ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಪಾಲು
ಮಾರ್ಟಿನ್ ಗಪ್ಟಿಲ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಹಿಟ್‌ಮ್ಯಾನ್
ನಾಗ್ಪುರ(ಸೆ.24): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ಹೊಸ ದಾಖಲೆ ಬರೆದಿದ್ದಾರೆ. ಸ್ಪೋಟಕ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಅಮೋಘ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ನಾಗ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಕೇವಲ 20 ಎಸೆತಗಳಲ್ಲಿ ಅಜೇಯ 46 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಮಳೆಯಿಂದ ನೀರು ತೆರವು ಮಾಡುವಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಎರಡನೇ ಪಂದ್ಯವು ಎರಡೂವರೆ ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಹೀಗಾಗಿ 8 ಓವರ್‌ಗಳ ಪಂದ್ಯ ನಡೆಸಲು ತೀರ್ಮಾನಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 90 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ರೋಹಿತ್ ಶರ್ಮಾ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 46 ರನ್ ಸಿಡಿಸಿದರು. ರೋಹಿತ್ ಶರ್ಮಾ ಸದ್ಯ 176 ಸಿಕ್ಸರ್ ಸಿಡಿಸುವ ಮೂಲಕ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟರೆ, ನ್ಯೂಜಿಲೆಂಡ್ ಅನುಭವಿ ಬ್ಯಾಟರ್ ಮಾರ್ಟಿನ್ ಗಪ್ಟಿಲ್ 172 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಇದಾದ ನಂತರ ಕ್ರಿಸ್ ಗೇಲ್(124), ಇಯಾನ್ ಮಾರ್ಗನ್(120) ಹಾಗೂ ಆರೋನ್ ಫಿಂಚ್(119) ಕ್ರಮವಾಗಿ ಮೊದಲ 5 ಸ್ಥಾನ ಪಡೆದಿದ್ದಾರೆ.
Rohit Sharma now has the most sixes hit in T20Is 🚀 pic.twitter.com/kL2YRQxswU
— ESPNcricinfo (@ESPNcricinfo)ರೋಹಿತ್ ಶರ್ಮಾ ಒಟ್ಟು 138 ಅಂತಾರಾಷ್ಟ್ರೀಯ ಟಿ20 ಪಂದ್ಯಗಳ 130 ಇನಿಂಗ್ಸ್‌ಗಳನ್ನಾಡಿ 32.53ರ ಬ್ಯಾಟಿಂಗ್ ಸರಾಸರಿಯಲ್ಲಿ 28 ಅರ್ಧಶತಕ ಸಹಿತ 3,677 ರನ್ ಬಾರಿಸಿದ್ದಾರೆ. ಈ ಪೈಕಿ 1,056 ರನ್‌ಗಳು ಕೇವಲ ಸಿಕ್ಸರ್‌ಗಳಿಂದಲೇ ಬಂದಿವೆ. ಅಂದರೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗಳಿಸಿದ ಒಟ್ಟು ರನ್‌ಗಳ ಪೈಕಿ 28.71ರ ಪ್ರತಿಶತ ರನ್‌ಗಳು ಸಿಕ್ಸರ್‌ನಿಂದಲೇ ಬಂದಿರುವುದು ವಿಶೇಷ.
ಆಸ್ಟ್ರೇಲಿಯಾ ಬಗ್ಗುಬಡಿದು ಪಾಕ್ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ
ಇನ್ನು ಎರಡನೇ ಟಿ20 ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಅಕ್ಷರ್ ಪಟೇಲ್ ಮತ್ತೊಮ್ಮೆ ಶಾಕ್ ನೀಡಿದರು. ಇದರ ಹೊರತಾಗಿಯೂ ಆರೋನ್ ಫಿಂಚ್(31) ಹಾಗೂ ಮ್ಯಾಥ್ಯೂ ವೇಡ್(43*) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿತು. ಭಾರತ ಪರ ಅಕ್ಷರ್ ಪಟೇಲ್ 2 ಓವರ್ ಬೌಲಿಂಗ್ ಮಾಡಿ ಕೇವಲ 13 ರನ್ ನೀಡಿ 2 ವಿಕೆಟ್ ಪಡೆದರೆ, ವೇಗಿ ಜಸ್ಪ್ರೀತ್ ಬುಮ್ರಾ 2 ಓವರ್‌ನಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಭಾರತ ಮೊದಲ ಓವರ್‌ನಲ್ಲೇ 3 ಸಿಕ್ಸರ್ ಸಹಿತ 20 ರನ್ ಕಲೆಹಾಕಿತು. ಆಡಂ ಜಂಪಾ 16 ರನ್ ನೀಡಿ 3 ವಿಕೆಟ್ ಕಬಳಿಸಿದರಾದರೂ, ಟೀಂ ಇಂಡಿಯಾ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ.