ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್‌ಗೆ ಅವರದ್ದೇ ಲ್ಯಾಂಬೊರ್ಗಿನಿ ಕಾರು ಗ್ಲಾಸ್ ಪುಡಿ-ಪುಡಿ! ವಿಡಿಯೋ ವೈರಲ್

Published : Oct 11, 2025, 11:53 AM IST
Rohit Sharma practices

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಅಭ್ಯಾಸ ನಡೆಸಿದರು. ಈ ವೇಳೆ ಅವರು ಬಾರಿಸಿದ ಸಿಕ್ಸರ್‌ವೊಂದು ಅವರದ್ದೇ ಐಷಾರಾಮಿ ಕಾರಿಗೆ ಬಡಿದಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ, ಇಲ್ಲಿನ ಐತಿಹಾಸಿಕ ಶಿವಾಜಿ ಪಾರ್ಕ್ ಮೈದಾನದಲ್ಲಿ ಅಭ್ಯಾಸ ನಡೆಸಿದರು. ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡರೂ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಅವರನ್ನು ಆರಂಭಿಕ ಆಟಗಾರನಾಗಿ ಉಳಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ 19ರಂದು ಪರ್ತ್‌ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಶುಭ್‌ಮನ್ ಗಿಲ್ ನಾಯಕರಾಗಿ ನೇಮಕವಾಗಿದ್ದು, ಶ್ರೇಯಸ್ ಅಯ್ಯರ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

ತಮ್ಮದೇ ಕಾರಿಗೆ ಹೊಡೆದ ರೋಹಿತ್ ಶರ್ಮಾ

ಇನ್ನು ಚಾಂಪಿಯನ್ಸ್ ಟ್ರೋಫಿ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿರುವ ರೋಹಿತ್ ಶರ್ಮಾ, ಶಿವಾಜಿ ಪಾರ್ಕ್‌ನಲ್ಲಿ ಭರ್ಜರಿಯಾಗಿ ಅಭ್ಯಾಸ ನಡೆಸಿದ್ದಾರೆ. ಈ ವೇಳೆ ಬೌಲರ್‌ಗಳ ಚೆಂಡನ್ನು ನಾನಾ ದಿಕ್ಕುಗಳಿಗೆ ಅಟ್ಟಿದರು. ರೋಹಿತ್ ಶರ್ಮಾ ಆಕರ್ಷಕ ಕವರ್‌ ಡ್ರೈವ್ ಹಾಗೂ ಸ್ವೀಪ್ ಶಾಟ್‌ ಬಾರಿಸುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಈ ವೇಳೆ ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್‌ವೊಂದು ಅವರ ಐಶಾರಾಮಿ ಕಾರಿಗೆ ಅಪ್ಪಳಿಸಿದೆ ಎಂದು ವರದಿಯಾಗಿದೆ. ಈ ಕುರಿತಂತೆ ರೋಹಿತ್ ಶರ್ಮಾ ಬ್ಯಾಟಿಂಗ್ ಪ್ರಾಕ್ಟೀಸ್ ವಿಡಿಯೋ ಮಾಡುತ್ತಿದ್ದ ಅಭಿಮಾನಿಯೊಬ್ಬ, ತಮ್ಮದೇ ಕಾರು ಒಡೆದುಕೊಂಡರಲ್ಲ ಎಂದು ಹೇಳುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ರೋಹಿತ್ ಶರ್ಮಾಗೆ ಬಾಡಿ ಗಾರ್ಡ್ ಆದ ಅಭಿಷೇಕ್ ನಾಯರ್

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಮುಂಬೈನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ಇಳಿದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾರನ್ನು ಅಭಿಮಾನಿಗಳು ಸುತ್ತುವರೆದಿದ್ದಾರೆ. ಅಭ್ಯಾಸ ಮುಗಿಸಿ ವಾಪಸಾಗುತ್ತಿದ್ದ ರೋಹಿತ್‌ಗಾಗಿ ನೂರಾರು ಅಭಿಮಾನಿಗಳು ಶಿವಾಜಿ ಪಾರ್ಕ್‌ನ ಹೊರಗೆ ಕಾಯುತ್ತಿದ್ದರು. ಟೀಂ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್, ರೋಹಿತ್‌ಗಿಂತ ಮೊದಲು ಮೈದಾನದಿಂದ ಹೊರಬಂದರು.

ಹೊರಗಡೆ ಸೇರಿದ್ದ ಅಭಿಮಾನಿಗಳ ಗುಂಪನ್ನು ನೋಡಿದ ಅಭಿಷೇಕ್ ನಾಯರ್, ನಾವೆಲ್ಲರೂ ರೋಹಿತ್ ಅಭಿಮಾನಿಗಳೇ, ಆದರೆ ಅವರು ತಮ್ಮ ಕಾರಿನ ಬಳಿ ಸುರಕ್ಷಿತವಾಗಿ ಹೋಗಲು ದಾರಿ ಮಾಡಿಕೊಡಬೇಕು, ಯಾರೂ ಅವರನ್ನು ತಳ್ಳಬಾರದು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. ಇದರ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಜೊತೆ ರೋಹಿತ್ ಬಂದಾಗ, ಅವರನ್ನು ನೋಡಲು ಜನಸಮೂಹ ನೂಕುನುಗ್ಗಲು ಉಂಟಾಯಿತು. ಆದರೂ ಭದ್ರತಾ ಸಿಬ್ಬಂದಿ ಕಷ್ಟಪಟ್ಟು ರೋಹಿತ್ ಅವರನ್ನು ಕಾರಿನ ಬಳಿ ತಲುಪಿಸಿದರು.

 

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಭಿಷೇಕ್ ನಾಯರ್ ಜೊತೆ ಸುಮಾರು ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದ ನಂತರ ರೋಹಿತ್ ವಾಪಸಾದರು. ಮುಂಬೈ ಆಟಗಾರ ಅಂಗ್‌ಕೃಷ್ ರಘುವಂಶಿ ಸೇರಿದಂತೆ ಹಲವು ಆಟಗಾರರು ಶಿವಾಜಿ ಪಾರ್ಕ್‌ನಲ್ಲಿ ರೋಹಿತ್ ಜೊತೆ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.

ಚಾಂಪಿಯನ್ಸ್ ಟ್ರೋಫಿ ಬಳಿಕ ಮೊದಲ ಬಾರಿ ಭಾರತ ಪರ ರೋಹಿತ್ ಕಣಕ್ಕೆ

ಈ ವರ್ಷದ ಆರಂಭದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಕೊನೆಯ ಬಾರಿಗೆ ಭಾರತ ಪರ ಆಡಿದ್ದರು. ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ನಾಯಕರಾಗಿದ್ದ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಶುಭಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸಿತ್ತು. ಇತ್ತೀಚೆಗೆ ರೋಹಿತ್ 10 ಕೆಜಿ ತೂಕ ಇಳಿಸಿಕೊಂಡು ಹೆಚ್ಚು ಫಿಟ್ ಆಗಿರುವ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ರೋಹಿತ್ ಶರ್ಮಾ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಭಾರತ ತಂಡದ ಭಾಗವಾಗಿರುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ