
ಲಖನೌ (ಮೇ.29) ಐಪಿಎಲ್ ಟೂರ್ನಿ ಅಂತಿಮ ಘಟ್ಟದಲ್ಲಿದೆ. ಇದರ ನಡುವೆ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. 14 ಲೀಗ್ ಪಂದ್ಯದಲ್ಲಿ ಕೇವಲ 4 ಪಂದ್ಯ ಗೆದ್ದು 10ನೇ ಸ್ಥಾನದಲ್ಲಿದೆ. ಪ್ರತಿ ಸೋಲಿನ ಬಳಿಕ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಹಾಗೂ ನಾಯಕನ ನಡುವಿನ ಮಾತುಕತೆ, ಆಕ್ರೋಶಗಳು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಜೊತೆಗೆ ಟೀಕೆಗಳನ್ನು ಎದುರಿಸಿದೆ. ಈ ಬೆಳವಣಿಗೆ ನಡುವೆ ಇದೀಗ ತಂಡದ ನಾಯಕತ್ವದಿಂದ ರಿಷಬ್ ಪಂತ್ ಹಿಂದೆ ಸರಿದಿದ್ದಾರೆ.
ತೀವ್ರ ಟೀಕೆಗಳಿಂದ ಕಂಗೆಟ್ಟ ರಿಷಬ್ ಪಂತ್ ತಾವು ಲಖನೌ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಫ್ರಾಂಚೈಸಿ ಹಾಗೂ ತಂಡದ ಮ್ಯಾನೇಜ್ಮೆಂಟ್‌ಗೆ ಸೂಚಿಸಿದ್ದಾರೆ. ಇತ್ತ ಇದನ್ನೇ ಕಾಯುತ್ತಿದ್ದ ಲಖನೌ ಸೂಪರ್ ಜೈಂಟ್ಸ್ ತಕ್ಷಣವೇ ರಿಷಬ್ ಪಂತ್ ರಾಜೀನಾಮೆಯನ್ನು ಸ್ವೀಕರಿಸಿದೆ.
ಲಖನೌ ಸೂಪರ್ ಜೈಂಟ್ಸ್ ತಂಡ ಈ ಮೂಲಕ ಮಹತ್ವದ ಘೋಷಣೆ ಮಾಡುತ್ತಿದೆ. ತಂಡದ ನಾಯಕತ್ವದಿಂದ ತಾನು ಹಿಂದೆ ಸರಿಯುತ್ತಿದ್ದೇನೆ. ನಾಯಕತ್ವ ಜವಾಬ್ದಾರಿಯಿಂದ ಮುಕ್ತಿಗೊಳಿಸಬೇಕಾಗಿ ರಿಷಬ್ ಪಂತ್ ಮನವಿ ಮಾಡಿದ್ದರು. ಈ ಮನವಿಯನ್ನು ಫ್ರಾಂಚೈಸಿ ಸ್ವೀಕರಿಸಿದೆ ಎಂದು ಲಖನೌ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಟಾಮ್ ಮೂಡಿ ಹೇಳಿದ್ದಾರೆ.
ರಿಷಬ್ ಪಂತ್ ಅತ್ಯಂತ ಗೌರವಯುತವಾಗಿ ತಂಡದ ಮ್ಯಾನೇಜ್ಮೆಂಟ್ ಬಳಿ ನಾಯಕತ್ವದಿಂದ ಮುಕ್ತಿಗೊಳಿಸಬೇಕಾಗಿ ಮನವಿ ಮಾಡಿದ್ದರು. ರಿಷಬ್ ಪಂತ್ ಮನವಿ ಸ್ವೀಕರಿಸುವುದು ತಂಡಕ್ಕೆ ಸುಲಭದ ದಾರಿಯಾಗಿರಲಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸಿದ ರೀತಿ, ತಂಡದ ಡ್ರೆಸ್ಸಿಂಗ್ ರೂಂನಲ್ಲಿನ ಉತ್ತಮ ಸಂಸ್ಕೃತಿ ಸೇರಿದಂತೆ ರಿಷಬ್ ಕೊಡುಗೆಗೆ ಫ್ರಾಂಚೈಸಿ ಋಣಿಯಾಗಿದೆ. ಇದೀಗ ತಂಡವನ್ನು ಮತ್ತಷ್ಟು ಉತ್ತಮವಾಗಿ ಕಟ್ಟುತ್ತೇವೆ ಎಂದು ಟಾಮ್ ಮೂಡಿ ಹೇಳಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ಐಪಿಎಲ್ ಹರಾಜಿನಲ್ಲಿ ರಿಷಬ್ ಪಂತ್‌ಗೆ ದುಬಾರಿ ಮೊತ್ತ ನೀಡಿದೆ. ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ರಿಷಬ್ ಪಂತ್ ಖರೀದಿಸಿತ್ತು. ಹೊಸ ತಂಡ ಕಟ್ಟುವ ಕಾರಣ ದುಬಾರಿ ಮೊತ್ತ ನೀಡಿ ಪಂತ್ ಖರೀದಿಸಿದ ಲಖನೌ ಸೂಪರ್ ಜೈಂಟ್ಸ್ ಹಣೆಬರಹ ಬದಲಾಗಲಿಲ್ಲ. ಈ ಬಾರಿ ಕೇವಲ 4 ಪಂದ್ಯ ಮಾತ್ರ ಗೆದ್ದು ಕೊನೆಯ ಸ್ಥಾನ ಪಡೆದಿದೆ. ರಿಷಬ್ ಪಂತ್ ನಾಯಕನಾಗಿ, ಬ್ಯಾಟರ್ ಆಗಿ ಈ ಐಪಿಎಲ್ ಟೂರ್ನಿಯಲ್ಲಿ ವಿಫಲರಾಗಿದ್ದಾರೆ.
ರಿಷಬ್ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಕಾರಣ ಇದೀಗ ಮುಂದಿನ ನಾಯಕ ಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಈ ಬಾರಿ ಲಖನೌ ಸೂಪರ್ ಜೈಂಟ್ಸ್ ನಾಯಕತ್ವನ್ನು ವಿದೇಶಿ ಕ್ರಿಕೆಟಿಗರಿಗೆ ನೀಡಲು ಮುಂದಾಗಿದೆ. ಸೌತ್ ಆಪ್ರಿಕಾ ಟಿ20 ನಾಯಕ ಆ್ಯಡಿನ್ ಮಾರ್ಕ್ರಮ್ ಹಾಗೂ ಆಸ್ಟ್ರೇಲಿಯಾ ಟಿ20 ನಾಯಕ ಮಿಚೆಲ್ ಮಾರ್ಶ್ ಮುಂಚೂಣಿಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.