T20 World Cup: ಏಷ್ಯಾಕಪ್ ಚಾಂಪಿಯನ್‌ ಲಂಕಾಗೆ ಮರ್ಮಾಘಾತ, ನಮೀಬಿಯಾಗೆ ಭರ್ಜರಿ ಜಯ

By Naveen Kodase  |  First Published Oct 16, 2022, 12:56 PM IST

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮೀಬಿಯಾ ಶುಭಾರಂಭ
ಏಷ್ಯಾಕಪ್ ಚಾಂಪಿಯನ್ ಲಂಕಾವನ್ನು 55 ರನ್‌ಗಳಿಂದ ಮಣಿಸಿದ ನಮೀಬಿಯಾ
ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ ನಮೀಬಿಯಾ ತಂಡ


ಗೀಲಾಂಗ್‌(ಅ.16): ಕಳೆದ ತಿಂಗಳಷ್ಟೇ ಏಷ್ಯಾಕಪ್ ಗೆದ್ದು ಬೀಗಿದ್ದ ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನಮೀಬಿಯಾ ಸೋಲಿನ ಶಾಕ್ ನೀಡಿದೆ. ನಮೀಬಿಯಾ ನೀಡಿದ್ದ 164 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು 108 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ನಮೀಬಿಯಾ ತಂಡವು 56 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ಸೈಮಂಡ್ಸ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪಥುಮ್ ನಿಸ್ಸಾಂಕ(9) ಹಾಗೂ ಕುಸಾಲ್ ಮೆಂಡಿಸ್(6) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ದನುಷ್ಕಾ ಗುಣತಿಲಕ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಲಂಕಾ ತಂಡವು 21 ರನ್‌ ಗಳಿಸುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಇದಾದ ಬಳಿಕ ಧನಂಜಯ ಡಿಸಿಲ್ವಾ(12), ಭನುಕಾ ರಾಜಪಕ್ಸಾ(20) ಹಾಗೂ ನಾಯಕ ದಶುನ್ ಶನಕ(29) ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರಾದರೂ, ತಮಗೆ ಸಿಕ್ಕ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು. 

Latest Videos

undefined

T20 World Cup: ಶ್ರೀಲಂಕಾಗೆ ಸ್ಪರ್ಧಾತ್ಮಕ ಗುರಿ ನೀಡಿ ನಮೀಬಿಯಾ

ಇನ್ನು ಆಲ್ರೌಂಡರ್ ವನಿಂದು ಹಸರಂಗ(4). ಚಮಿಕ ಕರುಣರತ್ನೆ(5) ಕೂಡಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲವಾದರು. ಇನ್ನು ಲಂಕಾದ ಬಾಲಂಗೋಚಿಗಳು ಅಪಾಯಕಾರಿಯಾಗದಂತೆ ನೋಡಿಕೊಳ್ಳುವಲ್ಲಿ ನಮೀಬಿಯಾ ಬೌಲರ್‌ಗಳು ಯಶಸ್ವಿಯಾದರು.

A historic win for Namibia 🔥 | | 📝 https://t.co/vuNGEcX62U pic.twitter.com/AvCsiz9X7K

— ICC (@ICC)

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ತಂಡವು, ಲಂಕಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿ ಹೋಯಿತು. ಆರಂಭದಿಂದಲೇ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ನಮೀಬಿಯಾ ತಂಡವು ಒಂದು ಹಂತದಲ್ಲಿ 14.2 ಓವರ್‌ಗಳಲ್ಲಿ 93 ರನ್‌ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಜಾನ್‌ ಪ್ರೈಲಿಂಕ್‌ ಹಾಗೂ ಜೆಜೆ ಸ್ಮಿತ್ 34 ಎಸೆತಗಳಲ್ಲಿ 69 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಜಾನ್‌ ಪ್ರೈಲಿಂಕ್‌ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್‌ ಬಾರಿಸಿ ರನೌಟ್ ಆದರು. ಇನ್ನು ಮತ್ತೊಂದು ತುದಿಯಲ್ಲಿ ಜೆಜೆ ಸ್ಮಿತ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

click me!