾಳಿ ಡರ್ಬಿಶೈರ್ ತಂಡದ ಎರಡನೇ ಇನ್ನಿಂಗ್ಸ್ ಅನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ್ದಾರೆ. 319 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಬಂದ ಡರ್ಬಿಶೈರ್ ತಂಡಕ್ಕೆ ಸಾಯಿ ಕಿಶೋರ್ ಅವರ ತೀಕ್ಷ್ಣ ಸ್ಪಿನ್ ದಾಳಿಯನ್ನು ಎದುರಿಸಲು ಸಾಧ್ಯವಾಗಲೇ ಇಲ್ಲ.
ಸಾಯಿ ಕಿಶೋರ್ ಅವರ ಈ ಪ್ರದರ್ಶನವು ಭಾರತೀಯ ಆಯ್ಕೆಗಾರರಿಗೆ ಮತ್ತು ನಾಯಕ ಗಿಲ್‌ಗೆ ನೀಡಿದ ನೇರ ಸಂದೇಶದಂತಿದೆ. 2023-24ರ ರಣಜಿ ಟ್ರೋಫಿ ಋತುವಿನಲ್ಲಿ ತಮಿಳುನಾಡು ಪರ ಆಡುವಾಗ ಸಾಯಿ ಕಿಶೋರ್ ಬರೋಬ್ಬರಿ 53 ವಿಕೆಟ್‌ಗಳನ್ನು ಕಬಳಿಸಿ, ತಾವು ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್‌ಗೆ ಸಂಪೂರ್ಣ ಸಿದ್ಧರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದರು.
ಅಲ್ಲದೆ, ಐಪಿಎಲ್‌ನಲ್ಲಿ ನಾಯಕ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಪರ ಆಡುವಾಗಲೂ ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರೂ, ಇದುವರೆಗೆ ಆಡಿದ 28 ಐಪಿಎಲ್ ಪಂದ್ಯಗಳಲ್ಲಿ 33 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಹೊಂದಿದ್ದಾರೆ. ಆದಾಗ್ಯೂ, ಅವರಿಗೆ ಟೀಮ್ ಇಂಡಿಯಾದಲ್ಲಿ ನಿರಂತರ ಅವಕಾಶಗಳು ಸಿಕ್ಕಿಲ್ಲ.
ಪ್ರಸ್ತುತ ಕೌಂಟಿ ಕ್ರಿಕೆಟ್‌ನಲ್ಲಿ ಭಾರತದ ಹಲವು ಪ್ರಮುಖ ಆಟಗಾರರು ವಿವಿಧ ಕ್ಲಬ್‌ಗಳ ಪರ ಪ್ರತಿನಿಧಿಸುತ್ತಿದ್ದಾರೆ. ಯುಜ್ವೇಂದ್ರ ಚಹಾಲ್, ಮಾನವ್ ಸುತಾರ್, ಕುಲದೀಪ್ ಯಾದವ್, ಅಕಿಬ್ ನಬಿ, ರಾಹುಲ್ ಚಹಾರ್, ಜೈದೇವ್ ಉನದ್ಕತ್ ಹಾಗೂ ಮಯಾಂಕ್ ಅಗರ್ವಾಲ್ ಇಂಗ್ಲೆಂಡ್ ಅಂಗಳದಲ್ಲಿ ಸಕ್ರಿಯರಾಗಿದ್ದಾರೆ.
ಯುಜ್ವೇಂದ್ರ ಚಹಾಲ್ ಧಮಾಕಾ; ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿರುವ ಚಹಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಸೇರಿದಂತೆ ಪಂದ್ಯದಲ್ಲ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿ ತಮ್ಮ ಚಾಣಾಕ್ಷತನ ಪ್ರದರ್ಶಿಸಿದ್ದಾರೆ. ಮಯಾಂಕ್ ಅಗರ್ವಾಲ್ ಮಿಂಚು; ಡರ್ಹ್ಯಾಮ್ ಪರ ಆಡುತ್ತಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ (36 ಮತ್ತು 48) ಒಟ್ಟು 84 ರನ್‌ಗಳ ಕಾಣಿಕೆ ನೀಡಿ ತಮ್ಮ ತಂಡಕ್ಕೆ 153 ರನ್‌ಗಳ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶೀಯ ಕ್ರಿಕೆಟ್ ಹಾಗೂ ಕೌಂಟಿ ಅಂಗಳದಲ್ಲಿ ಸತತವಾಗಿ ವಿಕೆಟ್ ಬೇಟೆಯಾಡುತ್ತಿರುವ ಸಾಯಿ ಕಿಶೋರ್, ಮುಂಬರುವ ಸರಣಿಗಳಲ್ಲಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.