T20 World Cup: ಮೂರನೇ ವೇಗಿಯ ಸ್ಥಾನಕ್ಕೆ ಇಬ್ಬರು ಬೌಲರ್‌ಗಳ ನಡುವೆ ಪೈಪೋಟಿಯಿದೆ: ರಾಬಿನ್‌ ಉತ್ತಪ್ಪ

By Naveen Kodase  |  First Published Oct 16, 2022, 5:22 PM IST

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾದಲ್ಲಿ ಭರ್ಜರಿ ಚಾಲನೆ
* ಟೀಂ ಇಂಡಿಯಾ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ
* ಮೂರನೇ ವೇಗಿಯ ರೂಪದಲ್ಲಿ ಸ್ಥಾನ ಪಡೆಯಲು ಇಬ್ಬರು ಆಟಗಾರರ ನಡುವೆ ಪೈಪೋಟಿ


ಬೆಂಗಳೂರು(ಅ.16): ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಚಾಲನೆ ದೊರಕಿದ್ದು, ಉದ್ಘಾಟನಾ ಪಂದ್ಯದಲ್ಲಿ ಏಷ್ಯಾಕಪ್ ಚಾಂಪಿಯನ್‌ ಶ್ರೀಲಂಕಾವನ್ನು ಮಣಿಸುವಲ್ಲಿ ನಮೀಬಿಯಾ ತಂಡವು ಯಶಸ್ವಿಯಾಗಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಬಳಿಕ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿವೆ. 

ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಹೊರಬಿದ್ದಿರುವ ಬೆನ್ನಲ್ಲೇ ಶುಕ್ರವಾರವಷ್ಟೇ ಬಿಸಿಸಿಐ ಬುಮ್ರಾಗೆ ಬದಲಿ ಆಟಗಾರನ ರೂಪದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಮಣೆಹಾಕಿದೆ. ಹೀಗಾಗಿ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾವೆಲ್ಲಾಆಟಗಾರರು ವೇಗಿಗಳ ರೂಪದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ ಎನ್ನುವುದರ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಆರ್ಶದೀಪ್ ಸಿಂಗ್ ಸಹಜವಾಗಿಯೇ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್‌ ಪಟೇಲ್ ಈ ಇಬ್ಬರ ನಡುವೆ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Latest Videos

undefined

T20 World Cup: ಜಗತ್ತಿನಾದ್ಯಂತ ಇಂದಿನಿಂದ ಟಿ20 ಜ್ವರ..!

ಹಾರ್ದಿಕ್ ಪಾಂಡ್ಯ ತಂಡದ ಜತೆಗಿದ್ದಾಗ ಎಷ್ಟು ಜನ ತಜ್ಞ ವೇಗದ ಬೌಲರ್‌ಗಳೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ ಎನ್ನುವುದು ಮುಖ್ಯವಾಗುತ್ತದೆ. ನನ್ನ ಪ್ರಕಾರ ಹೇಳುವುದಾದರೆ, ಆರ್ಶದೀಪ್ ಸಿಂಗ್, ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್‌ ಪಟೇಲ್‌ ಇಬ್ಬರ ನಡುವೆ ಮೂರನೇ ವೇಗಿಯ ರೂಪದಲ್ಲಿ ಸ್ಥಾನ ಪಡೆಯಲು ಪೈಪೋಟಿ ಏರ್ಪಡಲಿದೆ ಎಂದು ರಾಬಿನ್‌ ಉತ್ತಪ್ಪ ಹೇಳಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ಬಂದಿಳಿದೆ. ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ, ಅಕ್ಟೋಬರ್ 17 ಹಾಗೂ 19ರಂದು ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ದ ಅಭ್ಯಾಸ ಪಂದ್ಯಗಳನ್ನಾಡಲಿದೆ.

ಟಿ20 ವಿಶ್ವಕಪ್ ವಿಶ್ವಕಪ್‌ ಟೂರ್ನಿಗೆ ಪರಿಷ್ಕೃತ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ

ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್(ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಶದೀಪ್ ಸಿಂಗ್, ಮೊಹಮ್ಮದ್ ಶಮಿ.

 

click me!