
ಚೆನ್ನೈ (ಮಾ.28): ತಮಿಳರ ಕೋಟೆಯಲ್ಲಿ ಕೊನೆಗೂ ಕನ್ನಡಿಗರ ಟೀಮ್‌ನ ಕಮಾಲ್ ನಡೆದಿದೆ. ಇದರ ಅರ್ಥವೆಂದರೆ ಬರೋಬ್ಬರಿ 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈನ ಎಂ.ಚಿದಂಬರಂ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಶುಕ್ರವಾರ ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮನೋಜ್ಞ ಪ್ರದರ್ಶನ ನೀಡಿದ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡ 50 ರನ್‌ಗಳಿಂದ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ತಂಡ 7 ವಿಕೆಟ್‌ಗೆ 196 ರನ್ ಪೇರಿಸಿತು. ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂದ್ಯದ ಯಾವುದೇ ಹಂತದಲ್ಲೂ ಮೊತ್ತವನ್ನು ಚೇಸ್ ಮಾಡುವ ಪ್ರಯತ್ನವನ್ನೇ ಮಾಡಲಿಲ್ಲ.
ಇನ್ನಿಂಗ್ಸ್‌ನ 2ನೇ ಓವರ್ ಎಸೆದ ಜೋಸ್ ಹ್ಯಾಸಲ್‌ವುಡ್ ನಾಲ್ಕು ಎಸೆತಗಳ ಅಂತರದಲ್ಲಿ ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ಹಾಗೂ ರುತುರಾಜ್ ಗಾಯಕ್ವಾಡ್‌ರನ್ನು ಪೆವಿಲಿಯನ್‌ಗಟ್ಟಿದರು. ಆ ಬಳಿಕ ಚೆನ್ನೈ ತಂಡ ಗೆಲುವಿನ ರೇಸ್‌ನಲ್ಲೇ ಉಳಿದಿರಲಿಲ್ಲ. ಹಂತ ಹಂತವಾಗಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ 10ನೇ ಓವರ್ ಮುಗಿಯುವ ವೇಳೆಗೆ ಪಂದ್ಯ ಗೆಲ್ಲುವ ಯಾವುದೇ ಲಕ್ಷಣ ಕಂಡಿರಲಿಲ್ಲ. ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಲಷ್ಟೇ ಶಕ್ತವಾಯಿತು.
15 ಓವರ್‌ಗಳ ವೇಳೆಗೆ ಚೆನ್ನೈ ತಂಡ 99 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ನಲ್ಲಿ ಜಡೇಜಾಗೆ ಧೋನಿ ಜೊತೆಯಾದಾಗ ಮಾತ್ರ ಚೆನ್ನೈ ಫ್ಯಾನ್ಸ್‌ಗಳ ಕಡೆಯಿಂದ ಕರತಾಡನ ಬಂದಿತು. ಆದರೆ, ಧೋನಿ ಬಂದರೂ ಚೆನ್ನೈ ತಂಡಕ್ಕೆ ಗೆಲುವು ಕಾಣುವ ಯಾವುದೇ ಲಕ್ಷಣ ಇದ್ದಿರಲಿಲ್ಲ. ಚೆನ್ನೈ ತಂಡದ ಪರವಾಗಿ ಆರಂಭಿಕ ಆಟಗಾರ ರಚಿನ್ ರವೀಂದ್ರ 31 ಎಸೆತಗಳಲ್ಲಿ 5 ಬೌಂಡರಿ ಇದ್ದ 41 ರನ್ ಬಾರಿಸಿ ಔಟಾದರು. ಉಳಿದಂತೆ ರಾಹುಲ್ ತ್ರಿಪಾಠಿ (5), ರುತುರಾಜ್ ಗಾಯಕ್ವಾಡ್ (0), ದೀಪಕ್ ಹೂಡಾ (4), ಸ್ಯಾಮ್ ಕರನ್ (8) ಒಂದಂಕಿ ಮೊತ್ತಕ್ಕೆ ಔಟಾದರು. ರವಿಚಂದ್ರನ್ ಅಶ್ವಿನ್ 11 ರನ್ ಬಾರಿಸಲಷ್ಟೇ ಯಶಸ್ವಿಯಾದರು.
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆರ್‌ಸಿಬಿ ಅದ್ಭುತ ನಿರ್ವಹಣೆ ನೀಡಿತು. ರತಜ್ ಪಾಟಿದಾರ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್‌ಹಾಗೂ ಜಿತೇಶ್ ಶರ್ಮ ಬ್ಯಾಟಿಂಗ್‌ನಲ್ಲಿ ಗಮನಸೆಳೆದರೆ, ಬೌಲಿಂಗ್‌ನಲ್ಲಿ ಜೋಸ್ ಹ್ಯಾಸಲ್‌ವುಡ್‌ಹಾಗೂ ಭುವನೇಶ್ವರ್‌ಕುಮಾರ್ ಪವರ್‌ಪ್ಲೇಯಲ್ಲಿ ಚೆನ್ನೈ ತಂಡವನ್ನು ಕಟ್ಟಿಹಾಕಿದ್ದರು. ಯಶ್ ದಯಾಳ್ ಎಸೆದ 13ನೇ ಓವರ್‌ನಲ್ಲಿ ರಚಿನ್ ರವೀಂದ್ರ ಹಾಗೂ ಶಿವಂ ದುಬೆ ವಿಕೆಟ್ ಕಳೆದುಕೊಂಡಿದ್ದು ತಂಡದ ಹೋರಾಟದ ಮೇಲೆ ಪರಿಣಾಮ ಬೀರಿತು. ಎಂಎಸ್ ಧೋನಿ, ಅಶ್ವಿನ್‌ಗಿಂತ ಕೆಳ ಕ್ರಮಾಂಕದಲ್ಲಿ 9ನೇ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಇಳಿದಿದ್ದು ಅಚ್ಚರಿಗೆ ಕಾರಣವಾಯಿತು. 16 ಎಸೆತಗಳಲ್ಲಿ 30 ರನ್ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ಸಿಎಸ್‌ಕೆ ಪರವಾಗಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸಮನ್ ಎನಿಸಿಕೊಂಡರು.
ಆರ್‌ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ಕೊಹ್ಲಿ ಬಗ್ಗೆ ಅಚ್ಚರಿಯ ಮಾತನಾಡಿದ ಸಿಎಸ್‌ಕೆ ಕ್ಯಾಪ್ಟನ್ ಗಾಯಕ್ವಾಡ್!
ಆರ್‌ಸಿಬಿ ತಂಡ ತನ್ನ ಮುಂದಿನ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದ್ದು, ಇದು ಹಾಲಿ ಸೀಸನ್‌ನಲ್ಲಿ ತವರಿನ ಮೈದಾನ ಚಿನ್ನಸ್ವಾಮಿಯಲ್ಲಿ ತಂಡದ ಮೊದಲ ಪಂದ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಭಾನುವಾರ ಗುವಾಹಟಿಯಲ್ಲಿ ಎದುರಿಸಲಿದೆ.
ಯಾವ ತಂಡ ಐಪಿಎಲ್ 2025 ಟ್ರೋಫಿ ಗೆಲ್ಲಲಿದೆ? ಸ್ಫೋಟಕ ಭವಿಷ್ಯ ನುಡಿದ ಐಐಟಿ ಬಾಬ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.