ಪುಣೆ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತೆ ಫೇಲ್ ಬೆನ್ನಲ್ಲೇ ವಿರಾಟ್‌ಗೆ ಅನಿಲ್ ಕುಂಬ್ಳೆ ಕಿವಿಮಾತು

By Naveen KodaseFirst Published Oct 25, 2024, 3:46 PM IST
Highlights

ವಿರಾಟ್ ಕೊಹ್ಲಿ ಪುಣೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ರನ್‌ಗೆ ವಿಕೆಟ್ ಒಪ್ಪಿಸಿದ್ದರ ಬಗ್ಗೆ ಅನಿಲ್ ಕುಂಬ್ಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪುಣೆ: ಬೆಂಗಳೂರು ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ಇದೀಗ ಪುಣೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ. ಶುಭ್‌ಮನ್ ಗಿಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ, 9 ಎಸೆತಗಳನ್ನು ಎದುರಿಸಿ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ವಿರಾಟ್ ಕೊಹ್ಲಿ ಔಟ್ ಆದ ರೀತಿಯನ್ನು ಗಮನಿಸಿದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ರನ್‌ ಮಷೀನ್‌ಗೆ ಕಿವಿಮಾತು ಹೇಳಿದ್ದಾರೆ.

ಸಾಕಷ್ಟು ಸಮಯದಿಂದಲೂ ವಿರಾಟ್ ಕೊಹ್ಲಿ, ಸ್ಪಿನ್ ಬೌಲಿಂಗ್ ದಾಳಿ ಎದುರಿಸಲು ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಇದನ್ನು ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಚೆನ್ನಾಗಿಯೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ವಿರಾಟ್ ಕೊಹ್ಲಿ ಕೇವಲ ನೆಟ್‌ ಪ್ರಾಕ್ಟೀಸ್ ಮಾಡಿದರಷ್ಟೇ ಸಾಲದು. ಬದಲಾಗಿ ದೇಶಿ ಕ್ರಿಕೆಟ್‌ ಆಡಲು ಇದು ಸಕಾಲ ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

Latest Videos

ಸ್ಯಾಂಟ್ನರ್ ದಾಳಿಗೆ ಟೀಂ ಇಂಡಿಯಾ ತಬ್ಬಿಬ್ಬು; ಕಿವೀಸ್‌ಗೆ ಮೊದಲ ಇನ್ನಿಂಗ್ಸ್ ಮುನ್ನಡೆ

"ಕೇವಲ ನೆಟ್ ಪ್ರಾಕ್ಟೀಸ್ ಮಾಡುವುದಕ್ಕಿಂತ, ದೇಶಿ ಕ್ರಿಕೆಟ್‌ನಲ್ಲಿ ಒಂದೆರಡು ಇನ್ನಿಂಗ್ಸ್‌ ಆಡಿದ್ದರೂ, ವಿರಾಟ್ ಕೊಹ್ಲಿಗೆ ತುಂಬಾನೇ ಪ್ರಯೋಜನವಾಗುತ್ತಿತ್ತು. ಮ್ಯಾನೇಜ್‌ಮೆಂಟ್ ಒಪ್ಪಿದ್ದರೇ, ಅವರು ಈ ಮೊದಲೇ ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಿದರೆ, ಅವರಿಗೆ ಅನುಕೂಲವಾಗುತ್ತಿತ್ತು. ಸ್ಪಿನ್ನರ್‌ಗಳ ಎದುರು ವಿರಾಟ್ ಕೊಹ್ಲಿ ರನ್ ಗಳಿಸಲು ಪರದಾಡುತ್ತಿರುವುದಕ್ಕೆ ಇದೊಂದೇ ಕಾರಣ ಎಂದು ಹೇಳಲಾರೆ" ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

"ಅವರು ಬ್ಯಾಟಿಂಗ್ ಮಾಡಲು ಕ್ರೀಸ್‌ಗಿಳಿದಾಗ, ಪಿಚ್‌ ಕೂಡಾ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿ ವರ್ತಿಸುತ್ತಿತ್ತು. ಆಧುನಿಕ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ತಂತ್ರಗಾರಿಕೆಯನ್ನು ಅರಿಯಲು ದಿಗ್ಗಜ ಬ್ಯಾಟರ್‌ಗಳಾದವರು ಸಿದ್ದರಿರಬೇಕಾಗುತ್ತದೆ" ಎಂದು ಕುಂಬ್ಳೆ ಹೇಳಿದ್ದಾರೆ. 

ಹಾಲ್ ಆಫ್ ಫೇಮ್‌ ಗೌರವ ಪಡೆದ ಎಬಿಡಿ: ಮತ್ತೊಮ್ಮೆ ಕನ್ನಡಿಗರ ಹೃದಯಗೆದ್ದ ಮಿಸ್ಟರ್ 360!

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ 8 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಬ್ಯಾಟರ್‌ಗಳು ಪರದಾಟ ನಡೆಸಿದ್ದಾರೆ.
 

click me!