ಲಂಕಾ ಎದುರು ಸರಣಿ ಕ್ಲೀನ್‌ ಸ್ವೀಪ್‌ ಮೇಲೆ ಟೀಂ ಇಂಡಿಯಾ ಕಣ್ಣು

By Kannadaprabha NewsFirst Published Jul 23, 2021, 12:03 PM IST
Highlights

* ಲಂಕಾ ಎದುರು ಸರಣಿ ಸ್ವೀಪ್‌ ಕನಸು ಕಾಣುತ್ತಿದೆ ಶಿಖರ್ ಧವನ್ ಪಡೆ

* ಈಗಾಗಲೇ ಏಕದಿನ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ

* ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಸಾಧ್ಯತೆ

ಕೊಲಂಬೊ(ಜು.23): ಶ್ರೀಲಂಕಾ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ, 2-0 ಮುನ್ನಡೆ ಪಡೆಯುವ ಮೂಲಕ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಶುಕ್ರವಾರ 3ನೇ ಹಾಗೂ ಅಂತಿಮ ಪಂದ್ಯದಲ್ಲೂ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ.

ಲಂಕಾ ವಿರುದ್ಧ ಸತತ 9ನೇ ಸರಣಿ ಜಯಿಸಿರುವ ಭಾರತ, ಪ್ರವಾಸವನ್ನು ಅಜೇಯವಾಗಿ ಮುಕ್ತಾಯಗೊಳಿಸುವ ಗುರಿ ಹೊಂದಿದೆ. ಏಕದಿನ ಸರಣಿ ಬಳಿಕ 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದ್ದು, ಆ ಸರಣಿಯಲ್ಲೂ ಜಯಭೇರಿ ಬಾರಿಸಲು ಶಿಖರ್‌ ಧವನ್‌ ಪಡೆ ಕಾತರಿಸುತ್ತಿದೆ.

ಪಡಿಕ್ಕಲ್‌ಗೆ ಅವಕಾಶ?: ಸರಣಿ ಗೆದ್ದಿರುವ ಭಾರತ ಈ ಪಂದ್ಯದಲ್ಲಿ ಕೆಲ ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆ ಇದೆ. ಆರಂಭಿಕ ಪೃಥ್ವಿ ಶಾ ಬದಲಿಗೆ ಕರ್ನಾಟಕದ ದೇವದತ್‌ ಪಡಿಕ್ಕಲ್‌ ಇಲ್ಲವೇ ಋುತುರಾಜ್‌ ಗಾಯಕ್ವಾಡ್‌ಗೆ ಸ್ಥಾನ ಸಿಗಬಹುದು. ಇಶಾನ್‌ ಕಿಶನ್‌ ಬದಲಿಗೆ ಸಂಜು ಸ್ಯಾಮ್ಸನ್‌ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ವೇಗಿಗಳಾದ ನವ್‌ದೀಪ್‌ ಸೈನಿ, ಚೇತನ್‌ ಸಕಾರಿಯಾ ಸಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸ್ಪಿನ್ನರ್‌ಗಳಾದ ಕೆ.ಗೌತಮ್‌ ಹಾಗೂ ರಾಹುಲ್‌ ಚಹರ್‌ ಸಹ ಬೆಂಚ್‌ ಕಾಯುತ್ತಿದ್ದು, ಅಂತಿಮ 11ರಲ್ಲಿ ಸ್ಥಾನ ಗಳಿಸುವ ವಿಶ್ವಾಸದಲ್ಲಿದ್ದಾರೆ.

ಏಕದಿನ ರ‍್ಯಾಂಕಿಂಗ್‌‌: 16ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಶಿಖರ್ ಧವನ್

ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ನಾಯಕ ಧವನ್‌ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಬಹುದು ಇಲ್ಲವೇ ಗೆದ್ದ ತಂಡವನ್ನೇ ಮುಂದುವರಿಸಬಹುದು. ಭಾರತ ಈ ಪಂದ್ಯದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟವಾಡಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಒತ್ತಡದಲ್ಲಿ ಶ್ರೀಲಂಕಾ: ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಶ್ರೀಲಂಕಾಕ್ಕೆ 2ನೇ ಪಂದ್ಯದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಅನಗತ್ಯ ಒತ್ತಡಕ್ಕೆ ಸಿಲುಕಿ ಗೆಲುವು ಕೈಚೆಲ್ಲಿದ್ದ ಲಂಕಾ ತಂಡದ ಮೇಲೆ ಕೋಚ್‌ ಮಿಕ್ಕಿ ಆರ್ಥರ್‌ ಸಿಟ್ಟು ಮಾಡಿಕೊಂಡಿದ್ದರು. ಬ್ಯಾಟಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ತೋರಿದ್ದ ಲಂಕಾ, ಬೌಲಿಂಗ್‌ನಲ್ಲಿ ಎಡವಿತ್ತು. ಸ್ಪಿನ್ನರ್‌ಗಳು ಗಮನಾರ್ಹ ಪ್ರದರ್ಶನ ತೋರಿದ್ದರು. ಹೀಗಾಗಿ, ಈ ಪಂದ್ಯದಲ್ಲಿ ತಂಡ ಸಂಘಟಿತ ಪ್ರದರ್ಶನ ತೋರಿ ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸೋನಿ ಟೆನ್‌

click me!