
ಬೆಂಗಳೂರು (ಜು.7): ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಅಫ್ಘಾನಿಸ್ತಾನ ತಂಡವು ಶಕ್ತಿಯುತವಾಗಿ ಬೆಳೆದು ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ದಿನಗಳ ಸ್ಟಾರ್ ವೇಗದ ಬೌಲರ್ ಶಾಪೂರ್ ಜದ್ರಾನ್ (Shapoor Zadran) ಅವರು ಜು.7ರಂದು ನಿಧನರಾಗಿದ್ದಾರೆ. ಅವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' (HLH) ಎಂಬ ಅತ್ಯಂತ ಅಪರೂಪದ ಮತ್ತು ಪ್ರಾಣಾಪಾಯ ಉಂಟುಮಾಡುವ ರೋಗನಿರೋಧಕ ಶಕ್ತಿಯ ಅಸ್ವಸ್ಥತೆಯಿಂದ (Immune Disorder) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮ್ಮ 39ನೇ ಜನ್ಮದಿನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಶಾಪೂರ್ ಜದ್ರಾನ್ ವಿಧಿವಶರಾಗಿದ್ದು, ಅವರ ಸಹೋದರ ಹಾಗೂ ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ದವ್ಲತ್ ಜದ್ರಾನ್ ಭಾವುಕರಾಗಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. "ನನ್ನ ಪ್ರೀತಿಯ ಗೆಳೆಯ ಮತ್ತು ಸಹೋದರ ಶಾಪೂರ್ ಜದ್ರಾನ್ ಅಗಲಿಕೆಯಿಂದ ನನ್ನ ಹೃದಯ ಒಡೆದುಹೋಗಿದೆ. ಈ ನಷ್ಟವನ್ನು ವ್ಯಕ್ತಪಡಿಸಲು ನನಗೆ ಪದಗಳೇ ಸಿಗುತ್ತಿಲ್ಲ," ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಶಾಪೂರ್ ಜದ್ರಾನ್ ಅವರ ಸಾವಿಗೆ 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' (HLH) ಎಂಬ ಅಪರೂಪದ ರಕ್ತ ಮತ್ತು ರೋಗನಿರೋಧಕ ಶಕ್ತಿಯ ಅಸ್ವಸ್ಥತೆ ಕಾರಣವಾಗಿದೆ. ಈ ಕಾಯಿಲೆಯಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯು ಅತಿಯಾಗಿ ಸಕ್ರಿಯಗೊಂಡು, ಬಿಳಿ ರಕ್ತಕಣಗಳು ದೇಹದ ಸ್ವಂತ ಆರೋಗ್ಯಕರ ಜೀವಕೋಶಗಳು ಮತ್ತು ಅಂಗಾಂಗಗಳ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸುತ್ತವೆ. ಕುಟುಂಬದ ಮೂಲಗಳ ಪ್ರಕಾರ, ಈ ಕಾಯಿಲೆಯ ನಡುವೆಯೇ ಅವರಿಗೆ ತೀವ್ರವಾದ ಸೋಂಕು (Infection) ತಗುಲಿ ಅದು ಮೆದುಳಿಗೆ ಹರಡಿತ್ತು. ಇದು ಅವರ ಲಿವರ್‌ನಲ್ಲಿ ತೊಂದರೆ ಸೃಷ್ಟಿಸಿತ್ತು.
ಜದ್ರಾನ್ ಅವರ ಆರೋಗ್ಯ ಸಮಸ್ಯೆಗಳು 2025 ರ ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿದ್ದಾಗಲೇ ಆರಂಭವಾಗಿದ್ದವು. ಅಲ್ಲಿನ ವೈದ್ಯರು ವಿದೇಶದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರು. ಅದರಂತೆ, 2026 ರ ಜನವರಿಯಲ್ಲಿ ಅವರು ತಮ್ಮ ಕುಟುಂಬ ಹಾಗೂ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಅಸ್ಘರ್ ಅಫ್ಘಾನ್ ಅವರೊಂದಿಗೆ ನವದೆಹಲಿಗೆ ಆಗಮಿಸಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ಮೂಳೆ ಮಜ್ಜೆ ಪರೀಕ್ಷೆ (Bone Marrow Examination) ನಡೆಸಿದಾಗ ಅವರಿಗೆ ಕೊನೆಯ ಹಂತದ HLH ಇರುವುದು ದೃಢಪಟ್ಟಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಕೇವಲ 20 ದಿನಗಳ ನಂತರ ಸೋಂಕು ಮತ್ತೆ ಮರುಕಳಿಸಿದ್ದರಿಂದ ಅವರನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳ ನಡುವೆಯೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ.
ಶಾಪೂರ್ ಜದ್ರಾನ್ 1987 ಜುಲೈ 8 ರಂದು ಅಫ್ಘಾನಿಸ್ತಾನದ ಲೋಗರ್ ಪ್ರಾಂತ್ಯದಲ್ಲಿ ಜನಿಸಿದರು. ಇವರ ಬಾಲ್ಯವು ತಾಯ್ನಾಡಿನ ಭೀಕರ ಯುದ್ಧ ಮತ್ತು ಸಂಘರ್ಷಗಳ ನೆರಳಿನಲ್ಲೇ ಕಳೆಯಿತು. ಭದ್ರತೆಯ ಕಾರಣಕ್ಕಾಗಿ ಇವರ ಕುಟುಂಬವು ದೇಶ ತೊರೆದು ಪಾಕಿಸ್ತಾನದ ಪೇಶಾವರದಲ್ಲಿ ನಿರಾಶ್ರಿತರಾಗಿ (Refugees) ಆಶ್ರಯ ಪಡೆಯಬೇಕಾಯಿತು. ಪೇಶಾವರದಲ್ಲೇ ಜದ್ರಾನ್ ಕ್ರಿಕೆಟ್ ಜಗತ್ತನ್ನು ಪರಿಚಯಿಸಿಕೊಂಡರು. 2001 ರ ಸುಮಾರಿಗೆ ಹಾರ್ಡ್-ಬಾಲ್ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅವರು, ಪೇಶಾವರದ ಅರ್ಬಾಬ್ ನಿಯಾಜ್ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನದ ಮುಂದಿನ ತಾರೆಗಳಾದ ಮೊಹಮ್ಮದ್ ನಬಿ ಮತ್ತು ಅಸ್ಘರ್ ಅಫ್ಘಾನ್ ಅವರೊಂದಿಗೆ ತಮ್ಮ ಬೌಲಿಂಗ್ ಕೌಶಲ್ಯವನ್ನು ಬೆಳೆಸಿಕೊಂಡರು.
ಆರಂಭದಲ್ಲಿ ಪಾಕಿಸ್ತಾನ ತಂಡದ ಪರ ಆಡಬೇಕೆಂಬ ಕನಸು ಕಂಡಿದ್ದ ಜದ್ರಾನ್ ಅವರಿಗೆ, ಅಫ್ಘಾನಿಸ್ತಾನದ ಕೋಚ್ ಇಕ್ಬಾಲ್ ಸಿಕಂದರ್ ಅವರು ಪ್ರೇರಣೆ ನೀಡಿ ಅಫ್ಘಾನಿಸ್ತಾನದ ಉದಯೋನ್ಮುಖ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಳಿಸಿದರು. ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರನ್ನು ಆರಾಧ್ಯ ದೈವವಾಗಿ ಸ್ವೀಕರಿಸಿದ್ದ ಜದ್ರಾನ್, ಅವರಂತೆಯೇ ಉದ್ದನೆಯ ಕೂದಲು ಬಿಟ್ಟು, ಮೈದಾನದಲ್ಲಿ ಉಗ್ರ ಆಕ್ರಮಣಕಾರಿ ಬೌಲಿಂಗ್ ಮತ್ತು ಆವೇಶದ ಸಂಭ್ರಮಾಚರಣೆಗೆ ಹೆಸರಾಗಿದ್ದರು.
ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಶಾಪೂರ್ ಜದ್ರಾನ್ ಹೆಸರು ಎಂದಿಗೂ ಅಮರ. ಟೀಮ್ ಇಂಡಿಯಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಎಂಎಸ್ ಧೋನಿ ವಿಕೆಟ್ ಉರುಳಿಸುವ ಮೂಲಕ ಗಮನಸೆಳೆದಿದ್ದರು. ಆ ಬಳಿಕ ಸ್ಕಾಟ್ಲೆಂಡ್ ವಿರುದ್ಧ ಡುನೆಡಿನ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 38 ರನ್ನಿಗೆ 4 ವಿಕೆಟ್ ಕಿತ್ತು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು.ಅಷ್ಟೇ ಅಲ್ಲದೆ, ಅಂತಿಮವಾಗಿ ತಂಡಕ್ಕೆ ಜಯದ ಅಗತ್ಯವಿದ್ದಾಗ 11ನೇ ಬ್ಯಾಟರ್ ಆಗಿ ಕ್ರೀಸ್‌ಗೆ ಬಂದ ಜದ್ರಾನ್, ಐತಿಹಾಸಿಕ ವಿನ್ನಿಂಗ್ ಬೌಂಡರಿ ಬಾರಿಸುವ ಮೂಲಕ ಅಫ್ಘಾನಿಸ್ತಾನಕ್ಕೆ ವಿಶ್ವಕಪ್ ಇತಿಹಾಸದಲ್ಲೇ ‘ಮೊದಲ ವಿಜಯ’ ತಂದುಕೊಟ್ಟಿದ್ದರು. ಆ ಗೆಲುವಿನ ಸಂಭ್ರಮದಲ್ಲಿ ಅವರು ಮೈದಾನದಲ್ಲೇ ಮಲಗಿ ಸಂಭ್ರಮಿಸಿದ್ದು ಕ್ರಿಕೆಟ್ ಲೋಕದ ಅತ್ಯಂತ ಐಕಾನ್ ಚಿತ್ರಗಳಲ್ಲಿ ಒಂದಾಗಿದೆ.
ಇದಕ್ಕೂ ಮುನ್ನ, 2010 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಬಲಿಷ್ಠ ಬ್ಯಾಟರ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರ ವಿಕೆಟ್ ಕಿತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದರು. 2012 ರ ಟಿ20 ವಿಶ್ವಕಪ್‌ನಲ್ಲಿ ಗುಲ್ಬದಿನ್ ನೈಬ್ ಜೊತೆಗೂಡಿ 9ನೇ ವಿಕೆಟ್‌ಗೆ 44 ರನ್‌ಗಳ ಪ್ರಮುಖ ಜೊತೆಯಾಟವಾಡಿ ತಮ್ಮ ಬ್ಯಾಟಿಂಗ್ ಹೋರಾಟವನ್ನೂ ಪ್ರದರ್ಶಿಸಿದ್ದರು. 2018 ರ ಟಿ20 ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ 40 ರನ್ನಿಗೆ 3 ವಿಕೆಟ್ ಪಡೆದಿದ್ದು ಅವರ ಮತ್ತೊಂದು ಸ್ಮರಣೀಯ ಪ್ರದರ್ಶನವಾಗಿತ್ತು.
ಅಫ್ಘಾನಿಸ್ತಾನ ತಂಡವು ಐಸಿಸಿ ಕ್ವಾಲಿಫೈಯಿಂಗ್ ಟೂರ್ನಿಗಳಿಂದ ಹಿಡಿದು ಇವತ್ತು ಜಾಗತಿಕ ಕ್ರಿಕೆಟ್‌ನ ಬಲಿಷ್ಠ ಶಕ್ತಿಯಾಗಿ ಬೆಳೆಯುವವರೆಗಿನ 22 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣದಲ್ಲಿ ಶಾಪೂರ್ ಜದ್ರಾನ್ ಜೊತೆಯಾಗಿದ್ದರು. 6 ಅಡಿ ಎತ್ತರದ ಈ ಎಡಗೈ ಎಕ್ಸ್‌ಪ್ರೆಸ್ ವೇಗಿ ದೇಶದ ಪರ ಒಟ್ಟು 80 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 80 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2025 ರ ಜನವರಿಯಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತ ನಿವೃತ್ತಿ ಘೋಷಿಸಿದ್ದರು.
ಏಕದಿನ ಕ್ರಿಕೆಟ್ (ODI): 2009 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 24 ರನ್ನಿಗೆ 4 ವಿಕೆಟ್ ಪಡೆಯುವ ಮೂಲಕ ಭರ್ಜರಿ ಪದಾರ್ಪಣೆ ಮಾಡಿದ್ದ ಅವರು, ಒಟ್ಟು 44 ಒನ್‌ಡೇ ಪಂದ್ಯಗಳಿಂದ 44 ವಿಕೆಟ್ ಪಡೆದಿದ್ದಾರೆ. 2015 ರ ವಿಶ್ವಕಪ್‌ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಅಫ್ಘಾನಿಸ್ತಾನದ ಪರ ಗರಿಷ್ಠ ವಿಕೆಟ್ ಟೇಕರ್ ಆಗಿದ್ದರು.
ಟಿ20 ಅಂತರರಾಷ್ಟ್ರೀಯ (T20I): ಒಟ್ಟು 36 ಪಂದ್ಯಗಳನ್ನಾಡಿರುವ ಜದ್ರಾನ್ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಮೂರು ಟಿ20 ವಿಶ್ವಕಪ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದು, 2009 ರ ಎಸಿಸಿ ಟಿ20 ಕಪ್ ಗೆದ್ದ ಅಫ್ಘಾನ್ ತಂಡದ ಪ್ರಮುಖ ಸದಸ್ಯರಾಗಿದ್ದರು.
ಅಫ್ಘಾನಿಸ್ತಾನ ಕ್ರಿಕೆಟ್ ಕಡು ಕಷ್ಟದ ದಿನಗಳಲ್ಲಿದ್ದಾಗ ತನ್ನ ಆಕ್ರಮಣಕಾರಿ ಬೌಲಿಂಗ್ ಹಾಗೂ ಅಪ್ರತಿಮ ದೇಶಪ್ರೇಮದ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಧ್ವಜ ಎತ್ತಿಹಿಡಿದಿದ್ದ ಶಾಪೂರ್ ಜದ್ರಾನ್ ಅವರ ಅಕಾಲಿಕ ನಿಧನಕ್ಕೆ ಇಡೀ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.