Latest Videos

ಜೈಸ್ವಾಲ್ ಶತಕ ಬಾರಿಸಲು ತಮ್ಮ ಫಿಫ್ಟಿ ಅವಕಾಶ ತ್ಯಾಗ ಮಾಡಿದ ಸ್ಯಾಮ್ಸನ್‌..! ಸಂಜು ನಡೆಗೆ ಫ್ಯಾನ್ಸ್ ಫಿದಾ

By Naveen KodaseFirst Published May 12, 2023, 4:13 PM IST
Highlights

ಕೆಕೆಆರ್ ಎದುರು ಅನಾಯಾಸದ ಗೆಲುವು ದಾಖಲಿಸಿದ ರಾಜಸ್ಥಾನ ರಾಯಲ್ಸ್
ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್
ಜೈಸ್ವಾಲ್ ಶತಕ ಬಾರಿಸಲು ಶಕ್ತಿ ಮೀರಿ ಸಹಕರಿಸಿದ ಸಂಜು ಸ್ಯಾಮ್ಸನ್

ಕೋಲ್ಕತಾ(ಮೇ.12): ಕಳೆದ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು, ಕೊನೆಗೂ ಫಿನಿಕ್ಸ್‌ನಂತೆ ಎದ್ದು ಬರುವಲ್ಲಿ ಯಶಸ್ವಿಯಾಗಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡವು ಇಲ್ಲಿನ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌ ರೈಡರ್ಸ್ ಎದುರು ಅನಾಯಾಸವಾಗಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಮೂರನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಕೋಲ್ಕತಾ ನೈಟ್ ರೈಡರ್ಸ್‌ ನೀಡಿದ್ದ 150 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ರಾಜಸ್ಥಾನ ರಾಯಲ್ಸ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು 13.1 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಈ ಒಂದೇ ಪಂದ್ಯದಲ್ಲಿ ಐಪಿಎಲ್‌ನ ಎರಡು ಸಾರ್ವಕಾಲಿಕ ದಾಖಲೆಗಳು ನಿರ್ಮಾಣವಾಗಿದ್ದು ವಿಶೇಷ. ರಾಜಸ್ಥಾನ ರಾಯಲ್ಸ್ ತಂಡದ ತಾರಾ ಲೆಗ್‌ಸ್ಪಿನ್ನರ್, ಡ್ವೇನ್‌ ಬ್ರಾವೋ ಅವರನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದರು. ಈ ಪಂದ್ಯದಲ್ಲಿ ಚಹಲ್ 4 ಓವರ್‌ ಬೌಲಿಂಗ್ ಮಾಡಿ ಕೇವಲ 25 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಇದೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ಸ್ಪೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲಿ ಅತಿವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದರು. ಈ ಮೊದಲು ಕೆ ಎಲ್ ರಾಹುಲ್ ಹಾಗೂ ಪ್ಯಾಟ್ ಕಮಿನ್ಸ್‌ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.

ಕೆಕೆಆರ್ ನೀಡಿದ್ದ ಸ್ಪರ್ಧಾತ್ಮ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್‌ ಎರಡು ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 26 ರನ್ ಸಿಡಿಸಿದರು. ಇನ್ನು ಎರಡನೇ ಓವರ್‌ನಲ್ಲಿ ಜೋಸ್ ಬಟ್ಲರ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ 69 ಎಸೆತಗಳಲ್ಲಿ ಮುರಿಯದ 121 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 41 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಇನ್ನು ಇದೆಲ್ಲದರ ನಡುವೆ ಸ್ಪೋಟಕ ಬ್ಯಾಟಿಂಗ್ ಮೂಲಕ ಟೂರ್ನಿಯಲ್ಲಿ ಎರಡನೇ ಶತಕದತ್ತ ದಾಪುಗಾಲಿಡುತ್ತಿದ್ದ ಯಶಸ್ವಿ ಜೈಸಾಲ್‌ ಅವರ ಸೆಂಚುರಿ ತಪ್ಪಿಸಲು ಕೆಕೆಆರ್ ಯುವ ಸ್ಪಿನ್ನರ್ ಸುಯಾಶ್ ಶರ್ಮಾ ವೈಡ್‌ ಎಸೆಯುವ ಯತ್ನವನ್ನು ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ವಿಫಲಗೊಳಿಸಿದರು. 

ವೈಡ್ ಹಾಕಲೆತ್ನಿಸಿದ ಸುಯಾಶ್ ಶರ್ಮಾ ಕೀಳು ಅಭಿರುಚಿಯನ್ನು ಕಟು ಶಬ್ದಗಳಿಂದ ಟೀಕಿಸಿದ ಆಕಾಶ್ ಚೋಪ್ರಾ

13ನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅಜೇಯ 94 ರನ್ ಬಾರಿಸಿ ನಾನ್‌ ಸ್ಟ್ರೈಕ್‌ನಲ್ಲಿದ್ದರು. 13ನೇ ಓವರ್‌ನ ಕೊನೆಯ ಎಸೆತಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್‌ ಗೆಲ್ಲಲು ಕೇವಲ 3 ರನ್ ಅಗತ್ಯವಿತ್ತು. 13ನೇ ಓವರ್‌ನ ಕೊನೆಯ ಎಸೆತವನ್ನು ಸುಯಾಶ್ ಶರ್ಮಾ ಲೆಗ್‌ಸೈಡ್‌ನತ್ತ ಬೌಲಿಂಗ್ ಮಾಡುವ ಮೂಲಕ ವೈಡ್ ಎಸೆಯುವ ಯತ್ನ ನಡೆಸಿದರು. ಆದರೆ ನಾಯಕ ಸಂಜು ಸ್ಯಾಮ್ಸನ್‌, ಅದನ್ನು ರಕ್ಷಣಾತ್ಮಕವಾಗಿ ಆಡುವ ಮೂಲಕ ಯಾವುದೇ ರನ್‌ ಗಳಿಸಲಿಲ್ಲ. ಒಂದು ವೇಳೆ ಅದು ವೈಡ್ ಆಗಿ, ಚೆಂಡು ಬೌಂಡರಿ ಗೆರೆ ದಾಟಿದ್ದರೇ ಅದೇ ಓವರ್‌ನಲ್ಲಿ ಪಂದ್ಯ ಮುಗಿದು ಹೋಗುವ ಸಾಧ್ಯತೆಯಿತ್ತು. 

ಆ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸ್ವತಃ 29 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 48 ರನ್ ಬಾರಿಸಿದ್ದರು. ತಾವು ಅರ್ಧಶತಕ ಬಾರಿಸುವುದನ್ನು ಬಿಟ್ಟು, ಮರು ಓವರ್‌ನಲ್ಲಿ ಸಿಕ್ಸರ್ ಬಾರಿಸಿ ಶತಕ ಪೂರೈಸಲು ಯಶಸ್ವಿ ಜೈಸ್ವಾಲ್‌ಗೆ ನಾಯಕ ಸಂಜು ಸ್ಯಾಮ್ಸನ್ ಸನ್ನೆ ಮಾಡಿದರು. ಹೀಗಿದ್ದೂ ಯಶಸ್ವಿ ಜೈಸ್ವಾಲ್ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರಾದರೂ, ಮೂರಂಕಿ ಮೊತ್ತ ದಾಖಲಿಸಲು ವಿಫಲರಾದರು. ಆದರೆ ಸಂಜು ಸ್ಯಾಮ್ಸನ್ ಓರ್ವ ಟೀಂ ಪ್ಲೇಯರ್ ಎನ್ನುವುದನ್ನು ಈ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದು, ಸಂಜು ನಿಸ್ವಾರ್ಥ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

click me!