* ಭಾರತ ವಿರುದ್ದದ ಟೆಸ್ಟ್ ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ
* ಭಾರತ ವಿರುದ್ಧ ಮಾರ್ಚ್ 4ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭ
* ಅನುಭವಿ ಆಲ್ರೌಂಡರ್ ಆಂಜಲೋ ಮ್ಯಾಥ್ಯೂಸ್‌ಗೆ ಸ್ಥಾನ
ಕೊಲಂಬೊ(ಫೆ.26): ಭಾರತ ವಿರುದ್ಧ ಮಾರ್ಚ್ 4ರಿಂದ ಆರಂಭಗೊಳ್ಳಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ 18 ಸದಸ್ಯರ ಶ್ರೀಲಂಕಾ ತಂಡ (Sri Lanka Cricket Team) ಪ್ರಕಟಗೊಂಡಿದ್ದು, ಟೆಸ್ಟ್ ತಂಡದ ನಾಯಕ ದಿಮುತ್ ಕರುಣರತ್ನೆ (Dimuth Karunaratne) ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಭಾರತ ವಿರುದ್ದದ ಟೆಸ್ಟ್ ಸರಣಿಯು ಲಂಕಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು, 2ನೇ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ನೀಡಲಿದೆ.
ಲಂಕಾ ಕ್ರಿಕೆಟ್ ಮಂಡಳಿಯ ಜತೆಗೆ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ತಮ್ಮ ತಕರಾರು ಸರಿಪಡಿಸಿಕೊಂಡ ಅನುಭವಿ ಆಲ್ರೌಂಡರ್ ಏಂಜಲೋ ಮ್ಯಾಥ್ಯೂಸ್‌ಗೆ (Angelo Mathews) ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದು ಬಹುತೇಕ ಮ್ಯಾಥ್ಯೂಸ್ ಪಾಲಿಗೆ ಕಡೆಯ ವಿದೇಶಿ ಟೆಸ್ಟ್ ಸರಣಿಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಧನಂಜಯ ಡಿಸಿಲ್ವಾ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
undefined
ಸದ್ಯ ಎರಡನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ICC World Test Championship) ಶ್ರೀಲಂಕಾ ಕ್ರಿಕೆಟ್ ತಂಡವು ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆಲುವಿನ ನಗೆ ಬೀರುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೊಂದೆಡೆ ಭಾರತ ತಂಡವು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಭಾರತ ಎದುರಿನ ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡ ಹೀಗಿದೆ ನೋಡಿ:
ದಿಮುತ್ ಕರುಣರತ್ನೆ(ನಾಯಕ), ನಿಸ್ಸಾಂಕ, ತಿರಿಮನ್ನೆ, ಧನಂಜಯ ಡಿ ಸಿಲ್ವಾ, ಕುಸಾಲ್ ಮೆಂಡಿಸ್, ಮ್ಯಾಥ್ಯೂಸ್, ಚಾಂಡಿಮಲ್, ಅಸಲಂಕ, ಡಿಕ್‌ವೆಲ್ಲಾ, ಚಮಿಕ ಕರುಣರತ್ನೆ, ಲಹಿರು ಕುಮಾರ, ಲಕ್ಮಲ್, ಚಮೀರ, ವಿಶ್ವ ಫರ್ನಾಂಡೋ, ವ್ಯಾಂಡೆರ್ಸೆ, ಜಯವಿಕ್ರಮ, ಎಂಬುಲ್ಡೆನಿಯಾ.
ಬೆಂಗಳೂರು ಹಗಲು-ರಾತ್ರಿ ಟೆಸ್ಟ್ ಟಿಕೆಟ್ ಮಾರ್ಚ್ 1ರಿಂದ ಮಾರಾಟ
ಬೆಂಗಳೂರು: ಮಾರ್ಚ್ 12ರಿಂದ 16ರ ವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ (India vs Sri Lanka) ಹಗಲು ರಾತ್ರಿ ಟೆಸ್ಟ್ ಪಂದ್ಯದ ಟಿಕೆಟ್‌ಗಳನ್ನು ಮಾರ್ಚ್ 1ರಿಂದ ಆನ್‌ಲೈನ್‌ನಲ್ಲಿ ಮಾರಾಟಕ್ಕಿಡಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ.
Ind vs SL: ಟೀಂ ಇಂಡಿಯಾಗಿಂದು ಲಂಕಾ ಮಣಿಸಿ ಟಿ20 ಸರಣಿ ಗೆಲ್ಲುವ ತವಕ..!
ಬಾಕ್ಸ್ ಆಫೀಸ್ ಟಿಕೆಟ್ ಮಾರಾಟ ಮಾರ್ಚ್ 6ರಿಂದ 16ರ ವರೆಗೆ ನಡೆಯಲಿದೆ. ಟಿಕೆಟ್‌ಗಾಗಿ ಕೆಎಸ್‌ಸಿಎ ವೆಬ್‌ಸೈಟ್ ಸಂಪರ್ಕಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಇದೇ ಮೊದಲ ಬಾರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯಕ್ಕೆ ಆತಿಥ್ಯವನ್ನು ವಹಿಸುತ್ತಿದೆ
ಪತ್ರಕರ್ತನಿಂದ ಸಾಹಗೆ ಬೆದರಿಕೆ: ತನಿಖೆಗೆ ಸಮಿತಿ
ನವದೆಹಲಿ: ಸಂದರ್ಶನ ನೀಡದಿದ್ದಕ್ಕೆ ಹಿರಿಯ ಪತ್ರಕರ್ತರೊಬ್ಬರಿಂದ ಬೆದರಿಕೆ ಬಂದಿದೆ ಎಂಬ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹ ಆರೋಪದ ಬಗ್ಗೆ ತನಿಖೆ ನಡೆಸಲು ಬಿಸಿಸಿಐ ಮೂರು ಜನರ ಸಮಿತಿಯನ್ನು ರಚಿಸಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಳ್, ಅಪೆಕ್ಸ್ ಕೌನ್ಸಿಲ್ ಸದಸ್ಯ ಪ್ರಭ್‌ತೇಜ್ ಸಿಂಗ್ ಭಾಟಿಯಾ ಸಮಿತಿಯಲ್ಲಿದ್ದು, ಮುಂದಿನ ವಾರ ತನಿಖೆ ಆರಂಭಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.
ಎವೀರ್ಸ್ ಶತಕ: ಉತ್ತಮ ಆರಂಭ ಪಡೆದ ದಕ್ಷಿಣ ಆಫ್ರಿಕಾ
ಕ್ರೈಸ್ಟ್‌ಚರ್ಚ್: ಸರೆಲ್ ಎವೀರ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದೆ. ಮೊದಲ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 3 ವಿಕೆಟ್‌ಗೆ 238 ರನ್ ಕಲೆ ಹಾಕಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಕಳೆದ ಪಂದ್ಯದಲ್ಲಿ ಕೇವಲ 95 ಮತ್ತು 111 ರನ್‌ಗೆ ಆಲೌಟಾಗಿದ್ದ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮೊದಲ ವಿಕೆಟ್‌ಗೇ 111 ರನ್ ಕಲೆ ಹಾಕಿತು. ಡೀನ್ ಎಲ್ಗರ್ 41, ಏಡನ್ ಮಾರ್ಕ್ರಮ್ 42 ರನ್ ಗಳಿಸಿದರೆ, ಎವೀರ್ 108 ರನ್‌ಗೆ ವಿಕೆಟ್ ಒಪ್ಪಿಸಿದರು. ಡುಸ್ಸೆನ್(13) ತೆಂಬಾ ಬವುಮಾ(22) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.