
ಬೆಂಗಳೂರು: 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ಶುರುವಾಗಿವೆ. ಈ ಹಿಂದೆ ತಾವು ಮಾಡಿದ ಎಡವಟ್ಟಿನಿಂದ ಪಾಠ ಕಲಿತಂತಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಇದೀಗ ತನ್ನ ಯಶಸ್ವಿ ನಾಯಕ ರೋಹಿತ್ ಶರ್ಮಾಗೆ ಮತ್ತೆ ನಾಯಕತ್ವ ಪಟ್ಟ ಕಟ್ಟಲು ಒಲವು ತೋರಿದೆ ಎಂದು ವರದಿಯಾಗಿದೆ. ಈ ಮೊದಲು ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಐದು ಬಾರಿ ಐಪಿಎಲ್ ಟ್ರೋಫಿ ಜಯಿಸಿತ್ತು. ಹೀಗಿದ್ದೂ, 2024ರ ಐಪಿಎಲ್ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ಮುಂಬೈ ಫ್ರಾಂಚೈಸಿ ನಾಯಕತ್ವ ನೀಡಿತ್ತು.
ಐಪಿಎಲ್ ಕಂಡ ಅತ್ಯಂತ ಯಶಸ್ವಿ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ಇದೀಗ ಮತ್ತೊಮ್ಮೆ ಸಂಕಷ್ಟದ ಸಮಯದಲ್ಲಿ ನಾಯಕತ್ವ ವಹಿಸುವ ಸಾಧ್ಯತೆ ದಟ್ಟವಾಗಿದೆ. 2020ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಮುಂಬೈ ತಂಡವು ಹಳೆಯ ಖದರ್ಗೆ ಮರಳಲು ಪದೇ ಪದೇ ಎಡವುತ್ತಿದೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕರಾದ ಬಳಿಕ 2013,2015, 2017, 2019 ಹಾಗೂ 2020ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜತೆ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ. ಇನ್ನು ಎಂ ಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮತ್ತೊಮ್ಮೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಿ, ತನ್ನ ಗೆಲುವಿನ ಟ್ರ್ಯಾಕ್ಗೆ ಮರಳುವ ವಿಶ್ವಾಸದಲ್ಲಿದೆ.
ಅಂದಹಾಗೆ ಮುಂಬೈ ಇಂಡಿಯನ್ಸ್ ಮೂಲಕವೇ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ, 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇನ್ನು ಮರು ವರ್ಷ ಕೂಡಾ ಪಾಂಡ್ಯ ನೇತೃತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ ಫೈನಲ್ ಪ್ರವೇಶಿಸಿತ್ತು. ಇದರ ಬೆನ್ನಲ್ಲೇ 2024ರ ಐಪಿಎಲ್ಗೂ ಮುನ್ನ ರೋಹಿತ್ ಕೆಳಗಿಳಿಸಿ ಮುಂಬೈ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಕರೆ ತಂದು ಕ್ಯಾಪ್ಟನ್ ಪಟ್ಟ ನೀಡಿತ್ತು. ಪಾಂಡ್ಯ ನಾಯಕತ್ವದಲ್ಲಿ 2025ರ ಐಪಿಎಲ್ನಲ್ಲಿ ತಂಡ ಒಮ್ಮೆ ಪ್ಲೇ ಆಫ್ಗೇರಿದ್ದು ಬಿಟ್ಟರೇ, ಇನ್ನುಳಿದ ಎರಡು ವರ್ಷಗಳಲ್ಲಿ ಹೀನಾಯ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿತ್ತು. ಪಾಂಡ್ಯ ಇದೀಗ ಮುಂಬೈ ತಂಡವನ್ನು ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಂದಹಾಗೆ ಸದ್ಯದ ಡ್ಯಾಮೇಜ್ ಕಂಟ್ರೋಲ್ ಮಾಡುವ ಉದ್ದೇಶದಿಂದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ. ಯಾಕೆಂದರೆ 2027ರ ಐಪಿಎಲ್ ವೇಳೆಗೆ ರೋಹಿತ್ ಶರ್ಮಾ 40 ವರ್ಷಕ್ಕೆ ಕಾಲಿಡಲಿದ್ದಾರೆ. 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಹಿಟ್ಮ್ಯಾನ್ ಆ ಬಳಿಕ ಕ್ರಿಕೆಟ್ನಲ್ಲಿ ಮುಂದುವರೆಯುತ್ತಾರೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಹೀಗಾಗಿ ಮುಂದಿನ ಒಂದು ವರ್ಷ ರೋಹಿತ್ ಶರ್ಮಾಗೆ ನಾಯಕತ್ವ ನೀಡಿ ತಿಲಕ್ ವರ್ಮಾ ಅವರನ್ನು ಭವಿಷ್ಯದ ಕ್ಯಾಪ್ಟನ್ ಆಗಿ ಬೆಳೆಸುವ ಲೆಕ್ಕಾಚಾರವನ್ನು ಮುಂಬೈ ಫ್ರಾಂಚೈಸಿ ಹೊಂದಿದೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.