ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಶತಕ ವ್ಯರ್ಥ; ಏಕದಿನ ಸರಣಿಯನ್ನೂ ಸೋತ ಟೀಂ ಇಂಡಿಯಾ!

Published : Jul 19, 2026, 11:51 PM IST
IND vs ENG

ಸಾರಾಂಶ

ಇಂಗ್ಲೆಂಡ್ ನೀಡಿದ 388 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ, ರೋಹಿತ್ ಶರ್ಮಾ ಅವರ ಸ್ಪೋಟಕ ಶತಕ ಹಾಗೂ ಗಿಲ್, ಕೊಹ್ಲಿ ಅರ್ಧಶತಕದ ಹೊರತಾಗಿಯೂ ಸೋಲನುಭವಿಸಿತು. ಈ ಮೂಲಕ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ 27 ರನ್‌ಗಳ ಜಯ ಸಾಧಿಸಿದ ಇಂಗ್ಲೆಂಡ್, 2-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ಲಂಡನ್: ರೋಹಿತ್ ಶರ್ಮಾ ಸ್ಪೋಟಕ ಶತಕ, ನಾಯಕ ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದ ಹೊರತಾಗಿಯೂ ಇಂಗ್ಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 27 ರನ್‌ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಈ ಮೊದಲು ಟಿ20 ಸರಣಿಯನ್ನು 4-0 ಅಂತರದಲ್ಲಿ ಸೋತಿದ್ದ ಭಾರತ, ಇದೀಗ ಏಕದಿನ ಸರಣಿಯನ್ನೂ ಕೈಚೆಲ್ಲಿದೆ.

ಇಲ್ಲಿನ ಲಾರ್ಡ್ಸ್‌ ಮೈದಾನದಲ್ಲಿ ಗೆಲ್ಲಲು ಬರೋಬ್ಬರಿ 388 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಶುಭ್‌ಮನ್ ಗಿಲ್ ಹಾಗೂ ರೋಹಿತ್ ಶರ್ಮಾ 147 ರನ್‌ಗಳ ಜತೆಯಾಟವಾಡುವ ಉತ್ತಮ ಆರಂಭ ಒದಗಿಸಿಕೊಟ್ಟರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಗಿಲ್ 84 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 77 ರನ್ ಸಿಡಿಸಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು.

ಲಾರ್ಡ್ಸ್‌ ಮೈದಾನದಲ್ಲಿ ರೊ-ಕೊ ಜುಗಲ್ಬಂದಿ:

ಗಿಲ್ ವಿಕೆಟ್ ಪತನದ ಬಳಿಕ ಜತೆಯಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಮತ್ತೆ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ 86 ಎಸೆತಗಳಲ್ಲಿ 113 ರನ್‌ಗಳ ಜತೆಯಾಟವಾಡಿತು. ಮೊದಲೆರಡು ಏಕದಿನ ಪಂದ್ಯದಲ್ಲಿಗಳಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದ ರೋಹಿತ್ ಶರ್ಮಾ ಲಾರ್ಡ್ಸ್‌ ಮೈದಾನದಲ್ಲಿ ಕೆಚ್ಚೆದೆಯ ಶತಕ ಸಿಡಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 110 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 138 ರನ್ ಸಿಡಿಸಿ ಜೇಕಬ್ ಬೆಥೆಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 74 ರನ್ ಸಿಡಿಸಿ ಸ್ಯಾಮ್ ಕರ್ರನ್‌ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪತನವಾಗುತ್ತಿದ್ದಂತೆಯೇ ಟೀಂ ಇಂಡಿಯಾ ಸೋಲಿನತ್ತ ಮುಖ ಮಾಡಿತು. ಕೊನೆಯಲ್ಲಿ ಇಶಾನ್ ಕಿಶನ್(14), ಶ್ರೇಯಸ್ ಅಯ್ಯರ್(0), ಕೆ ಎಲ್ ರಾಹುಲ್(12) ಹಾಗೂ ಅಕ್ಷರ್ ಪಟೇಲ್(2) ಜವಾಬ್ದಾರಿಯುತ ಅಟವಾಡಲು ವಿಫಲವಾದರು.

ಇಂಗ್ಲೆಂಡ್ ಪರ ಚಾಣಾಕ್ಷ ದಾಳಿ ನಡೆಸಿದ ಸ್ಯಾಮ್ ಕರ್ರನ್ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಇಂಗ್ಲೆಂಡ್ ಪರ ವಾಲುವಂತೆ ಮಾಡಿದರು.

ಬೃಹತ್ ಮೊತ್ತ ಕಲೆಹಾಕಿದ ಇಂಗ್ಲೆಂಡ್

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಆತಿಥೇಯ ಇಂಗ್ಲೆಂಡ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಬೆನ್ ಡಕೆಟ್ ಹಾಗೂ ಜೇಕಬ್ ಬೆಥೆಲ್ ಬರೋಬ್ಬರಿ 30.1 ಓವರ್‌ಗಳನ್ನಾಡಿ ಮೊದಲ ವಿಕೆಟ್‌ಗೆ ದಾಖಲೆಯ 192 ರನ್‌ಗಳ ಜತೆಯಾಟವಾಡಿತು. ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ದೊಡ್ಡ ಆರಂಭಿಕ ಜತೆಯಾಟವಾಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕನ್ನಡಿಗ ವೇಗಿ ಪ್ರಸಿದ್ದ್ ಕೃಷ್ಣ ಯಶಸ್ವಿಯಾದರು. 93 ಎಸೆತಗಳಲ್ಲಿ 91 ರನ್ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಜೇಕಬ್ ಬೆಥೆಲ್ ಅವರನ್ನು ಬಲಿಪಡೆಯುವಲ್ಲಿ ಪ್ರಸಿದ್ದ್ ಯಶಸ್ವಿಯಾದರು.

ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಜೋ ರೂಟ್ ಹಾಗೂ ಬೆನ್ ಡಕೆಟ್‌ ಮತ್ತೊಂದು ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 101 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಸಮೀಪ ಕೊಂಡೊಯ್ದರು. ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಬೆನ್ ಡಕೆಟ್ 135 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 141 ರನ್ ಬಾರಿಸಿ ಪ್ರಿನ್ಸ್‌ ಯಾದವ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ನಾಯಕ ಹ್ಯಾರಿ ಬ್ರೂಕ್ 14 ರನ್ ಗಳಿಸಿ ಪ್ರಸಿದ್ದ್‌ಗೆ ಎರಡನೇ ಬಲಿಯಾದರು. ಆದರೆ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜೋ ರೂಟ್ 48 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ ಅಜೇಯ 74 ರನ್ ಸಿಡಿಸಿದರು. ಈ ಮೂಲಕ ಭಾರತ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿ 3 ಪಂದ್ಯದಲ್ಲೂ ಅಜೇಯರಾಗುಳಿದರು. ಇನ್ನು ಕೊನೆಯಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಜೋಸ್ ಬಟ್ಲರ್ ಕೇವಲ 13 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 41 ರನ್ ಸಿಡಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Rohit Sharma: ಲಾರ್ಡ್ಸ್ ಮೈದಾನದಲ್ಲಿ ‘ಹಿಟ್‌ಮ್ಯಾನ್’ ಹಿಸ್ಟರಿ: ಶತಕ ಚಚ್ಚಿ ಸೌರವ್ ಗಂಗೂಲಿ ದಾಖಲೆ ಧೂಳೀಪಟ ಮಾಡಿದ ರೋಹಿತ್ ಶರ್ಮಾ!
ಲಾರ್ಡ್ಸ್‌ನಲ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದ ರೋಹಿತ್ ಶರ್ಮಾ! ಹಿಟ್‌ಮ್ಯಾನ್ ಶತಕ ಕಂಡು ಎದ್ದು ನಿಂತು ಸಂಭ್ರಮಿಸಿದ ಗಂಭೀರ್