ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 196 ರನ್ ಗಳಿಸಿದೆ. ರಜತ್ ಪಾಟಿದಾರ್ ಅರ್ಧಶತಕ ಮತ್ತು ಕೊನೆಯಲ್ಲಿ ಟಿಮ್ ಡೇವಿಡ್ ಸಿಕ್ಸರ್ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿದೆ.
ಚೆನ್ನೈ (ಮಾ.28): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025ನ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 197 ರನ್ ಗಳ ಗುರಿಯನ್ನು ನೀಡಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆತಿಥೇಯ ತಂಡ ನಿರ್ಧಾರ ಮಾಡಿತ್ತು. ಬೆಂಗಳೂರು ತಂಡವು 20 ಓವರ್ ಗಳಲ್ಲಿ 7 ವಿಕೆಟ್ ಗಳಿಗೆ 196 ರನ್ ಗಳಿಸಿದೆ. ಕೊನೆಯ ಓವರ್ ಬೌಲಿಂಗ್ ಮಾಡಿದ ಸ್ಯಾಮ್ ಕರನ್ ಅವರ ಎಸೆತದಲ್ಲಿ ಟಿಮ್ ಡೇವಿಡ್ ಸತತ ಮೂರು ಸಿಕ್ಸರ್ ಗಳನ್ನು ಬಾರಿಸಿ ಸ್ಕೋರ್ ಅನ್ನು 200 ರ ಸನಿಹ ತರಲು ನೆರವಾದರು. ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ನಾಯಕ ರಜತ್ ಪಾಟಿದಾರ್ 51 ರನ್ ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಫಿಲ್ ಸಾಲ್ಟ್ 32 ಮತ್ತು ವಿರಾಟ್ ಕೊಹ್ಲಿ 31 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 27 ರನ್ ಗಳ ಕೊಡುಗೆ ನೀಡಿದರು. ಚೆನ್ನೈ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದರು. ಮಥೀಶ್ ಪತಿರಾನಾ 2 ವಿಕೆಟ್ ಪಡೆದರು. ಖಲೀಲ್ ಅಹ್ಮದ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.
ಆರ್‌ಸಿಬಿ ಬಾರಿಸಿದ 196 ರನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಚೆಪಾಕ್ ಮೈದಾನದಲ್ಲಿ 2ನೇ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ 2012ರಲ್ಲಿ ಆರ್‌ಸಿಬಿ 205 ರನ್ ಬಾರಿಸಿತ್ತು. ಈ ಮೊತ್ತವನ್ನು ಚೆನ್ನೈ ಕೊನೇ ಎಸೆತದಲ್ಲಿ ಬೆನ್ನಟ್ಟಿ ಗೆಲುವು ಕಂಡಿತ್ತು. ಇದು ಈವರೆಗೂ ಚೆನ್ನೈನಲ್ಲಿ ತಂಡವೊಂದು ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ.
ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಮ್ಮ ಕೋಟಾದ ನಾಲ್ಕು ಓವರ್‌ಗಳನ್ನು ಪೂರ್ಣ ಮಾಡಲು ಸಾಧ್ಯವಾಗದೇ ಇರುವುದನ್ನು ನೋಡಿದರೆ, ಆರ್‌ಸಿಬಿ ಬ್ಯಾಟಿಂಗ್ ಭರ್ಜರಿಯಾಗಿತ್ತು ಅನ್ನೋದರ ಅಂದಾಜು ಸಿಗುತ್ತದೆ. ಫಿಲ್‌ಸಾಲ್ಟ್ ಆರಂಭ ಎಷ್ಟು ಅದ್ಭುತವಾಗಿತ್ತು ಎಂದರೆ, ಆರ್‌ಸಿಬಿಯ ಮೊದಲ 32 ರನ್‌ಗಳಲ್ಲಿ 30 ರನ್‌ಗಳು ಸಾಲ್ಟ್ ಅವರದ್ದೇ ಆಗಿದ್ದವು. ಇದು ಮೊದಲ ಮೂರು ಓವರ್‌ಗಳಲ್ಲಿಯೇ ಬಂದಿತ್ತು.ಈ ಅವಧಿಯಲ್ಲಿ ನೂರ್ ಕೆಲವೊಂದು ಕಠಿಣ ಓವರ್‌ಗಳನ್ನು ಮಾಡಿ ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಪವರ್‌ಪ್ಲೇಯ ಕೊನೇ ಎಸೆತದಲ್ಲಿ ಧೋನಿ ಮಿಂಚಿನ ಸ್ಟಂಪಿಂಗ್‌ಗೆ ಸಾಲ್ಟ್ ಔಟಾದ ಬಳಿಕ ಕ್ರೀಸ್‌ಗೆ ಇಳಿದ ಕನ್ನಡಿದ ದೇವದತ್ ಪಡಿಕ್ಕಲ್ ಉತ್ತಮ ಆರಂಭ ಕಂಡರು. ಜಡೇಜಾ ಎಸೆದ ಓವರ್‌ವೊಂದರಲ್ಲಿ 15 ರನ್ ಸಿಡಿಸಿದರೆ, ಅಶ್ವಿನ್ ಎಸೆದ ಮರು ಓವರ್‌ನಲ್ಲಿ ಔಟಾದರು. 10 ಓವರ್‌ಗಳ ಅಂತ್ಯದ ವೇಳೆಗೆ ಆರ್‌ಸಿಬಿ 93 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.
ಇನ್ನೊಂದೆಡೆ ಟೈಮಿಂಗ್ ಸಂಕಷ್ಟ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ 22 ಎಸೆತಗಳಲ್ಲಿ 16 ರನ್ ಬಾರಿಸಿದ್ದರು. ಈ ಹಂತದಲ್ಲಿ ಪಥಿರಣಗೆ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ ಲಯ ಕಂಡುಕೊಂಡರು ಎನ್ನುವಾಗವಲೇ, ನೂರ್ ಅಹ್ಮದ್ ಎಸೆತದಲ್ಲಿ ಸ್ಲಾಗ್ ಸ್ವೀಪ್ ಮಾಡುವ ಯತ್ನದಲ್ಲಿ ವಿಫಲರಾದರು.
ಆರ್‌ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಪಡೆಗೆ ಬಿಗ್ ಶಾಕ್?
ನಾಯಕ ರಜತ್ ಪಾಟೀದಾರ್ ತಮಗೆ ಸಿಕ್ಕ ಮೂರು ಜೀವದಾನದ ಲಾಭವನ್ನು ಪಡೆದುಕೊಂಡು ಆಕರ್ಷಕ ಅರ್ಧಶತಕ ಸಿಡಿಸಿದರೆ, ಜಿತೇಶ್ ಶರ್ಮ ಸಣ್ಣ ಇನ್ನಿಂಗ್ಸ್‌ಲ್ಲಿ ಗಮನಸೆಳೆದರು. ಇಬ್ಬರೂ ಕೆಲವೇ ರನ್ ಅಂತರದಲ್ಲಿ ಔಟಾದರೆ, 19ನೇ ಓವರ್‌ನಲ್ಲಿ ಪಥಿರಣ ಕೇವಲ 1 ರನ್ ನೀಡಿದರು. ಕೊನೇ ಓವರ್‌ನಲ್ಲಿ ಟಿಮ್ ಡೇವಿಡ್ ಮೂರು ಸಿಕ್ಸರ್ ಸಿಡಿಸಿ ಆರ್‌ಸಿಬಿ ಮೊತ್ತವನ್ನು 200ರ ಗಡಿಗೆ ತಂದರು.
ಯಾವ ತಂಡ ಐಪಿಎಲ್ 2025 ಟ್ರೋಫಿ ಗೆಲ್ಲಲಿದೆ? ಸ್ಫೋಟಕ ಭವಿಷ್ಯ ನುಡಿದ ಐಐಟಿ ಬಾಬ