
ದುಬೈ(ಸೆ.04): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಸಂಡೆಯಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಈಗಾಗಲೇ ಗ್ರೂಪ್ ಹಂತದಲ್ಲಿ ಭಾರತ ಎದುರು ರೋಚಕ ಸೋಲು ಕಂಡಿದ್ದ ಪಾಕಿಸ್ತಾನ ತಂಡವು ಸೂಪರ್ 4 ಹಂತದಲ್ಲಿ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿತ್ತು. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಮಾರಕ ವೇಗಿ ಗಾಯದ ಸಮಸ್ಯೆಯಿಂದಾಗಿ ಭಾರತ ಎದುರಿನ ಪಂದ್ಯದಿಂದ ಹೊರಬಿದ್ದಿದ್ದಾರೆ.
ಹೌದು, ಪಾಕಿಸ್ತಾನದ ಬಲಗೈ ಮಾರಕ ವೇಗಿ ಶೆಹನವಾಜ್ ದಹಾನಿ, ಸೈಡ್ ಸ್ಟ್ರೈನ್ ನೋವಿನಿಂದ ಬಳಲುತ್ತಿದ್ದು, ಭಾರತ ಎದುರಿನ ಸೂಪರ್ 4 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಖಚಿತಪಡಿಸಿದೆ. 'ಶೆಹನವಾಜ್ ದಹಾನಿ, ಸೈಡ್ ಸ್ಟ್ರೈನ್ ನೋವಿನಿಂದ ಬಳಲುತ್ತಿದ್ದು, ಭಾರತ ವಿರುದ್ದ ಭಾನುವಾರ ನಡೆಯಲಿರುವ ಎಸಿಸಿ ಟಿ20 ಏಷ್ಯಾಕಪ್ ಟೂರ್ನಿಯ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಶುಕ್ರವಾರ ಶಾರ್ಜಾದಲ್ಲಿ ನಡೆದ ಹಾಂಕಾಂಗ್ ವಿರುದ್ದದ ಪಂದ್ಯದ ವೇಳೆ ದಹಾನೆ ಗಾಯಗೊಂಡಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದಹಾನಿಯವರಿಗೆ ಸೈಡ್ ಸ್ಟ್ರೈನ್ ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿಯು ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದ್ದಾರೆ. ಸರಿಯಾಗಿ ಸ್ಕ್ಯಾನಿಂಗ್ ನಡೆಸಿದ ಬಳಿಕವಷ್ಟೇ ದಹಾನಿಯವರ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಸರಿಯಾದ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ ಎಂದು ಪಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಗೂ ಮುನ್ನ ಗಾಯದ ಸಮಸ್ಯೆಯಿಂದಾಗಿ ತಂಡದ ಮಾರಕ ವೇಗಿ ಶಾಹಿನ್ ಶಾ ಅಫ್ರಿದಿ, ಮೊಹಮ್ಮದ್ ವಾಸೀಂ ಜೂನಿಯರ್ ಅವರ ಸೇವೆಯಿಂದ ವಂಚಿತರಾಗಿತ್ತು. ಇದೀಗ ಭಾರತ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಶೆಹನವಾಜ್ ದಹಾನಿ ಕೂಡಾ ಅಲಭ್ಯರಾಗಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
Asia Cup 2022 ಪಾಕಿಸ್ತಾನಕ್ಕೆ ಮತ್ತೊಮ್ಮೆ ಸೋಲುಣಿಸುತ್ತಾ ಭಾರತ..?
ಶೆಹನವಾಜ್ ದಹಾನಿ ಭಾರತ ಎದುರಿನ ಪಂದ್ಯದ ವೇಳೆ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಪಾಕಿಸ್ತಾನ ತಂಡಕ್ಕೆ ಕೊನೆಯಲ್ಲಿ ದಹಾನಿ ಕೇವಲ 6 ಎಸೆತಗಳಲ್ಲಿ 16 ರನ್ ಸಿಡಿಸುವ ಮೂಲಕ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾಗಿದ್ದು. ಇನ್ನು ಬೌಲಿಂಗ್‌ನಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟಿದ್ದರು. ಆದರೆ ಭಾರತ ಎದುರು ವಿಕೆಟ್ ಕಬಳಿಸಲು ದಹಾನಿಗೆ ಸಾಧ್ಯವಾಗಿರಲಿಲ್ಲ. ಇನ್ನು ಹಾಂಕಾಂಗ್ ಎದುರಿನ ಪಂದ್ಯದಲ್ಲಿ ದಹಾನಿ ಕೇವಲ 7 ರನ್ ನೀಡಿ ಒಂದು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಭಾರತ ಎದುರಿನ ಪಂದ್ಯಕ್ಕೆ ಶೆಹನವಾಜ್ ದಹಾನಿ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ, ಅನುಭವಿ ವೇಗಿ ಹಸನ್ ಅಲಿಗೆ ಪಾಕಿಸ್ತಾನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಹಸನ್ ಅಲಿ, ಭಾರತ ಎದುರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.