Asia Cup 2022 ರಿಜ್ವಾನ್‌ ಅರ್ಧಶತಕದ ಆಟ, ಪಾಕಿಸ್ತಾನಕ್ಕೆ ಗೆಲುವು

By Santosh NaikFirst Published Sep 4, 2022, 11:25 PM IST
Highlights

ಪಂದ್ಯದ ಪ್ರಮುಖ ಸಂದರ್ಭದಲ್ಲಿ ಪಾಕಿಸ್ತಾನದ ಬ್ಯಾಟಿಂಗ್‌ ವಿಭಾಗದ ಮೇಲೆ ನಿಯಂತ್ರಣ ಹೇರುವಲ್ಲಿ ವಿಫಲವಾದ ಭಾರತ ತಂಡ ಏಷ್ಯಾಕಪ್‌ನಲ್ಲಿ ಮೊದಲ ಸೋಲು ಕಂಡಿದೆ. ಭಾನುವಾರ ನಡೆದ ಹೈವೋಲ್ಟೇಜ್‌ ಮುಖಾಮುಖಿಯಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸಿದೆ.

ದುಬೈ (ಸೆ. 4): ಟಾಸ್‌ ಗೆಲುವಿನ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಪಾಕಿಸ್ತಾನದ ಆಟಕ್ಕೆ ಭಾರತ ಶರಣಾಗಿದೆ. ಆ ಮೂಲಕ ಹಾಲಿ ವರ್ಷದ ಏಷ್ಯಾಕಪ್‌ನಲ್ಲಿ ಟೀಮ್‌ ಇಂಡಿಯಾ ಮೊದಲ ಸೋಲು ಕಂಡಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್‌ ಟಿ20 ಟೂನಿರ್ಯ ಸೂಪರ್‌ -4 ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಸೋಲು ಕಂಡಿದೆ. ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆರಂಭಿಕ ಆಟಗಾರ ಮೊಹಮದ್‌ ರಿಜ್ವಾನ್‌ (71ರನ್‌, 51 ಎಸೆತ, 6 ಬೌಂಡರಿ, 2 ಸಿಕ್ಸರ್‌) ಅರ್ಧಶತಕ ಬಾರಿಸಿ ಗಮನಸೆಳೆದರು. ಅದರೊಂದಿಗೆ ಟೀಮ್‌ ಇಂಡಿಯಾ ವಿರುದ್ಧ ಲೀಗ್‌ ಹಂತದಲ್ಲಿ ಎದುರಾದ ಸೋಲಿಗೆ ಪಾಕಿಸ್ತಾನ ಸೇಡು ತೀರಿಸಿಕೊಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮಾಜಿ ನಾಯಕ ವಿರಾಟ್‌ ಕೊಹ್ಲಿ 44 ಎಸೆತಗಳಲ್ಲಿ ಬಾರಿಸಿದ ಆಕರ್ಷಕ 60 ರನ್‌ ಹಾಗೂ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮ ಹಾಗೂ ಕೆಎಲ್‌ ರಾಹುಲ್‌ ಸಿಡಿಸಿದ ತಲಾ 28 ರನ್‌ಗಳ ನೆರವಿನಿಂದ 7 ವಿಕೆಟ್‌ಗೆ 181 ರನ್‌ಗಳ ಉತ್ತಮ ಗುರಿ ನಿಗದಿ ಮಾಡಿತ್ತು. ಆದರೆ, ದುಬೈ ಸ್ಟೇಡಿಯಂನಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡುವುದು ಸುಲಭವಲ್ಲ. ಇಬ್ಬನಿಯ ಕಾರಣದಿಂದಾಗಿ ಬೌಲಿಂಗ್‌ ಮಾಡುವುದು ಕಷ್ಟವಾಗುತ್ತದೆ. ಇದರ ಲಾಭ ಪಡೆದುಕೊಂಡ ಪಾಕಿಸ್ತಾನ 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 182 ರನ್‌ ಬಾರಿಸಿ ಗೆಲುವು ಕಂಡಿತು.


ಚೇಸಿಂಗ್‌ ನಡೆಸಿದ ಪಾಕಿಸ್ತಾನ ತಂಡ ಆರಂಭದಲ್ಲಿಯೇ ಅಘಾತ ಕಂಡಿತು. ಆವೇಶ್‌ ಖಾನ್‌ ಬದಲಿಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ರವಿ ಬಿಷ್ಣೋಯ್‌ 4ನೇ ಓವರ್‌ನಲ್ಲಿಯೇ ಪಾಕ್‌ ತಂಡದ ನಾಯಕ ಬಾಬರ್‌ ಅಜಮ್‌ ಅವರ ವಿಕೆಟ್‌ ಉರುಳಿಸಿದ್ದರು. 10 ಎಸೆತಗಳನ್ನು ಎದುರಿಸಿದ್ದ ಬಾಬರ್‌ ಅಜಮ್‌ 2 ಬೌಂಡರಿ ಸಿಡಿಸಿ, ಬಿಷ್ಣೋಯ್‌ ಎಸೆತದಲ್ಲಿ ರೋಹಿತ್‌ ಶರ್ಮಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಫಖರ್‌ ಜಮಾನ್‌ಗೆ ನಿಯಂತ್ರಿಸಲು ಭಾರತ ಯಶಸ್ವಿಯಾಯಿತು. ಒಂದೊಂದು ರನ್‌ಗಳಿಸಲು ಪರದಾಟ ಮಾಡುತ್ತಿದ್ದ ಫಖರ್‌ ಜಮಾನ್‌ 18 ಎಸೆತಗಳಲ್ಲಿ 2 ಬೌಂಡರಿ ಇದ್ದ 15 ರನ್‌ ಬಾರಿಸಿ ಔಟಾದಾಗ ಪಾಕಿಸ್ತಾನ 63 ರನ್‌ ಬಾರಿಸಿತ್ತು. ಇಲ್ಲಿಯವರೆಗೂ ಭಾರತ ಕೂಡ ಪಂದ್ಯದಲ್ಲಿ ಪೈಪೋಟಿ ನೀಡುವ ನಿರೀಕ್ಷೆಯಲ್ಲಿತ್ತು.

ASIA CUP 2022: ವಿರಾಟ್‌ ಸೂಪರ್‌ ಹಾಫ್‌ ಸೆಂಚುರಿ, 181 ರನ್‌ ಪೇರಿಸಿದ ಭಾರತ

ಪಂದ್ಯದ ಗತಿ ಬದಲಿಸಿದ ನವಾಜ್‌-ರಿಜ್ವಾನ್‌: ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಬೇಕಾದ ಹಂತದಲ್ಲಿ ಜೊತೆಯಾದ ಮೊಹಮದ್‌ ನವಾಜ್‌ ಹಾಗೂ ಮೊಹಮದ್‌ ರಿಜ್ವಾನ್‌  41 ಎಸೆತಗಳಲ್ಲಿ 73 ರನ್‌ ಸಿಡಿಸಿ ಭಾರತದ ಆಸೆಯನ್ನು ಭಗ್ನಮಾಡಿದರು. ಕೇವಲ 20 ಎಸೆತ ಎದುರಿಸಿದ ಮೊಹಮದ್‌ ನವಾಜ್‌ 6 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ನೊಂದಿಗೆ 42 ರನ್‌ ಸಿಡಿಸಿದರು. ಇದರಿಂದಾಗಿ 16ನೇ ಓವರ್‌ನಲ್ಲಿನವಾಜ್‌ ಔಟಾಗುವ ವೇಳೆಗೆ ಪಾಕಿಸ್ತಾನ 136 ರನ್‌ ಬಾರಿಸಿ ಗೆಲುವಿನ ಹಾದಿಯಲ್ಲಿತ್ತು.

Serena Williams: ಯುಎಸ್‌ ಓಪನ್‌ ಮೂರನೇ ಸುತ್ತಿನಲ್ಲೇ ಸೆರೆನಾ ಔಟ್, ಟೆನಿಸ್ ಬದುಕಿಗೆ ವಿದಾಯ..!

11 ರನ್‌ಗಳ ಅಂತರದಲ್ಲಿ 2 ವಿಕೆಟ್‌: ಪಾಕಿಸ್ತಾನ ಸುಲಭ ಜಯದ ಹಾದಿಯಲ್ಲಿರುವ ವೇಳೆ ಭಾರತ 11 ರನ್‌ಗಳ ಅಂತರದಲ್ಲಿ ಎರಡು ವಿಕೆಟ್‌ ಉರುಳಿಸಿ ಪಾಕಿಸ್ತಾನಕ್ಕೆ ನಿಯಂತ್ರಣ ಹೇರಿತು. ಸ್ಪೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಮೊಹಮದ್‌ ನವಾಜ್‌ರನ್ನು ಭುವನೇಶ್ವರ್‌ ಕುಮಾರ್‌ ಔಟ್‌ ಮಾಡಿದರೆ, ಅರ್ಧಶತಕ ಬಾರಿಸಿ ಪಾಕಿಸ್ತಾನದ ಗೆಲುವಿನ ರೂವಾರಿಯಾಗುವ ಹಾದಿಯಲ್ಲಿದ್ದ ರಿಜ್ವಾನ್‌ರ ವಿಕೆಟ್‌ಅನ್ನು ಹಾರ್ದಿಕ್‌ ಪಾಂಡ್ಯ ಉರುಳಿಸಿದರು. 147 ರನ್ ವೇಳೆಗೆ ಪಾಕಿಸ್ತಾನ 4 ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ರವಿ ಬಿಷ್ಣೋಯ್‌ ಎಸೆತದಲ್ಲಿ ಆಸಿಫ್‌ ಅಲಿ ನೀಡಿದ ಸುಲಭದ ಕ್ಯಾಚ್‌ಅನ್ನು ಆರ್ಶ್‌ದೀಪ್‌ ಚಿಂಗ್‌ ಕೈಚೆಲ್ಲಿದರು.

click me!