'ನನ್ನನ್ನು ಕಂಡರೆ ಈಗಲೂ ಮುಖ ತಿರುಗಿಸ್ತಾನೆ'; ಗೌತಮ್ ಗಂಭೀರ್ ದ್ವೇಷದ ಬಗ್ಗೆ ಮಾಜಿ ಸೆಲೆಕ್ಟರ್ ಅಚ್ಚರಿ ಹೇಳಿಕೆ!

Published : Mar 13, 2026, 04:39 PM IST
Gautam Gambhir

ಸಾರಾಂಶ

ಟೀಂ ಇಂಡಿಯಾದಿಂದ ತನ್ನನ್ನು ಕೈಬಿಟ್ಟಿದ್ದಕ್ಕೆ ಗೌತಮ್ ಗಂಭೀರ್‌ಗೆ ಈಗಲೂ ತನ್ನ ಮೇಲೆ ಸಿಟ್ಟಿದೆ ಎಂದು ಮಾಜಿ ಚೀಫ್ ಸೆಲೆಕ್ಟರ್ ಸಂದೀಪ್ ಪಾಟೀಲ್ ಹೇಳಿದ್ದಾರೆ. ಆತ್ಮೀಯ ಸ್ನೇಹಿತರಾಗಿದ್ದ ಗಂಭೀರ್, ಆಯ್ಕೆ ಸಮಿತಿಯ ನಿರ್ಧಾರದ ನಂತರ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದಿದ್ದಾರೆ.

ಮುಂಬೈ: ಟೀಂ ಇಂಡಿಯಾದಿಂದ ತನ್ನನ್ನು ಕೈಬಿಟ್ಟಿದ್ದಕ್ಕೆ ಗೌತಮ್ ಗಂಭೀರ್‌ಗೆ ಈಗಲೂ ತನ್ನ ಮೇಲೆ ಸಿಟ್ಟಿದೆ ಮತ್ತು ಆ ಕೋಪವನ್ನು ಅವರು ಇಂದಿಗೂ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಚೀಫ್ ಸೆಲೆಕ್ಟರ್ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರೂ, ಆಯ್ಕೆ ಸಮಿತಿಯ ನಿರ್ಧಾರದ ನಂತರ ಗಂಭೀರ್ ತನ್ನೊಂದಿಗೆ ಮಾತನಾಡುವುದಿರಲಿ, ಮುಖ ನೋಡಲು ಕೂಡ ಇಷ್ಟಪಡುವುದಿಲ್ಲ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಕಿ ಲಾಲ್ವಾನಿ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಂದೀಪ್ ಪಾಟೀಲ್ ಈ ಹಳೆಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತಂಡದಿಂದ ಕೈಬಿಟ್ಟಿದ್ದಕ್ಕೆ ಗಂಭೀರ್‌ಗೆ ಇನ್ನೂ ಸಿಟ್ಟಿದೆ

ಸಂದೀಪ್ ಪಾಟೀಲ್ 2012ರಿಂದ 2016ರವರೆಗೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಇದೇ ಸಮಯದಲ್ಲಿ ಗಂಭೀರ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. "ಗಂಭೀರ್‌ಗೆ ಈಗಲೂ ನನ್ನ ಮೇಲೆ ಕೋಪವಿದೆ. ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎದುರಾದರೂ ಅವರು ಮಾತನಾಡಿಸುವುದಿಲ್ಲ. ನಾನು 'ಹಲೋ' ಅಂದರೂ ಪ್ರತಿಕ್ರಿಯಿಸಲ್ಲ, ಕನಿಷ್ಠ ನನ್ನತ್ತ ನೋಡೋದೇ ಇಲ್ಲ. ನಾವು ಹಲವು ಚಾನೆಲ್ ಚರ್ಚೆಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದೇವೆ, ಆಗಲೂ ನನ್ನನ್ನು ನೋಡದ ಹಾಗೆ ಇರುತ್ತಾರೆ," ಎಂದು ಪಾಟೀಲ್ ವಿವರಿಸಿದ್ದಾರೆ.

ಹಿಂದೆ ತಾವು ಎರಡು ವಾರಕ್ಕೊಮ್ಮೆ ಫೋನ್‌ನಲ್ಲಿ ಮಾತನಾಡುತ್ತಿದ್ದೆವು ಮತ್ತು ಒಟ್ಟಿಗೆ ಟೆನಿಸ್ ಕೂಡ ಆಡುತ್ತಿದ್ದೆವು ಎಂದು ಅವರು ನೆನಪಿಸಿಕೊಂಡರು. "ಪ್ರತಿಯೊಬ್ಬ ಆಟಗಾರನೂ ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾನೆ. ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರಂತಹ ಆಟಗಾರರು ಸದ್ದಿಲ್ಲದೆ ನಿವೃತ್ತರಾದರು. ಸೆಹ್ವಾಗ್ ಒಂದು ಬೀಳ್ಕೊಡುಗೆ ಪಂದ್ಯವನ್ನು ಬಯಸಿದ್ದರು. ಆದರೆ ಗಂಭೀರ್ ತನ್ನ ವೃತ್ತಿಜೀವನದ ಬಗ್ಗೆ ತುಂಬಾ ಗಂಭೀರವಾಗಿದ್ದರು. ಒಳ್ಳೆಯ ಫಾರ್ಮ್‌ನಲ್ಲಿದ್ದಾಗ ಯಾವ ಆಟಗಾರನೂ ತಂಡದಿಂದ ಹೊರಗುಳಿಯಲು ಇಷ್ಟಪಡುವುದಿಲ್ಲ. ಅದು ಸಹಜ," ಎಂದು ಪಾಟೀಲ್ ಹೇಳಿದ್ದಾರೆ.

ಗಂಭೀರ್ ತನ್ನ ಜೊತೆ ಹೀಗೆ ಅಂತರ ಕಾಯ್ದುಕೊಂಡಿರುವುದು ನನಗೆ ಬೇಸರವಿದೆ, ಆದರೆ ಅವರ ಮೇಲಿನ ನನ್ನ ಗೌರವ ಕಡಿಮೆಯಾಗಿಲ್ಲ ಎಂದು ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದರು. "ಗಂಭೀರ್ ಒಬ್ಬ ಅತ್ಯುತ್ತಮ ವ್ಯಕ್ತಿ ಮತ್ತು ಗುರಿ ಸಾಧಿಸುವ ಛಲವಿರುವ ಆಟಗಾರ," ಎಂದು ಪಾಟೀಲ್ ಹೇಳಿದರು. 2012ರಿಂದ 2016ರ ಅವಧಿಯಲ್ಲಿ ಸಚಿನ್, ಗಂಗೂಲಿ, ದ್ರಾವಿಡ್ ಅವರಂತಹ ದಿಗ್ಗಜ ಆಟಗಾರರು ನಿವೃತ್ತರಾದರು. ಈ ಸಮಯದಲ್ಲಿ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿತ್ತು. ಇದೇ ಕಾರಣಕ್ಕೆ ಗಂಭೀರ್ ಅವರಂತಹ ಆಟಗಾರರು ತಂಡದಿಂದ ಹೊರಬೀಳಬೇಕಾಯಿತು ಎಂದು ವಿಶ್ಲೇಷಿಸಲಾಗುತ್ತದೆ.

ಆಟಗಾರನಾಗಿ ಹಾಗೂ ಕೋಚ್ ಆಗಿ ತಲಾ ಎರಡು ಐಸಿಸಿ ಟ್ರೋಫಿ ಗೆದ್ದ ಗೌತಮ್ ಗಂಭೀರ್

ಭಾರತ ಕಂಡ ಪ್ರತಿಭಾನ್ವಿತ ಎಡಗೈ ಆಟಗಾರನಾಗಿದ್ದ ಗೌತಮ್ ಗಂಭೀರ್ ಓರ್ವ ಆಟಗಾರನಾಗಿ ಎರಡು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಪರ ಗರಿಷ್ಠ ಸ್ಕೋರ್ ಬಾರಿಸುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಇದೀಗ ಟೀಂ ಇಂಡಿಯಾ ಹೆಡ್‌ ಕೋಚ್ ಆಗಿರುವ ಗೌತಮ್ ಗಂಭೀರ್ ಭಾರತ ಪರ ಸತತ ಎರಡು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಬೀಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಾಕ್ ಆಟಗಾರನನ್ನು ಖರೀದಿಸಿದ ಸನ್‌ರೈಸರ್ಸ್ ಫ್ರಾಂಚೈಸಿ! ಜನರ ಆಕ್ರೋಶದ ಬೆನ್ನಲ್ಲೇ ಮೌನ ಮುರಿದ ಬಿಸಿಸಿಐ!
ಬೇಕಂತಲೇ ಸಂಜು ಸ್ಯಾಮ್ಸನ್ ಫೋಟೋ ಬಿಟ್ಟು ಫೋಸ್ಟ್ ಮಾಡಿದ್ರಾ ಶುಭ್‌ಮನ್ ಗಿಲ್? ಆಕ್ರೋಶ ಹೊರಹಾಕಿದ ಫ್ಯಾನ್ಸ್‌