* ಐಸಿಸಿ ವಾರ್ಷಿಕ ರ‍್ಯಾಂಕಿಂಗ್ ಪಟ್ಟಿ ಪ್ರಕಟ, ಟಿ20ಯಲ್ಲಿ ಭಾರತಕ್ಕೆ ನಂ.1 ಸ್ಥಾನ
* ರೋಹಿತ್ ಶರ್ಮಾ ನೇತೃತ್ವದಲ್ಲಿ ಅದ್ಭುತ ಪ್ರದರ್ಶನ ತೋರಿರುವ ಭಾರತ ಕ್ರಿಕೆಟ್ ತಂಡ
* ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ, ಏಕದಿನದಲ್ಲಿ ನ್ಯೂಜಿಲೆಂಡ್ ನಂ.1 ಸ್ಥಾನ
ದುಬೈ(ಮೇ.05): ಐಸಿಸಿ ವಾರ್ಷಿಕ ರ‍್ಯಾಂಕಿಂಗ್ (Annual ICC Men's Team Rankings) ಪಟ್ಟಿ ಪ್ರಕಟಗೊಂಡಿದ್ದು 2021-22ರ ಋುತುವನ್ನು ಭಾರತ ನಂ.1 ಟಿ20 ತಂಡವಾಗಿ ಮುಕ್ತಾಯಗೊಳಿಸಿದೆ. ಟೀಂ ಇಂಡಿಯಾ (Team India) ನೂತನ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಕ್ಯಾಪ್ಟನ್ಸಿಯಲ್ಲಿ ಅಭೂತಪೂರ್ವ ಸಾಧನೆ ತೋರುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ನಂ.1 ಸ್ಥಾನದೊಂದಿಗೆ 2021-22ರ ಋುತುವನ್ನು ಮುಗಿಸಿದೆ. 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ಗಿಂತ ಭಾರತ 5 ಅಂಕಗಳಿಂದ ಮುಂದಿದೆ.
ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸುವ ಮೂಲಕ ಲೀಗ್ ಹಂತದಿಂದಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ತವರಿನಲ್ಲಿ ನಡೆದ ಚುಟುಕು ಕ್ರಿಕೆಟ್ ಸರಣಿಗಳಲ್ಲಿ ರೋಹಿತ್ ಶರ್ಮಾ ಪಡೆ ಅಮೋಘ ಪ್ರದರ್ಶನ ತೋರಿತ್ತು. ರೋಹಿತ್ ಶರ್ಮಾ, ಟೀಂ ಇಂಡಿಯಾ ನಾಯಕರಾದ ಬಳಿಕ ತವರಿನಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಎದುರು ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿತ್ತು.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಾರ್ಷಿಕ ರ‍್ಯಾಂಕಿಂಗ್‌ನಲ್ಲಿ 270 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇದಾದ ಬಳಿಕ ಇಂಗ್ಲೆಂಡ್(265), ಪಾಕಿಸ್ತಾನ(261), ದಕ್ಷಿಣ ಆಫ್ರಿಕಾ(253) ಹಾಗೂ ಆಸ್ಟ್ರೇಲಿಯಾ(251) ಕ್ರಿಕೆಟ್ ತಂಡಗಳು ಮೊದಲ 5 ಸ್ಥಾನಗಳಲ್ಲಿ ಭದ್ರವಾಗಿವೆ. ಇನ್ನು ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು 250 ರೇಟಿಂಗ್ ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್(240), ಬಾಂಗ್ಲಾದೇಶ(233), ಶ್ರೀಲಂಕಾ(230) ಹಾಗೂ ಆಫ್ಘಾನಿಸ್ತಾನ(226) ತಂಡಗಳು ಕ್ರಮವಾಗಿ ಆನಂತರದ ಸ್ಥಾನಗಳನ್ನು ಪಡೆದಿವೆ.
ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ, ಏಕದಿನದಲ್ಲಿ ನ್ಯೂಜಿಲೆಂಡ್ ನಂ.1 ಸ್ಥಾನ
ಇದೇ ವೇಳೆ ಏಕದಿನ ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಮೊದಲ ಸ್ಥಾನ ಉಳಿಸಿಕೊಂಡಿದ್ದು, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಪ್ರೇಲಿಯಾ ನಂ.1 ಟೆಸ್ಟ್ ತಂಡ ಎನಿಸಿಕೊಂಡಿದೆ. ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕರಾದ ಬಳಿಕ ಕಾಂಗರೂ ಪಡೆ ಹೊಸ ಹುರುಪಿನೊಂದಿಗೆ ಮಿಂಚುತ್ತಿದ್ದು, ತವರಿನಲ್ಲಿ ನಡೆದ ಆಷಸ್ ಟೆಸ್ಟ್ ಸರಣಿ ಹಾಗೂ ಪಾಕಿಸ್ತಾನ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಜಯಿಸುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿತ್ತು. ಆಸ್ಟ್ರೇಲಿಯಾ ತಂಡವು 128 ರೇಟಿಂಗ್ ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ(119), ನ್ಯೂಜಿಲೆಂಡ್(111), ದಕ್ಷಿಣ ಆಫ್ರಿಕಾ(110) ಹಾಗೂ ಪಾಕಿಸ್ತಾನ ತಂಡಗಳು ಮೊದಲ 5 ಸ್ಥಾನದಲ್ಲಿವೆ.
IPL 2022: ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್ನಿಂದ ಇಬ್ಬರು ಔಟ್, ಮತ್ತಿಬ್ಬರಿಂದ ಫೈಟ್..!
ಇನ್ನು ಏಕದಿನ ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ 125 ರೇಟಿಂಗ್ ಅಂಕಗಳನ್ನು ಹೊಂದಿರುವ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಮೊದಲ ಸ್ಥಾನದಲ್ಲಿ ಭದ್ರವಾಗಿದ್ದರೆ, ಕೇವಲ ಒಂದು ಅಂಕದಿಂದ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ(107), ಭಾರತ(105) ಹಾಗೂ ಪಾಕಿಸ್ತಾನ(102) ಕ್ರಿಕೆಟ್ ತಂಡಗಳು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿವೆ.