ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬೆನ್ನಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಈ 5 ಆಟಗಾರರು ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ಕೋಚ್ ಒಪ್ಪಂದಾವಧಿ ಮುಕ್ತಾಯವಾದ ಬೆನ್ನಲ್ಲೇ ಟೀಂ ಇಂಡಿಯಾ ನೂತನ ಹೆಡ್‌ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಗಂಭೀರ್ ಅವರ ಟೀಂ ಇಂಡಿಯಾ ಹೆಡ್ ಕೋಚ್ ಒಪ್ಪಂದಾವಧಿ 2027ರ ಡಿಸೆಂಬರ್ 31ರ ವರೆಗೆ ಇರಲಿದೆ.
ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗುವ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದರು. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ದಶಕದ ಬಳಿಕ 2024ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗುತ್ತಿದ್ದಂತೆಯೇ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೆಲವು ಆಟಗಾರರಿಗೆ ಹೊಸದಾಗಿ ಮತ್ತೊಂದು ಲೈಫ್‌ಲೈನ್ ಸಿಕ್ಕಂತೆ ಆಗಿದೆ. ಅಷ್ಟಕ್ಕೂ ಯಾರು ಆ 5 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
'ಗಂಭೀರ್ ಕೋಚ್ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ...': ಅಚ್ಚರಿಯ ಹೇಳಿಕೆ ಕೊಟ್ಟ ಮಾಜಿ ವೇಗಿ ಡೇಲ್ ಸ್ಟೇಯ್ನ್
1. ಶ್ರೇಯಸ್ ಅಯ್ಯರ್:
ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿರುವ ಶ್ರೇಯಸ್ ಅಯ್ಯರ್‌ಗೆ, ಇದೀಗ ಗೌತಮ್ ಗಂಭೀರ್ ಮೂಲಕ ಟೀಂ ಇಂಡಿಯಾದಲ್ಲಿ ಮರುಹುಟ್ಟು ಸಿಗುವ ಸಾಧ್ಯತೆಯಿದೆ.
2. ವರುಣ್ ಚಕ್ರವರ್ತಿ:
2024ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಪರ ಗರಿಷ್ಠ ವಿಕೆಟ್ ಕಬಳಿಸಿದ್ದ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ, ಜಿಂಬಾಬ್ವೆ ಎದುರಿನ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ವರುಣ್ ಚಕ್ರವರ್ತಿಯನ್ನು ಹತ್ತಿರದಿಂದ ಗಮನಿಸಿರುವ ಗೌತಿ, ತಮಿಳುನಾಡು ಮೂಲದ ಸ್ಪಿನ್ನರ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
3. ವೆಂಕಟೇಶ್ ಅಯ್ಯರ್:
ದಶಕದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗುವಲ್ಲಿ ಎಡಗೈ ಸ್ಪೋಟಕ ಬ್ಯಾಟರ್ ವೆಂಕಟೇಶ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಸಹಜವಾಗಿಯೇ ವೆಂಕಿ ಅಯ್ಯರ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ.
ವಿನಯ್ ಕುಮಾರ್ ಬೇಡ, ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಗಂಭೀರ್‌ಗೆ ಬಿಸಿಸಿಐ ಸಲಹೆ..!
4. ರಿಂಕು ಸಿಂಗ್:
ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರಖ್ಯಾತ ಮ್ಯಾಚ್ ಫಿನೀಶರ್ ರಿಂಕು ಸಿಂಗ್, ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದರು. ಸದ್ಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ರಿಂಕು ಮುಂಬರುವ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಆಯ್ಕೆ ಮ್ಯಾಚ್ ಫಿನಿಶರ್ ಆಗಿ ಮಿಂಚಿದರೂ ಅಚ್ಚರಿಯಿಲ್ಲ.
5. ಹರ್ಷಿತ್ ರಾಣಾ:
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಕ್ರಮಣಕಾರಿ ದಾಳಿಯ ಮೂಲಕ ಗಮನ ಸೆಳೆದ ಹರ್ಷಿತ್ ರಾಣಾ, ಸದ್ಯ ಜಿಂಬಾಬ್ವೆ ಎದುರಿನ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇದುವರೆಗೂ ರಣಾಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ ಮುಂಬರುವ ದಿನಗಳಲ್ಲಿ ರಾಣಾಗೆ ಗೌತಿ ಭಾರತ ತಂಡದೊಳಗೆ ಸ್ಥಾನ ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.