
ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ ಶ್ರೇಯಸ್ ಅಯ್ಯರ್, ಭಾರತದ ಕ್ರಿಕೆಟ್ ನಾಯಕತ್ವದ ಸ್ಪರ್ಧೆಯಲ್ಲಿ ಪ್ರಮುಖ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಈ ಸಾಧನೆಯಿಂದಾಗಿ, ಟಿ20 ಮತ್ತು ಟೆಸ್ಟ್ ತಂಡಗಳಲ್ಲಿ ಶ್ರೇಯಸ್ ಅಯ್ಯರ್‌ನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಬಲ ಪಡೆದಿವೆ. ಭಾರತ ಸೀಮಿತ ಓವರ್‌ಗಳ ತಂಡದ ನಾಯಕನಾಗುವ ರೇಸ್‌ನಲ್ಲಿ ಇದೀಗ ಶ್ರೇಯಸ್ ಅಯ್ಯರ್ ಎಂಟ್ರಿಯಾಗಿದೆ.
2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ ನಂತರವೂ, ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, 2025ರಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಐಪಿಎಲ್ ಮೆಗಾ ಹರಾಜಿನಲ್ಲಿ ಬರೋಬ್ಬರಿ ₹26.75 ಕೋಟಿ ಮೊತ್ತದಲ್ಲಿ ಅವರನ್ನು ಖರೀದಿಸಿ ಅವರಿಗೆ ನಾಯಕತ್ವ ಪಟ್ಟ ಕಟ್ಟಿತ್ತು. ಈ ನಿರ್ಧಾರವು ಫಲಿತಾಂಶ ನೀಡಿದ್ದು, ಶ್ರೇಯಸ್ ಅಯ್ಯರ್ ತಮ್ಮ ಶ್ರೇಷ್ಠ ಬ್ಯಾಟಿಂಗ್ ಮತ್ತು ಶಾಂತ ನಾಯಕತ್ವದಿಂದ ತಂಡವನ್ನು 11 ವರ್ಷಗಳ ನಂತರ ಫೈನಲ್‌ಗೆ ಮುನ್ನಡೆಸಿದ್ದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ, ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಎದುರಿಸಿದ ಶ್ರೇಯಸ್ ಅಯ್ಯರ್, 41 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಈ ಪ್ರದರ್ಶನದಿಂದಾಗಿ, ಅಭಿಮಾನಿಗಳು ಮತ್ತು ತಂಡದ ಸದಸ್ಯರು ಅವರನ್ನು "ಸರಪಂಚ್ ಸಾಹಬ್" ಎಂದು ಕರೆದಿದ್ದು ದೊಡ್ಡ ಸುದ್ದಿಯಾಗಿತ್ತು. ಇದು ಅವರ ಶಾಂತ ಮತ್ತು ದೃಢ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಗುಣ ಬಿಸಿಸಿಐ ಅವರ ಮನಗೆಲ್ಲುವಂತೆ ಮಾಡಿದೆ ಎಂದು ವರದಿಯಾಗಿದೆ.
ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಝಲಕ್: 2024ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಒಂದು ದಶಕದ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಿದ್ದು, ಬಹುತೇಕ ಗೆಲುವಿನ ಶ್ರೇಯ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಪಾಲಾಗಿತ್ತು. ಇನ್ನು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರೂ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲು ಕೆಕೆಆರ್ ಫ್ರಾಂಚೈಸಿ ವಿಫಲವಾಗಿತ್ತು. ಇನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾದಾಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಇದರ ಹೊರತಾಗಿಯೂ ನಾಯಕನಾಗಿ ಹಾಗೂ ಆಟಗಾರನಾಗಿ ಅಯ್ಯರ್ ಅದ್ಭುತ ಪ್ರದರ್ಶನ ತೋರುವ ಮೂಲಕ ತಾನು ಟೀಂ ಇಂಡಿಯಾ ನಾಯಕನಾಗುವ ರೇಸ್‌ನಲ್ಲಿದ್ದೇನೆ ಎನ್ನುವ ಸ್ಪಷ್ಟ ಸಂದೇಶವನ್ನು ಮುಂಬೈ ಆಟಗಾರ ರವಾನಿಸಿದ್ದಾರೆ.
ಅಯ್ಯರ್ ಅವರ ಈ ಸಾಧನೆಗಳ ಹಿನ್ನೆಲೆಯಲ್ಲಿ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅವರ ನಾಯಕತ್ವ ಸಾಮರ್ಥ್ಯವನ್ನು ಪರಿಗಣಿಸುವಂತೆ ಮಾಡಿದೆ. ನಿರಂತರ ಶ್ರಮ ಮತ್ತು ಪ್ರದರ್ಶನದಿಂದಾಗಿ, ಅವರು ಭವಿಷ್ಯದಲ್ಲಿ ಭಾರತ ತಂಡದ ನಾಯಕತ್ವದ ಪ್ರಮುಖ ಅಭ್ಯರ್ಥಿಯಾಗಿ ಪರಿಗಣಿಸಲಾಗುತ್ತಿದ್ದಾರೆ. ಸದ್ಯ ಭಾರತ ಟೆಸ್ಟ್ ತಂಡದ ನಾಯಕರಾಗಿ ಶುಭ್‌ಮನ್ ಗಿಲ್ ನೇಮಕವಾಗಿದ್ದಾರೆ. ಇನ್ನು ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಭಾರತ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕರಾಗಿ ನೇಮಕವಾಗಿದ್ದಾರೆ.
ಶುಭ್‌ಮನ್ ಗಿಲ್ ಟೆಸ್ಟ್‌ನಲ್ಲಿ ನಾಯಕನಾಗಿ ದೀರ್ಘಕಾಲ ಮುಂದುವರೆಯುವ ಸಾಧ್ಯತೆಯಿದೆ. ಇನ್ನು ಸೀಮಿತ ಓವರ್‌ಗಳ ವಿಚಾರದಲ್ಲಿ ರೋಹಿತ್ ಶರ್ಮಾ 2027ರವರೆಗೂ ಕ್ಯಾಪ್ಟನ್ ಆಗಿರುವ ಸಾಧ್ಯತೆಯಿದೆ. ಇನ್ನು ಟಿ20 ನಾಯಕರಾಗಿ ಸೂರ್ಯಕುಮಾರ್ ಯಾದವ್‌ಗೆ ಅಯ್ಯರ್ ಫೈಟ್ ಕೊಡುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.